ಬೋಸ್ಟನ್: ಲಖೀಂಪುರ್ ಖೇರಿ ಹಿಂಸಾಚಾರ ಘಟನೆ ಖಂಡನೀಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಮೆರಿಕಾದ ಪ್ರವಾಸದಲ್ಲಿರುವ ಅವರು ಮಂಗಳವಾರ ಹಾರ್ವರ್ಡ್ ಕೆನಡಿ ಶಾಲೆಯಲ್ಲಿ ನಡೆದ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಲಖೀಂಪುರ್ ಮಾತ್ರವಲ್ಲದೇ, ಭಾರತದ ಇತರ ಭಾಗಗಳಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಆದರೆ ಅದ್ಯಾವುದು ಇಷ್ಟರ ಮಟ್ಟಿಗೆ ಗಮನ ಸೆಳೆದಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿರುವುದರಿಂದ ಈ ಘಟನೆ ಹೆಚ್ಚು ಸುದ್ದಿಯಾಗುತ್ತಿದೆ ಎಂದು ಉತ್ತರಿಸಿದರು.
ಪ್ರಧಾನ ಮಂತ್ರಿ ಹಾಗೂ ಹಿರಿಯ ಮಂತ್ರಿಗಳು ಯಾಕೆ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ? ಯಾಕೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ, ಇಂತಹ ಹಿಂಸಾಚಾರ ಕೇವಲ ಒಂದು ಪ್ರದೇಶದಲ್ಲಿ ಮಾತ್ರ ನಡೆಯುವುದಲ್ಲ, ಇತರ ಭಾಗಗಳಲ್ಲೂ ನಡೆಯುತ್ತದೆ. ಇದು ನಿಜಕ್ಕೂ ಖಂಡನೀಯ. ಇತರ ಘಟನೆಗಳ ಬಗ್ಗೆಯೂ ಕಾಳಜಿ ಇದೆ ಎಂದರು.
ಭಾರತದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಬಿಜೆಪಿ ಸರಕಾರ ಅಸ್ತಿತ್ವ ಬಂದಾಗ ಅದು ಹೆಚ್ಚು ಸುದ್ದಿಯಾಗುತ್ತವೆ. ಅರ್ಥಶಾಸ್ತ್ರಜ್ಞ ಡಾ ಅಮರ್ತ್ಯ ಸೇನ್ ಅಂತವರಿಗೆ ಭಾರತದ ಬಗ್ಗೆ ಚೆನ್ನಾಗಿ ಗೊತ್ತಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ನಡೆದರೆ ಅದನ್ನು ನಮ್ಮ ಮೇಲೆ ಹೇರುತ್ತಾರೆ ಎಂದು ಕಟುವಾಗಿ ಪ್ರತಿಕ್ರಿಯಿಸಿದರು.
ಇದು ನಮ್ಮ ಪ್ರಧಾನಿ ಹಾಗೂ ಪಕ್ಷದ ರಕ್ಷಣೆಯ ವಿಚಾರವಲ್ಲ. ಇದು ದೇಶದ ರಕ್ಷಣೆಯಾಗಿದೆ. ನಾನು ದೇಶದ ಪರವಾಗಿ ಮಾತನಾಡುತ್ತೇನೆ. ನಾನು ನ್ಯಾಯಕ್ಕಾಗಿ ಮಾತನಾಡುತ್ತೇನೆ ಎಂದರು.