Advertisement

ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ವಿರುದ್ಧ ಭುಗಿಲೆದ್ದ ಆಕ್ರೋಶ, ಏನಿದು ವಿವಾದ?

01:51 PM May 27, 2021 | Team Udayavani |

ಮಣಿಪಾಲ: ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ಪುಟ್ಟ ಲಕ್ಷದ್ವೀಪ ಪ್ರದೇಶ ಪ್ರಾಕೃತಿಕ ಸೌಂದರ್ಯ ಹೊಂದಿದ್ದು ಪ್ರವಾಸೋದ್ಯಮದ ಮೂಲಕ ಜನರನ್ನು ಹೆಚ್ಚು ಸೆಳೆದಿದೆ. ಆದರೆ ಇದೀಗ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಜಾರಿಗೊಳಿಸಿರುವ ನೀತಿಗೆ ತೀವ್ರ ವಿರೋಧ ವ್ಯಕ್ತವಾಗತೊಡಗಿದೆ. ಅಲ್ಲದೇ ಕಾಂಗ್ರೆಸ್, ಸಿಪಿಎಂ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಲಕ್ಷದ್ವೀಪದಲ್ಲಿನ ಬೆಳವಣಿಗೆ ಬಗ್ಗೆ ಆಕ್ರೋಶ
ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಜಿಂದಾಲ್ ಜಮೀನು : ಕೋರ್ಟ್ ತೀರ್ಪಿನ ನಂತರ ತೀರ್ಮಾನ : ಸಚಿವ ಬಸವರಾಜ್ ಬೊಮ್ಮಾಯಿ

ಲಕ್ಷದ್ವೀಪ ಆಡಳಿತಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಲಕ್ಷದ್ವೀಪ ಮೀನುಗಾರಿಕಾ ಇಲಾಖೆಯ ಸಿಬಂದಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಲಾಗಿದೆ. ಈವರೆಗೆ 39 ಉದ್ಯೋಗಿಗಳನ್ನು ವರ್ಗಾವಣೆ ಮಾಡಲಾಗಿದೆ.

ಲಕ್ಷದ್ವೀಪದಲ್ಲಿ ರಾಜಕೀಯ ಭುಗಿಲೇಳಲು ಕಾರಣವೇನು?
ಪ್ರಾಕೃತಿಕ ಸೌಂದರ್ಯ, ಪ್ರವಾಸೋದ್ಯಮದ ಕೇಂದ್ರಬಿಂದುವಾದ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಕೇಂದ್ರಾಡಳಿತ ಪ್ರದೇಶದಲ್ಲಿ ಹೊರಡಿಸಿದ ನೂತನ ಪ್ರಸ್ತಾವನೆಗಳೇ ರಾಜಕೀಯ ಸ್ವರೂಪ ಪಡೆಯಲು ಕಾರಣವಾಗಿದ್ದಲ್ಲದೇ, ಸ್ಥಳೀಯ ಜನರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ. ಆದರೆ ಲಕ್ಷದ್ವೀಪದ ಬಿಜೆಪಿ ಅಧ್ಯಕ್ಷರು ಪಟೇಲ್ ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ, ಮತ್ತೊಂದೆಡೆ ಇತರ ನಾಯಕರು ಅವರು ನಿರ್ಧಾರವನ್ನು ಕಟುವಾಗಿ ಪ್ರಶ್ನಿಸತೊಡಗಿದ್ದಾರೆ.

Advertisement

ಕಳೆದ 70 ವರ್ಷಗಳಿಂದ ಲಕ್ಷದ್ವೀಪ ಪ್ರದೇಶ ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ. ನಾವು ಆ ನಿಟ್ಟಿನಲ್ಲಿ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂಬುದು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ನಿಲುವಾಗಿದೆ. ಏತನ್ಮಧ್ಯೆ ಕೇಂದ್ರದ ಇಬ್ಬರು ಹಿರಿಯ ಮುಖಂಡರು ಪಟೇಲ್ ಅವರು ಜನರ ವಿಶ್ವಾಸ ಪಡೆದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಇಲ್ಲದಿದ್ದಲ್ಲಿ ಅವರ ನಿರ್ಧಾರದಿಂದ ಕೇಂದ್ರ ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೂ ಧಕ್ಕೆ ಬರಲಿದೆ
ಎಂದು ಎಚ್ಚರಿಸಿರುವುದಾಗಿ ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.

ಲಕ್ಷದ್ವೀಪದಲ್ಲಿ ನಡೆಯುತ್ತಿರುವ ಆಡಳಿತದ ದುರುಪಯೋಗ ತಡೆಯಬೇಕು. ಅಲ್ಲದೇ ಆಡಳಿತಾಧಿಕಾರಿ ಪಟೇಲ್ ಅವರನ್ನು ವಾಪಸ್ ಕರೆಯಿಸಿಕೊಳ್ಳಬೇಕು ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಸಿಪಿಐ ಪತ್ರ ಬರೆದಿದೆ.

ಕೇರಳ ಲಕ್ಷದ್ವೀಪದೊಂದಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಅವಿನಾಭಾವ ಸಂಬಂಧ ಹೊಂದಿದೆ. ಆದರೆ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಸ್ತಾವನೆಗಳು ಖಂಡನೀಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಪಟೇಲ್ ಅವರ ನಿಲುವಿನ ವಿಚಾರದಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನಿ ಮಧ್ಯಪ್ರವೇಶಿಸಬೇಕೆಂದು ಎಡಪಕ್ಷ ಹಾಗೂ ಕಾಂಗ್ರೆಸ್ ಸಂಸದರು ಪತ್ರ ಬರೆದಿರುವುದಾಗಿ ವರದಿ ತಿಳಿಸಿದೆ.

ಪ್ರಫುಲ್ ಪಟೇಲ್ ಅವರು ಈ ಹಿಂದೆ ಗುಜರಾತ್ ನಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗೃಹಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಪಕ್ಷದ ಹೈಕಮಾಂಡ್ ಜತೆ ನಿಕಟ ಸಂಪರ್ಕ ಹಾಗೂ ಪ್ರಭಾವ ಹೊಂದಿರುವುದಾಗಿಯೂ ವರದಿ ವಿವರಿಸಿದೆ.

ವಿವಾದಕ್ಕೆ ಕಾರಣವಾದ ಅಂಶಗಳು:
ಮುಸ್ಲಿಂ ಸಮುದಾಯ ಅಧಿಕವಾಗಿರುವ ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಜಾರಿಗೆ ತಂದ ನೀತಿ ವಿವಾದಕ್ಕೆ ಕಾರಣವಾಗಿದೆ.
*ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಗೋ ಮಾಂಸ ಮಾರಾಟ ನಿಷೇಧ.
*ಅಪರಾಧ ಪ್ರಕರಣ ಕಡಿಮೆ ಇರುವ ದ್ವೀಪಪ್ರದೇಶದಲ್ಲಿ ಗೂಂಡಾ ಕಾಯ್ದೆ ಜಾರಿ.
*ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪಂಚಾಯತ್ ಮತದಾನ ಆಕಾಂಕ್ಷಿಗಳನ್ನು ಅನರ್ಹಗೊಳಿಸಬೇಕು.
*ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರಿಂದ ಭೂಮಿ ವಶಪಡಿಸಿಕೊಳ್ಳಲು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ.
*ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ-2021 ರಚನೆ
*ಲಕ್ಷದ್ವೀಪದಲ್ಲಿ ಮದ್ಯ ಮಾರಾಟ ನಿಷೇಧ ತೆರವು
*ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮಾಂಸಾಹಾರ ನಿಷೇಧ.

Advertisement

Udayavani is now on Telegram. Click here to join our channel and stay updated with the latest news.

Next