ಹೊಸದಿಲ್ಲಿ : ಉತ್ತರಪ್ರದೇಶದ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರಪತಿ ರಮಾನಾಥ್ ಕೊವಿಂದ್ ಅವರನ್ನು ಭೇಟಿಯಾಗಲು ಕಾಂಗ್ರೆಸ್ ಪಕ್ಷ ಸಮಯಾವಕಾಶ ಕೇಳಿದೆ.
ರಾಷ್ಟ್ರಪತಿಯವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಅ .9 ರಂದು ಪತ್ರ ಬರೆದಿದ್ದು, ರಾಹುಲ್ ಗಾಂಧಿ ನೇತೃತ್ವದ 7 ಮಂದಿ ಕಾಂಗ್ರೆಸ್ ಪಕ್ಷದ ನಾಯಕರ ನಿಯೋಗಕ್ಕೆ ತುರ್ತಾಗಿ ಭೇಟಿಗೆ ಸಮಯ ನಿಗದಿ ಮಾಡಲು ಮನವಿ ಮಾಡಿಕೊಂಡಿದ್ದಾರೆ.
ರೈತರ ಹಗಲು ಹತ್ಯಾಕಾಂಡದ ಆಘಾತಕಾರಿ ಘಟನೆಯ ಕುರಿತಾಗಿನ ಸತ್ಯದ ವಿವರವಾದ ಜ್ಞಾಪಕ ಪತ್ರವನ್ನು ಪ್ರಸ್ತುತಪಡಿಸುವುದಾಗಿ ಅವರು ಪತ್ರದಲ್ಲಿ ಬರೆದಿದ್ದಾರೆ.
ನಿಯೋಗದಲ್ಲಿ ರಾಹುಲ್ ಗಾಂಧಿ ಅವರ ಜೊತೆ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎ.ಕೆ. ಆಂಟನಿ, ಅಧೀರ್ ರಂಜನ್ ಚೌಧರಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್, ಗುಲಾಂ ನಬಿ ಅಜಾದ್ ಅವರು ಇರುವುದಾಗಿ ಪತ್ರದಲ್ಲಿ ಬರೆಯಲಾಗಿದೆ.
ರೈತರ ಮೇಲೆ ಕಾರು ಹತ್ತಿಸಿದ ಆರೋಪದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಅವರನ್ನು ಶನಿವಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ಬಂಧಿಸಿತ್ತು. ಅ.3ರಂದು 8 ಮಂದಿಯ ಸಾವಿಗೆ ಕಾರಣವಾದ ಹಿಂಸಾಚಾರ ಕುರಿತು ಸತತ 8 ಗಂಟೆಗಳ ಕಾಲ ಮಿಶ್ರಾರನ್ನು ತನಿಖೆ ನಡೆಸಿದ ಬಳಿಕ ಬಂಧಿಸಲಾಗಿತ್ತು.