ಕುಷ್ಟಗಿ: ಮಳೆಗಾಲದಲ್ಲಿ ಕೆರೆ ತುಂಬಿ ಕೋಡಿ ಬಿದ್ದರೆ ವರ್ಷ ಪೂರ್ತಿ ನೀರಿನ ಸಂಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ನಿರೀಕ್ಷೆ ಕಿಲ್ಲಾರಹಟ್ಟಿಯಲ್ಲಿ ಹುಸಿಯಾಗಿದೆ. ಕೆರೆಯ ಬಗ್ಗೆ ನಿರ್ಲಕ್ಷé ಮುಂದುವರಿದ ಹಿನ್ನೆಲೆಯಲ್ಲಿ 500 ಎಕರೆಯ ಕೆರೆಯಲ್ಲಿ ಮುನ್ನೂರು ಎಕರೆ ಮುಳ್ಳುಕಂಟಿ ಬೆಳೆದಿದೆ.
ಕುಷ್ಟಗಿ, ಸಿಂಧನೂರು, ಲಿಂಗಸುಗೂರು ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಕನಕನಾಲ ಯೋಜನೆಯಲ್ಲಿ ನಿರ್ಮಾಣವಾದ ಈ ಕೆರೆ ಕರ್ನಾಟಕ ನೀರಾವರಿ ನಿಗಮದ ಅಧೀನದಲ್ಲಿದೆ. ಇದು ಅರ್ಧ ಶತಮಾನಕ್ಕೂ ಅಧಿಕ ಇತಿಹಾಸವಿರುವ ಕೆರೆಯಾಗಿದೆ. 1962ರಲ್ಲಿ ಹಿಂದಿನ ಲೋಕೋಪಯೋಗಿ ಸಚಿವ ಎಂ.ಎಚ್. ಚನ್ನಬಸಪ್ಪ ಕೆರೆಗೆ ಶಿಲಾನ್ಯಾಸ ನೆರವೇರಿಸಿದ್ದರು. 1970ರಲ್ಲಿ ಈ ಕೆರೆ ಪೂರ್ಣಗೊಂಡಿದ್ದು, 252 ಹೆಕ್ಟೇರ್ ವಿಸ್ತೀರ್ಣದಲ್ಲಿ 15,900 ಮೀಟರ್ ಉದ್ದದ 0.225 ಟಿಎಂಸಿ ಅಡಿ ನೀರು ಸಂಗ್ರಹ ಸಾಮಾರ್ಥ್ಯ ಹೊಂದಿದೆ. 189.44 ಚದರ ಮೀಟರ್ ವ್ಯಾಪ್ತಿಯ 5,100 ಎಕರೆಗೆ ನೀರುಣಿಸುವ ಮಹಾತ್ವಕಾಂಕ್ಷಿ ಯೋಜನೆಯಾಗಿದೆ. ಆದರೆ ಕೆರೆ ನಿರ್ಮಾಣದಿಂದ ಇಂದಿನವರೆಗೂ ರೈತಾಪಿ ವರ್ಗಕ್ಕೆ ಈ ಕೆರೆ ಅಕ್ಷಯ ಪಾತ್ರೆಯಾಗದೇ, ಸಮಸ್ಯೆಗಳ ಆಗರವಾಗಿದೆ.
ಮುಳ್ಳು ಕಂಟಿ: ಒಮ್ಮೆ ಕೆರೆ ಭರ್ತಿಯಾದರೆ ಎರಡೂ¾ರು ಬೆಳೆಗಳಿಗೆ ನೀರುಣಿಸುವ ಉದ್ದೇಶದ ಹಿನ್ನೆಲೆಯಲ್ಲಿ ಅನುಷ್ಠಾನಗೊಂಡ ಯೋಜನೆಯಲ್ಲಿ ಒಂದೂ ಬೆಳೆಬೆಳೆಯಾಗುತ್ತಿಲ್ಲ. ಈ ಕೆರೆಯಿಂದ ಕಿಲ್ಲಾರಹಟ್ಟಿ, ಆರ್ಯಭೋಗಾಪೂರ ಸೇರಿದಂತೆ ಮಾಂಪುರ, ರತ್ನಾಪುರ ಹಟ್ಟಿ, ರತ್ನಾಪುರ ಬೊಮ್ಮನಾಳ, ಸಂಕನಾಳ, ಗುಂಡ, ಹೊಗರನಾಳ, ಗುಡಿಹಾಳ, ಹತ್ತಿಗುಡ್ಡ, ಗದ್ದಡಕಿ, ಬಪ್ಪರ ಈ ಗ್ರಾಮಗಳ ವ್ಯಾಪ್ತಿಯ ಜಮೀನುಗಳಿಗೆನೀರುಣಿಸಲು ಸಾಧ್ಯವಾಗಿಲ್ಲ. ಯಾಕೆಂದರೆ ಕೆರೆಯಲ್ಲಿ ಹಲವು ಹರ್ಷಗಳಿಂದ ಹೂಳು ತುಂಬಿದ್ದು, ಕೆರೆ ಹಿನ್ನೀರಿನ ಪ್ರದೇಶ ಹಾಗೂ ಕೋಡಿ ಪ್ರದೇಶದ ಭಾಗದಲ್ಲಿ ಮುಳ್ಳುಕಂಟಿಗಳು ಬೆಳೆದಷ್ಟೇ ಸಮಸ್ಯೆಗಳು ಬೆಳೆದಿದೆ.
ಕೆರೆ ಅಧುನೀಕರಣ: 2000ನೇ ಇಸ್ವಿಯಿಂದ ಹಲವು ಹೋರಾಟ ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಕನಕನಾಲದ ಕಿಲ್ಲಾರಹಟ್ಟಿ ಸಂಗ್ರಹ ಸಾಮಾರ್ಥ್ಯ ಹೆಚ್ಚಿಸಲು ಆರ್ಯಭೋಗಾಪೂರ ನಾಲೆಗೆ ಅಡ್ಡಲಾಗಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸಿ ಕನಕನಾಲ ಯೋಜನೆಗೆ ನೀರು ಹರಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ 92.72 ಕೋಟಿ ರೂ. ಡಿಪಿಆರ್ ಕೂಡ ಸಿದ್ಧವಾಗಿದ್ದು, ತಾಂತ್ರಿಕ ಒಪ್ಪಿಗೆಯ ಹಂತದಲ್ಲಿದೆ. ಮಸ್ಕಿ ನಾಲಕ್ಕೆ ಹರಿದು ನೀರನ್ನು ಮುಂಚಿತವಾಗಿ ಕನಕನಾಲ ಯೋಜನೆಗೆ ಹರಿಸುವ ಬಗ್ಗೆ ಗೊಂದಲದ ಗೂಡಾಗಿದ್ದು, ಇದನ್ನು ತಿಳಿಗೊಳಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ.
ಕಳೆದ 6 ವರ್ಷದ ಹಿಂದೆ ತುಂಬಿದ್ದ ಕರೆ ಮತ್ತೆ ಇದೀಗ ತುಂಬಿದ್ದು, ಕೆರೆ ತುಂಬಿದಾಗೊಮ್ಮೆ ಜನರನ್ನು ಆಕರ್ಷಿಸುತ್ತಿದೆ ವಿನಃ ನೀರಾವರಿ ಸಮಸ್ಯೆಗೆ ಪರಿಹಾರವಾಗಿಲ್ಲ. ಮುಳ್ಳು ಕಂಟಿಯಲ್ಲಿ ಕೆರೆ ಹಿನ್ನೀರು ಸಂಗ್ರಹಗೊಳ್ಳುವ ಕೆರೆಯ ದುಸ್ಥಿತಿಗೆ ಅಯ್ಯೋಎನಿಸುತ್ತಿದೆ. ಕೆರೆಯಲ್ಲಿ ಹೂಳು ತುಂಬಿರುವುದರಿಂದ ಕೆರೆ ಬೇಗನೆ ತುಂಬುತ್ತಿದೆ ಸರ್ಕಾರ ಹೂಳೆತ್ತಿಸಿ, ಕಾಲುವೆಗಳ ದುರಸ್ತಿ ಕ್ರಮಕ್ಕೆ ಆದ್ಯತೆ ನೀಡಬೇಕಿದೆ.
-ಸಿದ್ದು ಸಾಹುಕಾರ, ಸಂಕನಾಳ ಗ್ರಾಮಸ್ಥ
ಈ ಕೆರೆಯಲ್ಲಿ ಮುಳ್ಳು ಕಂಟಿ ತೆರವಿಗೆ ಪ್ರತಿವರ್ಷವೂ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ಕಾರಣಾಂತರಗಳಿಂದ ಹಣ ಬಿಡುಗಡೆಯಾಗಿಲ್ಲ. ಕೆರೆ ಅಧುನೀಕರಣ ಸೇರಿದಂತೆ ನೀರಿನ ಸಂಗ್ರಹ ಸಾಮಾರ್ಥ್ಯ ಹೆಚ್ಚಿಸಲು ಈಗಾಗಲೇ 92.72 ಕೋಟಿ ರೂ. ಪರಿಷ್ಕೃತ ಅಂದಾಜು ಅನುಮೋದನೆಯಲ್ಲಿದೆ.
-ಚಂದ್ರಶೇಖರ, ಜೆಇ ತುರುವಿಹಾಳ ನೀರಾವರಿ ಇಲಾಖೆ
-ಮಂಜುನಾಥ ಮಹಾಲಿಂಗಪುರ