ನವದೆಹಲಿ: ಪ್ರತಿಭಟನಾ ನಿರತ ನಾಲ್ವರು ರೈತರು ಮತ್ತು ಒಬ್ಬ ಪತ್ರಕರ್ತನ ಸಾವಿಗೆ ಕಾರಣವಾಗಿದ್ದ ಉತ್ತರ ಪ್ರದೇಶದ ಲಖೀಂಪುರ ಹಿಂಸಾಚಾರ ಒಂದು ಯೋಜಿತ ಸಂಚು ಎಂದು ವಿಶೇಷ ತನಿಖಾ ತಂಡ(ಎಸ್‌ಐಟಿ) ಹೇಳಿದೆ.
ಘಟನೆ ನಡೆದು ಮೂರು ತಿಂಗಳಾದ ಬಳಿಕ ವರದಿ ನೀಡಿರುವ ಅದು, ಕೇಂದ್ರ ಸಚಿವ ಅಜಯ್ ಮಿಶ್ರಾ ತೇಣಿ ಪುತ್ರ ಒಳಗೊಂಡಿದ್ದ ಈ ಘಟನೆಯಲ್ಲಿ ರೈತರ ಮೇಲೆ ಕಾರು ಹತ್ತಿಸಿದ್ದು, ಯೋಜಿತ ಸಂಚು. ಇದು ಅಪಘಾತವಲ್ಲ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡವು, ಘಟನೆಗೆ ಕಾರಣರಾದವರ ವಿರುದ್ಧ ಕೊಲೆ ಯತ್ನ, ಮಾರಕಾಯುಧ ಬಳಸಿ ಹಲ್ಲೆ, ಒಂದೇ ಉದ್ದೇಶದೊಂದಿಗೆ ಗುಂಪೊಂದನ್ನು ಕಟ್ಟಿಕೊಂಡು ಕೃತ್ಯ ನಡೆಸಿದ ಆರೋಪ ಹೊರಿಸಲಾಗಿದೆ. ಈ ವರದಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದ್ದು, ಘಟನೆಗೆ ಕಾರಣರಾದವರ ಬಂಧಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದೆ.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವುದೇ ಮುಖ್ಯ ಗುರಿ: ಎಂಎಲ್ ಅನಿಲ್‍ಕುಮಾರ್
ಮೂರು ತಿಂಗಳ ಹಿಂದೆ ನಡೆದಿದ್ದ ಈ ಘಟನೆ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿಯೇ ರೈತರ ಮೇಲೆ ವಾಹನ ಹರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಈ ಬಗ್ಗೆ ಹೆಚ್ಚಿನ ತನಿಖೆಗೂ ಆಗ್ರಹ ಮಾಡಲಾಗಿತ್ತು.