ಭಾಲ್ಕಿ: ತಾಲೂಕಿನ ಬ್ಯಾಲಹಳ್ಳಿ (ಕೆ) ಗ್ರಾಮದ ಹೊರ ವಲಯದಲ್ಲಿನ ಕಾರಂಜಾ ಜಲಾಶಯಕ್ಕೆ ರವಿವಾರ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕಈಶ್ವರ ಖಂಡ್ರೆ ಭೇಟಿ ನೀಡಿ ಜಲಾಶಯದಲ್ಲಿನ ನೀರಿನ ಮಟ್ಟ ವೀಕ್ಷಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಮಳೆಯಿಂದ ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಸ್ತೆ, ಸೇತುವೆಗಳು ಹಾಳಾಗಿವೆ. ಸಾಕಷ್ಟು ಕಡೆಗಳಲ್ಲಿ ಮನೆಗಳು ಕುಸಿತ ಕಂಡಿವೆ. ಮಳೆಯಿಂದ ಬಹುತೇಕ ಹೊಲಗಳು ಜಲಾವೃತಗೊಂಡಿವೆ. ಸೋಯಾಬಿನ್, ಉದ್ದು, ತೊಗರಿ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಸಮಾರೋಪಾದಿಯಲ್ಲಿ ಪ್ರವಾಹ ನಿರ್ವಹಿಸಲು ಜಿಲ್ಲೆಗೆ ತಕ್ಷಣ ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ ಪರಿಹಾರ ನೀಡುವಂತೆ ವಿಧಾನ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು.
ಜಿಲ್ಲೆಯ ರೈತರ ಜೀವನಾಡಿಯಾದ ಈ ಜಲಾಶಯದಲ್ಲಿ 7.69 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಇದ್ದು, ಜಿಲ್ಲೆಯಲ್ಲಿ ಈ ಬಾರಿ ವ್ಯಾಪಕವಾಗಿ ಮಳೆಯಾದ ಪರಿಣಾಮ ಇದು ವರೆಗೂ 4 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಒಳಹರಿವು ಹೆಚ್ಚಿದ್ದು, ಮುಂದಿನ ಕೆಲ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಲಾಶಯ ತುಂಬುವ ಸಾಧ್ಯತೆ ಇದೆ. ಇದರಿಂದ ಜಿಲ್ಲೆಯಲ್ಲಿನ ಕುಡಿವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಮಂತ್ರಿಯಿದ್ದ ಸಂದರ್ಭದಲ್ಲಿಅತಿವಾಳ ಹಾಗೂ ಕಾರಂಜಾ ಏತ ನೀರಾವರಿ ಯೋಜನೆ, 131 ಕಿಮೀ. ಬಲದಂಡೆ, 31 ಕಿಮೀ. ಎಡದಂಡೆ ಕಾಲುವೆ ಆಧುನೀಕರಣಕ್ಕೆ ಯೋಜನೆ ರೂಪಿಸಿ, ಅನುದಾನ ಬಿಡುಗಡೆಗೊಳಿಸಿದ್ದೇನೆ. ಇದೀಗ ಸಿಸಿ ಲೈನಿಂಗ್ ಕಾಮಗಾರಿ ಪೂರ್ಣಗೊಂಡಿದೆ. ತಾಲೂಕಿನ 29 ಸಾವಿರ ಹೆಕ್ಟೇರ್ ಭೂಮಿಗೆ ನೀರು ಹರಿಯಲಿದ್ದು, ರೈತರಿಗೆ ವರದಾನ ಆಗಲಿದೆ ಎಂದು ಹೇಳಿದರು.
4 ವರ್ಷಗಳ ಬಳಿಕ ಕಾರಂಜಾ ಭರ್ತಿ ಆಗುತ್ತಿದ್ದು, ಕೃಷ್ಣಾ ಕಣಿವೆಯಿಂದ ಪ್ರತಿ ವರ್ಷ ಕಾರಂಜಾ ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಸಿಎಂ ಗಮನಕ್ಕೂ ತಂದಿದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು.
ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಬಸವಕಲ್ಯಾಣ ಸಹಾಯಕ ಆಯುಕ್ತ ಭುವನೇಶ ಪಾಟೀಲ, ತಹಶೀಲ್ದಾರ್ ಅಣ್ಣರಾವ್ ಪಾಟೀಲ, ಉಪ ತಹಶೀಲ್ದಾರ್ ದಿಲ್‌ರಾಜ ಪಸರಗಿ, ರಾಜಶೇಖರ ಪಾಟೀಲ, ಶಶಿಧರ ಕೋಸಂಬೆ ಇತರರು ಇದ್ದರು.