ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ನಡೆಸಿಕೊಟ್ಟ ತಮ್ಮ ಮನ್ ಕೀ ಬಾತ್‌ನಲ್ಲಿ ವಿದೇಶಗಳಲ್ಲಿ ಭಾರತೀಯರು ಮಾಡಿಕೊಳ್ಳುವ ಅದ್ದೂರಿ ಮದುವೆಗಳ ಬಗ್ಗೆ ಮಾತನಾಡಿದ್ದು, ಇಂಥ ಮದುವೆಗಳನ್ನು ಭಾರತದಲ್ಲೇ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದೊಂದು 4 ಲಕ್ಷ ಕೋಟಿ ರೂ.ಗಳ ವಹಿವಾಟು ಆಗಿದ್ದು, ಇದರಿಂದ ಭಾರತದವರಿಗೇ ಅನುಕೂಲವಾಗುತ್ತದೆ ಎಂದೂ ಹೇಳಿದ್ದಾರೆ. ಹಾಗಾದರೆ ಏನಿದು ಮೋದಿಯವರ ಲೋಕಲ್ ಫಾರ್ ವೋಕಲ್ ಸಲಹೆ? ಭಾರತದಲ್ಲಿನ ವಿವಾಹ ಮಾರುಕಟ್ಟೆ ಹೇಗಿದೆ? ವಿವಾಹಕ್ಕೆಂದೇ ಯಾವ ದೇಶಗಳಿಗೆ ಹೋಗುತ್ತಾರೆ? ಇಲ್ಲಿದೆ ಮಾಹಿತಿ…
3.5 ದಶಲಕ್ಷ ಮದುವೆ
ದೇಶದಲ್ಲೀಗ ಮದುವೆ ಸುಗ್ಗಿ. ಈಗಿನಿಂದ ಡಿ.15ರ ವರೆಗೆ ವಿವಾಹ ದಿನಾಂಕಗಳಿದ್ದು, ಈ ಅವಧಿಯಲ್ಲಿ ಸುಮಾರು 35 ಲಕ್ಷ ವಿವಾಹಗಳಾಗಲಿದ್ದು, ಅಂದಾಜು 4.25 ಲಕ್ಷ ಕೋಟಿ ರೂ.ನಷ್ಟು ವಹಿವಾಟು ಆಗಲಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 32 ಲಕ್ಷ ವಿವಾಹಗಳಾಗಿದ್ದು, 3.75 ಲಕ್ಷ ಕೋಟಿ ರೂ.ಗಳಷ್ಟು ವಹಿವಾಟು ಆಗಿತ್ತು ಎಂದು ಅಖೀಲ ಭಾರತ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಹೇಳಿದೆ. ಅಲ್ಲದೆ ಕೇವಲ ದಿಲ್ಲಿಯಲ್ಲಿಯೇ 3.50 ಲಕ್ಷ ವಿವಾಹಗಳಾಗಲಿವೆ ಎಂದು ಇದು ತಿಳಿಸಿದೆ. ಜತೆಗೆ 1 ಲಕ್ಷ ಕೋಟಿ ರೂ. ವಹಿವಾಟು ರಾಷ್ಟ್ರ ರಾಜಧಾನಿಯೊಂದರಲ್ಲೇ ಆಗಲಿದೆ ಎಂದೂ ಹೇಳಿದೆ. ನವೆಂಬರ್‌ನಲ್ಲಿ ನ.27 ಸೇರಿದಂತೆ 28, 29 ಮತ್ತು ಡಿಸೆಂಬರ್‌ನಲ್ಲಿ 3,4,7,8,9 ಹಾಗೂ 15 ವಿವಾಹಕ್ಕೆ ಪ್ರಶಸ್ತವಾದ ದಿನಾಂಕಗಳಾಗಿವೆ. ಡಿ.15ಕ್ಕೆ ಈ ವರ್ಷದ ವಿವಾಹ ಋತು ಮುಗಿದರೆ, ಮುಂದಿನ ವರ್ಷದ ಜನವರಿಯಿಂದ ಜುಲೈವರೆಗೆ ಹೊಸ ವಿವಾಹ ಋತು ಆರಂಭವಾಗಲಿದೆ ಎಂದು ತಿಳಿಸಿದೆ.
ಬಹುದೊಡ್ಡ ಉದ್ಯಮ
ಬಡವರಿಂದ ಹಿಡಿದು, ಶ್ರೀಮಂತರ ವರೆಗೂ ತಮ್ಮ ಮಕ್ಕಳಿಗೆ ಅತ್ಯಂತ ವಿಜೃಂಭಣೆಯಿಂದ ವಿವಾಹ ಮಾಡಬೇಕು ಎಂಬುದು ಭಾರತೀಯ ಪೋಷಕರ ಕನಸು. ಹೀಗಾಗಿಯೇ ತಾವು ಜೀವಿತಾವಧಿಯಲ್ಲಿ ಕೂಡಿಟ್ಟ ಹಣವನ್ನು ವೆಚ್ಚ ಮಾಡುತ್ತಾರೆ. ಅಷ್ಟೇ ಅಲ್ಲ ವಿವಾಹಗಳಿಗೆಂದೇ ಸಾಲ ಪಡೆಯುವವರೂ ಇದ್ದಾರೆ. ಚಿನ್ನ, ಕಲ್ಯಾಣ ಮಂಟಪ, ಬಟ್ಟೆ, ಆಹಾರ, ಹೊಟೇಲ್ ಸೇರಿದಂತೆ ವಿವಿಧ ರೀತಿಯ ವೆಚ್ಚ ಬರುತ್ತದೆ.
2023ರ ಆರಂಭದಲ್ಲಿನ ವಿವಾಹ ಋತುವಿನಲ್ಲಿ ಭಾರತ 13 ಲಕ್ಷ ಕೋಟಿ ರೂ.ನಷ್ಟು ವಹಿವಾಟು ಕಂಡಿದೆ. ಈಗಿನ 4.25 ಲಕ್ಷ ಕೋಟಿ ರೂ. ಸೇರಿಸಿದರೆ ಅಂದಾಜು 17 ಲಕ್ಷ ಕೋಟಿ ರೂ.ಗಳಾಗುತ್ತದೆ. ಈ ಲೆಕ್ಕಾಚಾರ ನೋಡಿದರೆ ಭಾರತದಲ್ಲಿನ ವಿವಾಹ ಸಂಸ್ಕೃತಿಯ ಅರಿವಾಗಬಹುದು.
ಯಾವುದಕ್ಕೆ, ಎಷ್ಟು ವೆಚ್ಚ?
ಈ ಮೊದಲೇ ಹೇಳಿರುವ ಹಾಗೆ ವಿವಾಹಗಳಿಗಾಗಿ ಮಾಡುವ 17 ಲಕ್ಷ ಕೋಟಿ ರೂ.ಗಳಲ್ಲಿ ಹೆಚ್ಚು ಹಣವನ್ನು ಚಿನ್ನಾಭರಣ ಖರೀದಿ ಮತ್ತು ಬಟ್ಟೆ ಖರೀದಿಗಾಗಿ ಬಳಕೆ ಮಾಡುತ್ತಾರೆ. ಅಂದರೆ
- ವಸ್ತ್ರ, ಸೀರೆಗಳು, ಲೆಹೆಂಗಾ – ಶೇ.10
- ಚಿನ್ನಾಭರಣ – ಶೇ.15
- ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್ ಮತ್ತು ಗ್ರಾಹಕ ಉಪಯೋಗಿ ವಸ್ತುಗಳು – ಶೇ.5
- ಹಣ್ಣು, ಒಣಗಿದ ಹಣ್ಣು ಇತ್ಯಾದಿ – ಶೇ.5
- ಆಹಾರೋತ್ಪನ್ನಗಳು, ತರಕಾರಿ – ಶೇ.5
- ಗಿಫ್ಟ್ ವಸ್ತುಗಳು – ಶೇ.4
- ಬ್ಯಾಂಕ್ವೆಟ್ ಹಾಲ್, ಹೊಟೇಲ್, ಇತರೆ ವಿವಾಹ ಸ್ಥಳಗಳು – ಶೇ.5
- ಇವೆಂಟ್ ಮ್ಯಾನೇಜ್‌ಮೆಂಟ್ – ಶೇ.5
- ಡೆಕೋರೇಶನ್ – ಶೇ.10
- ಕ್ಯಾಟರಿಂಗ್ ಸೇವೆಗಳು – ಶೇ.10
- ಹೂವಿನ ಅಲಂಕಾರ – ಶೇ.4
- ಟ್ರಾವೆಲ್ ಮತ್ತು ಕ್ಯಾಬ್ ಸೇವೆ – ಶೇ.3
- ಫೋಟೋ ಮತ್ತು ವೀಡಿಯೋ – ಶೇ.2
- ಅರ್ಕೆಸ್ಟ್ರಾ ಮತ್ತು ಬ್ಯಾಂಡ್ – ಶೇ.3
- ಬೆಳಕು ಮತ್ತು ಧ್ವನಿವರ್ಧಕ – ಶೇ.3
- ಇತರೆ ವಸ್ತುಗಳು – ಶೇ.9
ಶ್ರೀಮಂತರ ಸಂಖ್ಯೆ ಹೆಚ್ಚಳ ಮತ್ತು ಅದ್ದೂರಿತನ
ಇಡೀ ಜಗತ್ತಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸಿರಿವಂತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂದರೆ ಅಂದಾಜು 100 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಸಂಪತ್ತು ಹೊಂದಿ ದವರ ಸಂಖ್ಯೆ ಹೆಚ್ಚುತ್ತಿದೆ. 2022ರಲ್ಲಿ ಭಾರತದಲ್ಲಿನ 161 ಮಂದಿ ಬಿಲಿಯನೇರ್‌ಗಳು ಇದ್ದರೆ, 2027ರ ಹೊತ್ತಿಗೆ 195ಕ್ಕೆ ಏರಿಕೆಯಾಗುತ್ತದೆ. ಅಲ್ಲದೆ 30 ದಶಲಕ್ಷ ಡಾಲರ್ ಸಂಪತ್ತು ಹೊಂದಿರುವವರ ಸಂಖ್ಯೆ 12,069 ಇದ್ದರೆ, ಮುಂದಿನ ಐದು ವರ್ಷದಲ್ಲಿ 19,119ಕ್ಕೆ ಏರಿಕೆಯಾಗಲಿದೆ. ಇದು ಶೇ.58ರಷ್ಟು ಏರಿಕೆಯಾಗಲಿದೆ. ಹಾಗೆಯೇ 1 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಸಂಪತ್ತು ಹೊಂದಿರುವವರ ಸಂಖ್ಯೆ 7,97,714ಕ್ಕೆ ಏರಿಕೆಯಾಗಿದೆ. ಇದು ಕಳೆದ ವರ್ಷ 7,63,674 ಮಂದಿ ಇದ್ದರು. ಇದೇ ಸಂಖ್ಯೆ 2027ಕ್ಕೆ 16,57,272ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ವಿದೇಶಗಳಲ್ಲಿ ವಿವಾಹ
ಸಿರಿವಂತರು, ಬಾಲಿವುಡ್ ಗಣ್ಯರು, ದೇಶದಲ್ಲಿ ವಿವಾಹ ಮಾಡುವುದಕ್ಕಿಂತ ಹೆಚ್ಚಾಗಿ ವಿದೇಶಿ ಸ್ಥಳಗಳತ್ತ ಮಾರು ಹೋಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ವಿರಾಟ್ ಕೊಹ್ಲಿ- ಅನುಷ್ಕಾ ವಿವಾಹ ಇಟಲಿಯಲ್ಲಿ ನಡೆದಿತ್ತು. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ವಿವಾಹವೂ ಇಟಲಿಯಲ್ಲೇ ಆಗಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಭಾರತೀಯರಿಗೆ ಟರ್ಕಿ ಮೆಚ್ಚಿನ ಸ್ಥಳವಾಗಿದೆ. ಜತೆಗೆ ಥೈಲ್ಯಾಂಡ್ ಮತ್ತು ಬಾಲಿ ಕೂಡ ಅಚ್ಚು ಮೆಚ್ಚಿನ ತಾಣಗಳಾಗಿವೆ. ಹೀಗಾಗಿಯೇ ಇತ್ತೀಚೆಗಷ್ಟೇ ಥೈಲ್ಯಾಂಡ್ ಭಾರತದ ಪ್ರವಾಸಿಗರಿಗೆ ವೀಸಾ ಫ್ರೀ ವ್ಯವಸ್ಥೆ ಮಾಡಿತ್ತು. ಶ್ರೀಲಂಕಾ ಮತ್ತು ಮಲೇಷ್ಯಾ ಕೂಡ ಇದೇ ತಂತ್ರಕ್ಕೆ ಮಾರು ಹೋಗಿವೆ. ಅಂದರೆ ವೀಸಾ ಮುಕ್ತ ಪ್ರವೇಶ ನೀಡುವುದರಿಂದ ಸಂಬಂಧಿಕರು ಮತ್ತು ಗಣ್ಯರು ಸುಲಭವಾಗಿ ವಿವಾಹಗಳಿಗೆ ಬರಬಹುದು. ಇದರಿಂದ ವಿಮಾನಯಾನ ಮಾರುಕಟ್ಟೆಗೂ ಅನುಕೂಲವಾಗುತ್ತದೆ. ಹಾಗೆಯೇ ಬಂದವರು ಈ ದೇಶಗಳಲ್ಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಹೊಟೇಲ್ ಉದ್ದಿಮೆಯೂ ಬೆಳವಣಿಗೆಯಾಗುತ್ತದೆ ಎಂಬ ಲೆಕ್ಕಾಚಾರವಿದೆ. ಶೇ.60ರಷ್ಟು ಭಾರತೀಯರು ಥೈಲ್ಯಾಂಡ್ ಅನ್ನು ತಮ್ಮ ವಿವಾಹದ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅಲ್ಲಿನ ಸರಕಾರವೇ ಮಾಹಿತಿ ಕೊಟ್ಟಿದೆ.
ದುಬಾೖ, ಪೋರ್ಚುಗಲ್, ಇಟಲಿ, ಒಮಾನ್‌ಗಳೂ ಭಾರತೀಯರಿಗೆ ನೆಚ್ಚಿನ ಸ್ಥಳಗಳು. ಅದರಲ್ಲೂ ಯೂರೋಪ್‌ನ ಪ್ಯಾರೀಸ್, ಬುಡಾಪೆಸ್ಟ್, ರೋಮ್, ಲೇಕ್ ಲೋಮೋ, ಟಸ್ಕೆನಿ, ಅಮಾಲ್ಫಿ ಕೋಸ್ಟ್ ಅನ್ನು ಭಾರತೀಯರು ಆರಿಸಿಕೊಳ್ಳುತ್ತಾರೆ. ಅದರಲ್ಲೂ ಆ ದೇಶದ ಲ್ಯಾಂಡ್‌ಮಾರ್ಕ್ ಹೊಟೇಲ್‌ಗಳು, ಬ್ಯಾಂಕ್ವೆಟ್ ಹಾಲ್‌ಗಳೇ ಬೇಕು ಎಂದು ಕೇಳಿಕೊಳ್ಳುತ್ತಾರೆ. ಕತಾರ್‌ನಲ್ಲಿರುವ ರಾಷ್ಟ್ರೀಯ ಮ್ಯೂಸಿಯಂನಲ್ಲೂ ವಿವಾಹ ಮಾಡುವ ಬಯಕೆ ವ್ಯಕ್ತಪಡಿಸುತ್ತಾರೆ ಎಂದು ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯೊಂದು ಹೇಳುತ್ತದೆ. ಆದರೆ ಈ ಮ್ಯೂಸಿಯಂ ಸಿಗುವುದು ಕಷ್ಟ ಎನ್ನುತ್ತದೆ.
ವಿದೇಶದ ವಿವಾಹಕ್ಕೆ ವೆಚ್ಚ
ಪಂಚತಾರಾ ಹೊಟೇಲ್‌ನಲ್ಲಿ 200 ಅತಿಥಿಗಳ ಸಮ್ಮುಖದಲ್ಲಿ ನಡೆಯುವ ಕೇವಲ ಎರಡು ದಿನಗಳ ವಿವಾಹ ಕಾರ್ಯಕ್ರಮಕ್ಕೆ 3,65,706 ಡಾಲರ್‌ನಿಂದ 6,09,510 ಡಾಲರ್‌ವರೆಗೆ ವೆಚ್ಚವಾಗುತ್ತದೆ.
ಜಗತ್ತಿನಲ್ಲೇ ದೊಡ್ಡ ಮಾರುಕಟ್ಟೆ
ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಗಳ ಪ್ರಕಾರ, ಭಾರತ ಜಗತ್ತಿನಲ್ಲೇ ಅತ್ಯಂತ ದೊಡ್ಡ ವಿವಾಹ ಮಾರುಕಟ್ಟೆ ಹೊಂದಿದೆ. ಅಂದರೆ ಜಗತ್ತಿನಲ್ಲಿ ವೆಚ್ಚ ಮಾಡುವ ಒಟ್ಟಾರೆ ಹಣದಲ್ಲಿ ಶೇ.25ರಷ್ಟು ಭಾರತದ್ದೇ ಆಗಿದೆ. ಚೀನದಲ್ಲೂ ಇಷ್ಟೇ ಪ್ರಮಾಣದ ವೆಚ್ಚ ಮಾಡಲಾಗುತ್ತದೆ. ಹೀಗಾಗಿ ಜಗತ್ತಿನ ಒಟ್ಟಾರೆ ಮಾರು ಕಟ್ಟೆಯ ಅರ್ಧದಷ್ಟನ್ನು ಈ ಎರಡು ದೇಶಗಳೇ ಹೊಂದಿವೆ ಎಂದು ಹೇಳುತ್ತವೆ.
ಭಾರತದ ಅತ್ಯಂತ ದುಬಾರಿ ವಿವಾಹಗಳು
- ಇಶಾ ಅಂಬಾನಿ – ಆನಂದ್ ಪಿರಮಾಳ್ – 700 ಕೋಟಿ ರೂ.
- ಸುಶಾಂತೋ ರಾಯ್- ಸೀಮಂತೋ ರಾಯ್ – 550 ಕೋಟಿ ರೂ.
- ಬ್ರಾಹ್ಮಿಣಿ ರೆಡ್ಡಿ – ರಾಜೀವ್ ರೆಡ್ಡಿ – 500 ಕೋಟಿ ರೂ.
- ಶ್ರಿಸ್ತಿ ಮಿತ್ತಲ್ – ಗುಲಾÅಜ್ ಬೆಹ್ಲ – 500 ಕೋಟಿ ರೂ.
- ವಾನಿಶಾ ಮಿತ್ತಲ್ – ಅಮಿತಾ ಬಾಟಿಯಾ – 240 ಕೋಟಿ ರೂ.
ಬಾಲಿವುಡ್‌ನ ದುಬಾರಿ ವಿವಾಹ
- ಅನುಷ್ಕಾ ಶರ್ಮ – ವಿರಾಟ್ ಕೊಹ್ಲಿ(ಇಟಲಿ) – 100 ಕೋಟಿ ರೂ.
- ದೀಪಿಕಾ ಪಡುಕೋಣೆ- ರಣವೀರ್ ಸಿಂಗ್(ಇಟಲಿ) – 7779 ಕೋಟಿ