ಜಕಾರ್ತಾ: “ಇಂಡೋನೇಷ್ಯಾ ಓಪನ್ ವರ್ಲ್ಡ್ ಟೂರ್ ಸೂಪರ್-1000′ ಬ್ಯಾಡ್ಮಿಂಟನ್ ಪಂದ್ಯಾವಳಿ “ಆಲ್ ಇಂಡಿಯನ್’ ಹೋರಾಟವೊಂದಕ್ಕೆ ಅಣಿಯಾಗಿದೆ. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಲಕ್ಷ್ಯ ಸೇನ್ ಮತ್ತು ಕೆ. ಶ್ರೀಕಾಂತ್ ಮುಖಾಮುಖಿ ಆಗಲಿದ್ದಾರೆ.
ಬುಧವಾರದ ಮೊದಲ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ ಸೇನ್ ತನಗಿಂತ ಮೇಲಿನ ರ್‍ಯಾಂಕಿಂಗ್ ಹೊಂದಿರುವ ಮಲೇಷ್ಯಾದ ಲೀ ಜೀ ಜಿಯಾ ಅವರನ್ನು ಕೇವಲ 33 ನಿಮಿಷಗಳಲ್ಲಿ 21-13, 21-17ರಿಂದ ಮಣಿಸಿದರು. 2022ರ ಥಾಮಸ್ ಕಪ್ ಟೂರ್ನಿಯ ಬಳಿಕ ಇವರಿಬ್ಬರು ಮುಖಾಮುಖೀಯಾದ ಮೊದಲ ನಿದರ್ಶನ ಇದಾಗಿದೆ.
ಅಲ್ಲಿ ಲಕ್ಷ್ಯ ಸೇನ್ ಸೋಲನುಭವಿಸಿದ್ದರು. ಒಟ್ಟಾರೆಯಾಗಿ ಈ ಮಲೇಷ್ಯನ್ ಶಟ್ಲರ್ ವಿರುದ್ಧ ಲಕ್ಷ್ಯ ಸೇನ್ 3-1 ಮುನ್ನಡೆ ಹೊಂದಿದಂತಾಯಿತು.
ದಿನದ ಇನ್ನೊಂದು ಪಂದ್ಯದಲ್ಲಿ ಕೆ. ಶ್ರೀಕಾಂತ್ 21-13, 12-19ರಿಂದ ಚೀನದ ಲು ಗುವಾಂಗ್ ಜು ಅವರನ್ನು ಮಣಿಸಿದರು. ಇವರಿಬ್ಬರ ಹೋರಾಟ 46 ನಿಮಿಷಗಳ ತನಕ ಸಾಗಿತು.
ಅರ್ಹತಾ ಸುತ್ತಿನ ಮೂಲಕ ಬಂದ ಪ್ರಿಯಾಂಶು ರಾಜಾವತ್ ಅವರಿಗೆ ಮೊದಲ ಸುತ್ತಿನಲ್ಲಿ ವಾಕ್ ಓವರ್ ಲಭಿಸಿದೆ. ಥಾಯ್ಲೆಂಡ್ ಎದುರಾಳಿ ಕುನವುತ್ ವಿತಿದ್ಸಣ್ ಗಾಯಾಳಾಗಿ ಹಿಂದೆ ಸರಿದುದೇ ಇದಕ್ಕೆ ಕಾರಣ. ಆ್ಯಂಟನಿ ಸಿನಿಸುಕ ಗಿಂಟಿಂಗ್-ಹಾನ್ಸ್ ಕ್ರಿಸ್ಟಿಯನ್ ವಿಟ್ಟಿಂಗಸ್ ನಡುವಿನ ವಿಜೇತರನ್ನು ರಾಜಾವತ್ ಎದುರಿಸಲಿದ್ದಾರೆ.
ವನಿತಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಕೊರಿಯಾದ ಅನ್ ಸೆ ಯಂಗ್ ಅವರಿಗೆ ಸಾಟಿಯಾಗಲಿಲ್ಲ. ಸತತವಾಗಿ ಥಾಯ್ಲೆಂಡ್ ಓಪನ್, ಸಿಂಗಾಪುರ್ ಓಪನ್ ಪ್ರಶಸ್ತಿ ಜಯಿಸಿ ಪ್ರಚಂಡ ಫಾರ್ಮ್ ಕಂಡುಕೊಂಡಿರುವ ಯಂಗ್ ವಿರುದ್ಧ ಆಕರ್ಷಿ 10-21, 4-21 ಅಂತರದ ಸೋಲುಂಡರು.