ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮಹಾರಥೋತ್ಸವ ಸಾವಿರಾರು ಭಕ್ತರ ನಡುವೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಏಳುಗಂಟೆಗೆ ಮೀನ ಲಗ್ನದಲ್ಲಿ ಲಕ್ಷ್ಮೀ ನರಸಿಂಗಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸೋಮವಾರ ಬೆಳಗ್ಗೆ 7.30 ರಿಂದ 9ರವರೆಗೆ ರಾಹುಕಾಲವಿದ್ದ ಪ್ರಯುಕ್ತ 9.30 ಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಪತ್ನಿ ಚನ್ನಮ್ಮ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಮತ್ತು ಡಾ.ಸೂರಜ್ ರೇವಣ್ಣ ದಂಪತಿ ರಥಕ್ಕೆ ಚಾಲನೆ ನೀಡಿದರು.
ವಿಶೇಷ ಪೂಜೆ: ಸೋಮವಾರ ಬೆಳಗ್ಗೆ ಮಾಜಿ ಪ್ರಧಾನಿ ದೇವೇಗೌಡ ದಂಪತಿ, ರೇವಣ್ಣ ದಂಪತಿ ಹಾಗು ಕುಟುಂಬ ಬೆಳಗಿನಿಂದಲೇ ದೇವಾಲಯದಲ್ಲಿ ನಡೆದ ಪೂಜೆಯಲ್ಲಿ ಭಾಗಿಯಾಗಿದ್ದರು. ಬೆಳಗ್ಗೆ ರಾಹು ಕಾಲ ಮುಗಿಯುತ್ತಿದ್ದಂತೆ ರಥಕ್ಕೆ ಚಾಲನೆ ದೊರೆಯಿತು. ರಥವನ್ನು ರಾಜಬೀದಿಗಳಲ್ಲಿ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಎಳೆಯುವ ಮೂಲಕ ಯಶಸ್ಸಿನಡೆಗೆ ರಥವನ್ನು ಕರೆತರಲಾಯಿತು.
ಕುಟುಂಬಕ್ಕೆ ಶ್ರೀರಕ್ಷೆ: ಬೆಳಗ್ಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ಮತ್ತು ತಮ್ಮ ಕುಟುಂಬ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಭಕ್ತರಾಗಿದ್ದು, ನಮ್ಮಕುಟುಂಬದ ಏಳಿಗೆಗೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಆರ್ಶಿವಾದವೇ ಕಾರಣ ಎಂದು ತಿಳಿಸಿದರು. ರಥೋತ್ಸವದಲ್ಲಿ ಜಿಲ್ಲಾ ಧಿಕಾರಿ ಗಿರೀಶ್, ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ಸೇರಿದಂತೆ ತಾಲೂಕಿನ ಜನಪ್ರತಿನಿ ಗಳು ಹಾಗೂ ಸಾವಿರಾರು ಭಕ್ತಾ ಗಳು ಪಾಲ್ಗೊಂಡಿದ್ದರು.
ರಥದ ಚಕ್ರ ಬಡಿದು ಗಾಯ: ರಥವನ್ನು ಮರಳಿ ದೇವಾಲಯಕ್ಕೆ ಎಳೆದು ತರುವಾಗ ರಥದ ಚಕ್ರಕ್ಕೆ ನೀಡುತ್ತಿದ್ದ ಗೊದಮ ಸ್ಕಿಡ್ ಆಗಿದ್ದರಿಂದ ಗೊದಮ ಹಿಡಿದಿದ್ದ ಯುವ ವಕೀಲ ಎ.ಶ್ರೀಧರ್ ಅವರ ಬಲಭಾಗದ ಎದೆಗೂಡಿಗೆ ಅಪ್ಪಳಿಸಿದ್ದರಿಂದ ಶ್ರೀಧರ್ ಅವರು ರಥದ ಚಕ್ರದ ನಡುವೆ ಸಿಲುಕಿದರು. ಸ್ಥಳದಲ್ಲೇ ಇದ್ದ ಕ್ರೇನ್ ತಕ್ಷಣ ರಥವನ್ನು ಹಿಂದಕ್ಕೆ ಎಳೆದ ಪರಿಣಾಮ ಯಾವುದೇ ಜೀವ ಹಾನಿಯಾಗಿಲ್ಲ.
ಎದೆ ಮೂಳೆಗೆ ರಥದ ಚಕ್ರ ಅಪ್ಪಳಿಸಿದ್ದರಿಂದ ಶ್ರೀಧರ್ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಮೈಸೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಶ್ರೀಧರ್ ಅವರನ್ನು ತಪಾಸಣೆ ಮಾಡಿ ಎದೆ ಗೂಡಿನ ಬಲ ಭಾಗದ ಪಕ್ಕೆಲುಬುಗಳಿಗೆ ಹಾನಿಯಾಗಿದ್ದು, ಪ್ರಾಣಾಪಾಯವಿಲ್ಲ ಎಂದು ತಿಳಿಸಿದ್ದಾರೆ.