ಸಂಚಿಯೋನ್: ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತ ಲಕ್ಷ್ಯ ಸೆನ್ ಮತ್ತು ಮಾಳವಿಕಾ ಬನ್ಸೂದ್ ಅವರು ಕಠಿನ ಪಂದ್ಯದಲ್ಲಿ ಜಯ ಸಾಧಿಸಿ ಕೊರಿಯ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಕೂಟದಲ್ಲಿ ದ್ವಿತೀಯ ಸುತ್ತಿಗೇರಿದ್ದಾರೆ.
ಸ್ಥಳೀಯ ಭರವಸೆ ಚೊಯ್ ಜಿ ಹೂನ್ ಅವರ ವಿರುದ್ಧ ಮೂರು ಗೇಮ್‌ಗಳ ಹೋರಾಟದಲ್ಲಿ ಕಾದಾಡಿದ ಸೆನ್ 14-21, 21-16, 21-18 ಗೇಮ್‌ಗಳಿಂದ ಜಯ ಸಾಧಿಸಿ ಮುನ್ನಡೆದರು. ಈ ಹೋರಾಟವು ಒಂದು ತಾಸಿನವರೆಗೆ ಸಾಗಿತ್ತು. ಆರನೇ ಶ್ರೇಯಾಂಕದ ಸೆನ್ ಕಳೆದ ಆರು ತಿಂಗಳಿಂದ ಉತ್ತಮ ಆಟದ ಪ್ರದರ್ಶನ ನೀಡುತ್ತಿದ್ದಾರೆ.
ಜರ್ಮನ್ ಓಪನ್ ಮತ್ತು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಫೈನಲಿಗೇರಿದ ಸಾಧನೆ ಮಾಡಿರುವ ಸೆನ್ ದ್ವಿತೀಯ ಸುತ್ತಿನಲ್ಲಿ ಇಂಡೊನೇಶ್ಯದ ಶೇಸರ್ ಹಿರೆನ್ ರುಸ್ತಾವಿಟೊ ಅವರ ಸವಾಲನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ:ಐಪಿಎಲ್: ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿಗೆ ರೋಚಕ ಜಯ
ವನಿತೆಯರ ವಿಭಾಗದಲ್ಲಿ ಮಾಳವಿಕಾ ಬನ್ಸೂದ್ ಅವರು ಕಠಿನ ಹೋರಾಟದಲ್ಲಿ ವಿಶ್ವದ 24ನೇ ರ್‍ಯಾಂಕಿನ ಚೀನದ ಹಾನ್ ಯುಯಿ ಅವರನ್ನು 20-22, 22-20, 21-10 ಗೇಮ್‌ಗಳಿಂದ ಸೋಲಿಸಿ ಮುನ್ನಡೆದರು. ಮೊದಲ ಎರಡು ಗೇಮ್‌ಗಳಲ್ಲಿ ಇಬ್ಬರೂ ಆಟಗಾರ್ತಿಯರು ಅದ್ಭುತ ಆಟದ ಪ್ರದರ್ಶನ ನೀಡಿದ್ದರು. ಕಳೆದ ಜನವರಿಯಲ್ಲಿ ನಡೆದ ಸಯ್ಯದ್ ಮೋದಿ ಸೂಪರ್ 300 ಕೂಟದ ಫೈನಲಿಗೇರಿದ್ದ ಬನ್ಸೂದ್ ಮುಂದಿನ ಸುತ್ತಿನಲ್ಲಿ ಥಾಯ್ಲಂಡಿನ ಪೋರ್ನ್ಪಾವಿ ಚೊಚುವಾಂಗ್ ಅವರನ್ನು ಎದುರಿಸಲಿದ್ದಾರೆ.
ಇದೇ ವೇಳೆ ಸ್ವಿಸ್ ಓಪನ್ ಫೈನಲಿಸ್ಟ್ ಎಚ್.ಎಸ್. ಪ್ರಣಯ್ ಅವರು ಮಲೇಶ್ಯದ ಚೀಮ್ ಜೂನ್ ವೆಯ್ ಅವರೆದುರು 17-21, 7-21 ಗೇಮ್‌ಗಳಿಂದ ಶರಣಾಗಿ ಹೊರಬಿದ್ದರು. ಈ ಹೋರಾಟ 41 ನಿಮಿಷಗಳವರೆಗೆ ಸಾಗಿತ್ತು.