Advertisement
ಶ್ರೀ ಕೃಷ್ಣ ಮಠದ ಮಧ್ವ ಸರೋವರದ ಬಳಿ ಗೋಷ್ಠಿ ಗಾನದ ‘ಏಳು ನಾರಾಯಣನೇ’, ‘ಪ್ರಬೋಧೋತ್ಸವ’ ಸಮಾರಂಭ ನಡೆಯಿತು. ಮಧ್ವಸರೋವರದ ಸುತ್ತ ಕುಳಿತು ಜಿಲ್ಲೆಯ ವಿವಿಧ ಭಜನ ಮಂಡಳಿಗಳಿಂದ ಮತ್ತು ದಾಸ ಸಾಹಿತ್ಯ ಪ್ರಾಜೆಕ್ಟ್ನಿಂದ ಬಂದ ಸಾವಿರಾರು ಭಜನ ಕಲಾವಿದರು ಗೋಷ್ಠಿ ಗಾನವನ್ನು ನಡೆಸಿಕೊಟ್ಟರು. ವಿದ್ವಾಂಸರಾದ ಕೊರ್ಲಳ್ಳಿ ವೆಂಕಟೇಶ ಆಚಾರ್ಯ, ಕೆ. ಅಪ್ಪಣ್ಣಾಚಾರ್ಯ, ವಿದ್ವಾನ್ ಸದಾನಂದ ಶಾಸ್ತ್ರಿಯವರು ಸಾಮೂಹಿಕ ಗೋಷ್ಠಿ ಗಾನದ ಸಾರಥ್ಯ ವಹಿಸಿ ಭಜನೆಯ ಮಹತ್ವವನ್ನು ಸಾರಿದರು.
ನಿರಂತರ ಭಜನೆಯ ಸಂಚಾಲಕ ಗುರುರಾಜ್ ಆಚಾರ್ಯ ಕಂಪ್ಲಿ, ಸಹ ಸಂಚಾಲಕಿ ಕಮಲಾವತಿ ವಾಸುದೇವ, ಗೀತಾ ಗುರುರಾಜ್ ಆಚಾರ್ಯ, ಉಡುಪಿ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಭೋಜರಾಜ್ ಆರ್. ಕಿದಿಯೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಶಿವಕುಮಾರ್ ಅಂಬಲಪಾಡಿ, ಸಂಘಟನಾ ಕಾರ್ಯದರ್ಶಿ ಸುಂದರ್ ಜತ್ತನ್ ತೆಂಕನಿಡಿಯೂರು, ಉಡುಪಿ ತಾಲೂಕು ಅಧ್ಯಕ್ಷ ಧನಂಜಯ ಕಾಂಚನ್ ಮಲ್ಪೆ, ಉಡುಪಿ ನಗರ ವಲಯಾಧ್ಯಕ್ಷ ಕಿಶೋರ್ ಕುಮಾರ್ ಕನ್ನರ್ಪಾಡಿ, ಉಡುಪಿ ಕರಾವಳಿ ವಲಯಾಧ್ಯಕ್ಷ ಕಿರಣ್ ಕುಂದರ್ ಮಲ್ಪೆ, ಉಮೇಶ್ ಆಚಾರ್ಯ ಉಪಸ್ಥಿತರಿದ್ದರು. ಬಳಿಕ ಭಜನ ಕಲಾವಿದರು ರಥಬೀದಿಯಲ್ಲಿ ಆಕರ್ಷಕ ಶೋಭಾಯಾತ್ರೆ ನಡೆಸಿಕೊಟ್ಟರು. ಕಲಾವಿದರು ಅರಸಿನ ಕುಂಕುಮದ ಪ್ರತೀಕವಾದ ಸಮವಸ್ತ್ರಗಳನ್ನು ಧರಿಸಿದ್ದರು.
ಕಳೆದ ನಾಲ್ಕು ತಿಂಗಳಿಂದ ಚಾತುರ್ಮಾಸ್ಯ ವ್ರತವಾದ ಕಾರಣ ಕೃಷ್ಣಮಠದಲ್ಲಿ ಉತ್ಸವಗಳು ನಡೆಯುತ್ತಿರಲಿಲ್ಲ.ಉತ್ಥಾನ ದ್ವಾದಶಿಯಂದು ಲಕ್ಷ ದೀಪೋತ್ಸವದ ದಿನ ಶ್ರೀಕೃಷ್ಣಮಠದಲ್ಲಿ ಉತ್ಸವಗಳು ಆರಂಭಗೊಂಡಿತು. ರಾತ್ರಿ ರಥಬೀದಿ ಮತ್ತು ಮಧ್ವ ಸರೋವರದ ಸುತ್ತ ಲಕ್ಷ ಹಣತೆಗಳ ದೀಪದಲ್ಲಿ ಉತ್ಸವ ಸಂಪನ್ನಗೊಂಡಿತು.
Related Articles
ಕೃಷ್ಣ ಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿಯ ದೇವಪ್ರಬೋಧಿನೀ ಏಕಾದಶಿಯಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತುಳಸಿ ಹರಿಮಾಣವನ್ನು ತಲೆಯ ಮೇಲಿಟ್ಟು ‘ಡಂಗುರಾವ ಸಾರಿ ಹರಿಯ…’ ದಾಸರ ಪದಕ್ಕೆ ನೃತ್ಯ ಮಾಡಿದರು.
Advertisement
ಪರ್ಯಾಯ ಶ್ರೀಪಲಿಮಾರು, ಶ್ರೀಪೇಜಾವರ ಮತ್ತು ಶ್ರೀಅದಮಾರು ಕಿರಿಯ ಶ್ರೀಗಳು ಹಣತೆಗಳಿಗೆ ಮುಹೂರ್ತ ಮಾಡಿದರು.
ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರೊಜೆಕ್ಟ್, ಮಂತ್ರಾಲಯ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್ ಮತ್ತು ಉಡುಪಿ ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದವರಿಂದ ಭಜನ ಕಾರ್ಯಕ್ರಮ ನಡೆಯಿತು.
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀವಿಜಯದಾಸರ ಆರಾಧನೆಯ ಕೊನೆಯ ದಿನ ಹಾಗೂ ದೇವಪ್ರಬೋಧಿನೀ ಏಕಾದಶಿ ಪ್ರಯುಕ್ತ ಮೈಸೂರು ರಾಮಚಂದ್ರಾಚಾರ್ ಇವರ ನೇತೃತ್ವದಲ್ಲಿ ಜಾಗರಣೆ ನಡೆಯಿತು.
ಚಿತ್ರಗಳು: ಆಸ್ಟ್ರೋ ಮೋಹನ್