Advertisement

ಕೆರೆಗಳು ಕಣ್ಮರೆ: ಮಾಹಿತಿ ಕೇಳಿದ ಹೈಕೋರ್ಟ್‌

01:07 AM Jun 08, 2019 | Lakshmi GovindaRaj |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸ್ವಾಧೀನದಲ್ಲಿದ್ದ ಕೆರೆಗಳ ಪೈಕಿ ನಾಲ್ಕೂವರೆ ವರ್ಷಗಳಲ್ಲಿ 15 ಕೆರೆಗಳು ಕಣ್ಮರೆಯಾಗಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ಈ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಶುಕ್ರವಾರ ನಿರ್ದೇಶನ ನೀಡಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆಗಳ ಒತ್ತುವರಿಗಳನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ಈ ನಿರ್ದೇಶನ ನೀಡಿದೆ. ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ 2014ರಲ್ಲಿ ಬಿಬಿಎಂಪಿ ಸ್ವಾಧೀನದಲ್ಲಿ 183 ಕೆರೆಗಳಿವೆ ಎಂದು ಸ್ವತಃ ಬಿಬಿಎಂಪಿ ಹೈಕೋರ್ಟ್‌ಗೆ ಹೇಳಿತ್ತು.

ಆ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತ್ತು. ಆದರೆ, ಈಗಿನ ಅರ್ಜಿ ವಿಚಾರಣೆ ವೇಳೆ 168 ಕೆರೆಗಳು ತನ್ನ ಸ್ವಾಧೀನದಲ್ಲಿವೆ ಎಂದು ಬಿಬಿಎಂಪಿ ಹೈಕೋರ್ಟ್‌ ಮೆಮೋ (ಜ್ಞಾಪನಾ ಪತ್ರ) ಸಲ್ಲಿಸಿದೆ. ಹೀಗೆ ಕಳೆದ ಬಾರಿಯ ಹೇಳಿಕೆಗೂ ಈ ಬಾರಿಯ ಹೇಳಿಕೆಯಲ್ಲಿ 15 ಕೆರೆಗಳ ವ್ಯತ್ಯಾಸ ಇರುವುದನ್ನು ಗಮನಿಸಿದ ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆಗಳ ಒತ್ತುವರಿಗಳನ್ನು ತೆರವುಗೊಳಿಸುವಂತೆ ಕೋರಿ ಸಿಟಿಜನ್‌ ಆ್ಯಕ್ಷನ್‌ ಗ್ರೂಪ್‌ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಪಿ.ಎಸ್‌. ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಬಿಬಿಎಂಪಿ ಸಲ್ಲಿಸಿದ ಮಾಹಿತಿಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ 15 ಕೆರೆಗಳ ವ್ಯತ್ಯಾಸ ಹೇಗಾಯಿತು?

ಆ ಕೆರೆಗಳು ಏನಾದವು? ಅವುಗಳ ವಾಸ್ತವ ಸಂಗತಿ ಅರಿಯಲು “ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ’ (ಎನ್‌ಇಇಆರ್‌ಐ) ವತಿಯಿಂದ ತಪಾಸಣೆ ಮತ್ತು ಲೆಕ್ಕಪರಿಶೋಧನೆ ನಡೆಸುವ ಬಗ್ಗೆ ತನ್ನ ಅಭಿಪ್ರಾಯ ತಿಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಜೂ.13ಕ್ಕೆ ಮುಂದೂಡಿತು.

Advertisement

19 ಕೆರೆಗಳು ಅಸ್ತಿತ್ವ ಕಳೆದುಕೊಂಡಿವೆ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸ್ವಾಧೀನದಲ್ಲಿರುವ ಒಟ್ಟು 168 ಕೆರೆಗಳ ಪೈಕಿ 19 ಕೆರೆಗಳು ತನ್ನ “ಗುಣಲಕ್ಷಣ’ (ಅಸ್ತಿತ್ವ) ಕಳೆದುಕೊಂಡಿದ್ದು, ಆ ಕೆರೆ ಜಾಗವನ್ನು ಈಗ ಬಸ್‌ ನಿಲ್ದಾಣ, ಕಚೇರಿಗಳು, ಕ್ರೀಡಾಂಗಣ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೌಕರರ ಬಡಾವಣೆ, ಕಂದಾಯ ವಸತಿ ಸಂಕೀರ್ಣ, ಗೃಹ ಮಂಡಳಿ ಬಡಾವಣೆ, ಬಿಡಿಎ ಬಡಾವಣೆ ಮತ್ತಿತರ ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಶುಕ್ರವಾರ ಹೈಕೋರ್ಟ್‌ಗೆ “ಮೆಮೋ” (ಜ್ಞಾಪನಾ ಪತ್ರ) ಸಲ್ಲಿಸಿದೆ.

ಒಟ್ಟು 168 ಕೆರೆಗಳ ಪೈಕಿ 75 ಕೆರೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದ್ದು ಅದನ್ನು ಬಿಬಿಎಂಪಿಯಿಂದ ನಿರ್ವಹಿಸಲಾಗುತ್ತಿದೆ. ಈ 75 ಕೆರೆಗಳಿಗೆ ಒಳಚರಂಡಿ ನೀರು ನುಗ್ಗುವುದನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಈ ಪೈಕಿ 19 ಕೆರೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, 2019ರ ಆ.31ರೊಳಗೆ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಹೇಳಿದೆ.

ಅಸ್ತಿತ್ವ ಕಳೆದುಕೊಂಡಿರುವ 19 ಕೆರೆಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ, ಇಷ್ಟೊಂದು ಪ್ರಮಾಣದಲ್ಲಿ ಕೆರೆಗಳನ್ನು ಒತ್ತುವರಿಯಾಗಲು ಅಥವಾ ಅವುಗಳು ಕೆರೆಯ ಗುಣಲಕ್ಷಣ ಕಳೆದುಕೊಳ್ಳಲು ಅವಕಾಶ ಕೊಟ್ಟಿದ್ದು ಹೇಗೆ, ಸರ್ಕಾರದ ಕಟ್ಟಡ, ಬಡಾವಣೆ, ಸಂಕೀರ್ಣಗಳನ್ನು ನಿರ್ಮಿಸಿದ್ದು ಹೇಗೆ ಎಂದು ಪ್ರಶ್ನಿಸಿದ ನ್ಯಾಯಾಲಯ, ಈ ಬಗ್ಗೆ ಮುಂದೇನು ಮಾಡಲಿದೆ ಎಂಬುದನ್ನು ತಿಳಿಸುವಂತೆ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next