ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಮಹಾ ದಾಸೋಹದಲ್ಲಿ ಮಿರ್ಚಿ ಸೇವಾ ಸಮಿತಿಯಿಂದ ಜ.28ರ ಭಾನುವಾರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸದ್ಭಕ್ತರಿಗಾಗಿ ಬಿಸಿ-ಬಿಸಿ ರುಚಿಯ ಮಿರ್ಚಿ ಸೇವೆಯನ್ನು ಉಣಬಡಿಸುವ ಮೂಲಕ ಸೇವಾ ಸಮಿತಿಯು ಭಕ್ತ ಗಣ ಗಮನ ಸೆಳೆಯಿತು.
ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷವೂ ಮಹಾ ದಾಸೋಹದ ಸೇವೆಯಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವುದು ಜಾತ್ರೆಯ ವಿಶೇಷವಾಗಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಮಹಾ ದಾಸೋಹ ವ್ಯವಸ್ಥೆಯನ್ನು ಏರ್ಪಪಡಿಸಲಾಗಿದ್ದು ಮಹಾ ದಾಸೋಹಕ್ಕೆ ಈ ಭಾಗದ ಜನರು ತನು ಮನ ಧನ ಅರ್ಪಿಸುವ ಕಾರ್ಯ ನಡೆದು ಬಂದಿದೆ.
ಈ ದಾಸೋಹದಲ್ಲಿ ತಮ್ಮದು ಒಂದು ಅಳಿಲು ಸೇವೆ ಇರಲಿ ಎಂದು ಮಿರ್ಚಿ ಸೇವಾ ಸಮಿತಿಯು ಕಳೆದ ಕೆಲವು ವರ್ಷಗಳಿಂದ ಲಕ್ಷ ಲಕ್ಷ ಮಿರ್ಚಿಗಳನ್ನು ಸಿದ್ಧಪಡಿಸಿ ಭಕ್ತ ಜನ ಸಾಗರಕ್ಕೆ ಉಣಬಡಿಸುವ ಕಾಯಕದ ಸೇವೆಯಲ್ಲಿ ತೊಡಗಿರುವುದು ಈ ಜಾತ್ರಿಯ ವಿಶೇಷವಾಗಿದೆ. ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಿರ್ಚಿ ಸೇವಾ ಸಮಿತಿಯು ತನು ಮನ ಧನದಿಂದ ಶ್ರದ್ಧಾ ಭಕ್ತಿಯಿಂದ ಸೇವೆ ಮಾಡುತ್ತಿದೆ.
ಮಹಾ ರಥೋತ್ಸವ ಸಾಗಿದ ಮರು ದಿನಂದು ಮಿರ್ಚಿ ಸೇವೆ ಮಾಡುತ್ತಾ ಬಂದಿದೆ. ಈ ಬಾರಿ ಜಾತ್ರಾ ಮಹೋತ್ಸವದ ದಾಸೋಹ ಭವನದಲ್ಲಿ ಸುಮಾರು 25 ಕ್ವಿಂಟಲ್ ಹಿಟ್ಟು, 22 ಕ್ವಿಂಟಲ್ ಹಸಿಮೆಣಸಿನಕಾಯಿ ಹಾಗೂ 400 ಬಾಣಸಿಗರು ಸೇರಿದಂತೆ 12 ಬ್ಯಾರಲ್ ಎಳ್ಳೆಣ್ಣಿ, 60 ಕೆಜಿ ಉಪ್ಪು ಹಾಗೂ 60 ಕೆಜಿ ಸೋಡಾಪುಡಿ ಒಳಗೊಂಡಂತೆ ಸುಮಾರು 4-5 ಲಕ್ಷ ಮಿರ್ಚಿಗಳನ್ನು ಸಿದ್ದಪಡಿಸಿ ಮಹಾ ದಾಸೋಹಕ್ಕೆ ಆಗಮಿಸುವ ಸದ್ಭಕ್ತರಿಗಾಗಿ ಉಣಬಡಿಸುವ ಕಾಯಕವೂ ಭಾನುವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಈ ಮಹಾ ದಾಸೋಹದಲ್ಲಿ ನಡೆದ ಮಿರ್ಚಿ ಸೇವಾ ಕಾರ್ಯ ವೀಕ್ಷಣೆಗೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿ ಪಾಲ್ಗೊಂಡು ಎಣ್ಣೆಯಲ್ಲಿ ಮಿರ್ಚಿ ತೇಲಿ ಬಿಡುವ ಮೂಲಕ ಮಿರ್ಚಿ ಸೇವಾ ಕಾರ್ಯಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಇದಲ್ಲದೆ ಈ ಮಹಾದಾಸೋಹ ಸೇವೆ ನೋಡಲು ಆಗಮಿಸಿದ್ದ ಕೊಪ್ಪಳದ ಡಿಸಿ ನಲಿನ್ ಅತುಲ್ ಅವರು ಹಾಗೂ ಭಾರತದ ಪ್ಯಾರಿಸ್ ಮಾಜಿ ರಾಯಭಾರಿಯಾದ ಚಿರಂಜೀವಿ ಸಿಂಗ್ ಅವರು ಸಹ ಮಿರ್ಚಿ ಸೇವಾ ಕಾರ್ಯದ ಕುರಿತು ಪರಿಶೀಲಿಸಿ ಸ್ವತಃ ಮಹಾ ದಾಸೋಹ ಭವನಕ್ಕೆ ತೆರಳಿ ಸೇವಾ ನಿರತರಾದ ಕಾರ್ಯಕರ್ತರ ಉತ್ಸಾಹ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಾತ್ರವಲ್ಲದೇ ಅವರು ಕೂಡಾ ಕಾದ ಎಣ್ಣೆಯಲ್ಲಿ ಮಿರ್ಚಿ ತೇಲಿ ಬಿಡುವ ಮೂಲಕ ಕಾರ್ಯಕರ್ತರ ಸೇವಾ ಕಾರ್ಯಕ್ಕೆ ಪ್ರೋತ್ಸಾಹ ನೀಡಿದರು.
ಒಟ್ಟಿನಲ್ಲಿ ಕೊಪ್ಪಳದ ಶ್ರೀ ಗಸಿದ್ದೇಶ್ವರ ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳುವ ಸದ್ಭಕ್ತ ವೃಂದಕ್ಕೆ ಇಲ್ಲಿನ ಭಕ್ತಗಣವು ತನು ಮನ ಧನ ಅರ್ಪಿಸುವ ಮೂಲಕ ತಮ್ಮ ಕಾಯಕ ಸೇವೆ ಅರ್ಪಿಸುತ್ತಿದೆ. ಭಾನುವಾರದ ಮಧ್ಯಾಹ್ನದ ವೇಳೆಗೆ ಸುಮಾರು 2.50 ಲಕ್ಷ ಮಿರ್ಚಿಗಳು ಭಕ್ತರಿಗಾಗಿ ದಾಸೋಹದಲ್ಲಿ ಸಿದ್ದಪಡಿಸಿ ಅರ್ಪಣೆ ಮಾಡಲಾಯಿತು. ಈ ಮಿರ್ಚಿ ಸೇವಾ ಕಾರ್ಯವು ಭಕ್ತಗಣದ ಮೆಚ್ಚುಗೆಗೆ ಪಾತ್ರವಾಯಿತು.