ಬೀದರ: ಮುಂಗಾರು ಮಳೆ ಈ ಬಾರಿ ಗಡಿನಾಡು ಬೀದರನ ಗ್ರಾಮೀಣ ಪ್ರದೇಶದ ಜನರಿಗೆ ಅದರಲ್ಲೂ ಅನ್ನದಾತರಲ್ಲಿ ಸಂತಸ ಹೆಚ್ಚಿಸಿದೆ. ಜಿಲ್ಲೆಯ 125 ಕೆರೆಗಳ ಪೈಕಿ ಈಗಾಗಲೇ 28 ಕೆರೆಗಳು ಮೈದುಂಬಿಕೊಂಡು ಕಂಗೊಳಿಸುತ್ತಿವೆ.
ಬಸವನ ಹುಳು ಬಾಧೆ ಜತೆಗೆ ಮಳೆ ಆರ್ಭಟದಿಂದ ಕೆಲವೆಡೆ ಬೆಳೆಗಳು ನೀರು ಪಾಲಾಗಿ ಆರ್ಥಿಕ ಸಂಕಷ್ಟ ತಂದೊಡ್ಡಿದ್ದರೂ ಬರುವ ದಿನಗಳಲ್ಲಿ ಜೀವಜಲ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಅತ್ತ ಜಿಲ್ಲೆಯ ಏಕೈಕ ಕಾರಂಜಾ ಜಲಾಶಯದಲ್ಲೂ ನೀರಿನ ಪ್ರಮಾಣ ಹೆಚ್ಚಿದ್ದರೆ ಇತ್ತ ಕೆರೆಗಳೂ ಮೈದುಂಬಿಕೊಳ್ಳುತ್ತಿರುವುದು ಗ್ರಾಮಗಳ ಚಿತ್ರಣ ಬದಲಾಯಿಸಿವೆ. ಬತ್ತಿ ಹೋಗಿದ್ದ ಕೊಳವೆಬಾವಿ ಮತ್ತು ಬಾವಿಗಳಲ್ಲಿ ಅಂತರ್ಜಲ ಹೆಚ್ಚುತ್ತಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಡಿ ಬೀದರ ಜಿಲ್ಲೆಯಲ್ಲಿ 125 ಕೆರೆಗಳಿದ್ದು, 2958 ಎಂಸಿಎಫ್‌ಟಿ ಗರಿಷ್ಠ ನೀರಿನ ಸಾಮರ್ಥ್ಯ (21,494 ಹೆಕ್ಟೇರ್) ಹೊಂದಿವೆ. ಇದರಲ್ಲಿ ಜುಲೈ 25ರವರೆಗೆ 31 ಕೆರೆಗಳು ನೀರಿನಿಂದ ಸಂಪೂರ್ಣ ಭರ್ತಿಯಾಗಿ ಕಣ್ಮನ ಸೆಳೆಯುತ್ತಿವೆ. 49 ಕೆರೆಗಳು ಶೇ.51ರಿಂದ 99 ಭರ್ತಿಯಾಗಿದ್ದರೆ, 17 ಕೆರೆಗಳು ಶೇ.31ರಿಂದ 50 ಮತ್ತು 31 ಕೆರೆಗಳಲ್ಲಿ ಶೇ.30 ನೀರು ಸಂಗ್ರಹವಾಗಿವೆ.
ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಹಿನ್ನೆಲೆ ಕೆರೆಗಳ ಸ್ಥಿತಿ ಉತ್ತಮವಾಗಿದ್ದು, ಇದರಿಂದ ಅನೇಕ ಗ್ರಾಮಗಳ ನೀರಿನ ಸಮಸ್ಯೆ ನಿವಾರಣೆಯಾಗುವುದರ ಜತೆಗೆ ಜಾನುವಾರುಗಳಿಗೂ ಸಹಾಯವಾಗಿದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಅಂತ್ಯಕ್ಕೆ ಇಲ್ಲವೇ ನಂತರ ಉತ್ತಮ ಮಳೆಯಾದರೆ ಕೆರೆಗಳು ತುಂಬಿಕೊಳ್ಳುತ್ತಿದ್ದವು. ಆದರೆ ಈ ವರ್ಷ ಉತ್ತಮ ಮಾನ್ಸೂನ್ ಇದ್ದು, ಮುಂಗಾರು ಋತುವಿನಲ್ಲೇ ಮಳೆ ಆರ್ಭಟದಿಂದ ಭಾರಿ ಪ್ರಮಾಣದಲ್ಲಿ ಕೆರೆ-ಕಟ್ಟೆಗಳಿಗೆ ನೀರು ಹರಿದು ಬಂದಿವೆ. ಈಗಾಗಲೇ ಜಿಲ್ಲೆಯ ಶೇ.30 ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, ಮತ್ತೆ ಮಳೆಯಾದರೆ ಇನ್ನುಳಿದ ಕೆರೆಗಳು ತುಂಬಿಕೊಳ್ಳಲಿವೆ. ಅತಿವೃಷ್ಟಿಯಿಂದ ಕೃಷಿಕರು ಬೆಳೆ ಕಳೆದುಕೊಂಡರೂ ಕೆರೆಗಳ ಭರ್ತಿ ನೆಮ್ಮದಿ ತಂದಿದೆ.
ಕಳೆದೆರಡು ವರ್ಷಗಳಿಂದ ಉತ್ತಮ ಮಳೆಯಿಂದಾಗಿ ಬೀದರ ಜಿಲ್ಲೆಯ ಕೆರೆಗಳು ಉತ್ತಮ ಸ್ಥಿತಿಯಲ್ಲಿವೆ. ಈ ವರ್ಷದ ಮುಂಗಾರು ಋತುವಿನಲ್ಲೇ 124 ಕೆರೆಗಳ ಪೈಕಿ 26 ಕೆರೆಗಳು ಈಗಾಗಲೇ ಸಂಪೂರ್ಣ ಭರ್ತಿಯಾಗಿವೆ. ಅಂತರ್ಜಲ ವೃದ್ಧಿ ಜತೆಗೆ ಮುಂದೆ ಬೆಳೆಗಳಿಗೆ ನೀರು, ಜನ-ಜಾನುವಾರುಗಳ ದಾಹ ನೀಗಿಸಲು ಸಹಕಾರಿಯಾಗಲಿದೆ. ಯಾವುದೇ ಕೆರೆ ಅಪಾಯ ಮಟ್ಟದಲ್ಲಿಲ್ಲ. ನೀರಿನ ಒಳಹರಿವು ಗಮನಿಸಿ ಕೆರೆ ಗೇಟ್ ತೆಗೆದು ನೀರು ಬಿಟ್ಟು ಒತ್ತಡ ಹೆಚ್ಚಾಗದಂತೆ ನೋಡಿಕೊಳ್ಳಲಾಗುವುದು.
-ಸುರೇಶ ಮೇದಾ, ಇಇ, ಸಣ್ಣ ನೀರಾವರಿ ಇಲಾಖೆ, ಬೀದರ
-ಶಶಿಕಾಂತ ಬಂಬುಳಗೆ