ಮಹದೇವಪುರ: ಬೆಳ್ಳಂದೂರು ಕೆರೆಯ ನೊರೆ, ಬೆಂಕಿಗೆ ಕಾರಣವಾಗಿರುವ ರಾಸಾಯನಿಕಯುಕ್ತ ನೀರನ್ನು ವಿವಿಧ ಹಣ್ಣುಗಳ ಸಿಪ್ಪೆಗಳಿಂದ ಸುಲಭವಾಗಿ ಶುದ್ಧೀಕರಿಸುಬಹುದು ಎಂಬು ದನ್ನು ವೈಟ್‌ಫೀಲ್ಡ್ ಸಮೀಪದ ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಪ್ರಯೋಗದ ಮೂಲಕ ಸಾಬೀತುಪಡಿಸಿದ್ದಾರೆ.
ಏರೋನಾಟಿಕ್ಸ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ಎ.ಪವನ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದಲ್ಲಿ ಈ ಪ್ರಯೋಗ ಮಾಡಿದ್ದು, ಶುದ್ಧೀಕರಿಸಿದ ನೀರನ್ನು ಕುಡಿಯುವುದನ್ನು ಬಿಟ್ಟು ಬೇರೆಲ್ಲಾ ಕೆಲಸಗಳಿಗೆ ಬಳಸಲು ಯೋಗ್ಯವಾಗಿದೆ ಎಂದು ಕೆಎಸ್‌ಪಿಸಿಬಿ ಲ್ಯಾಬ್ ಪ್ರಮಾಣಪತ್ರ ನೀಡಿದೆ.
ಕೈಗಾರಿಕೆಗಳ ತ್ಯಾಜ್ಯ ನೀರಿನಿಂದ ಕೆರೆ ನೀರು ಕಲುಷಿತಗೊಳ್ಳುತ್ತಿರುವುದು ನಿಜವಾದರೂ, ಮನೆಯ ಡಿಟಜೆಂìಟ್ ತ್ಯಾಜ್ಯಗಳಲ್ಲಿರುವ ಫ್ಲೋರೈಡ್ ಮತ್ತು ಪಾಸ್ಪೇಟ್ ಅಂಶಗಳು ನೀರನ್ನು ಸಂಪೂರ್ಣ ಹಾಳುಗೆಡವಿವೆ. ಇದು ನೂರೆ ಮತ್ತು ಬೆಂಕಿಗೆ ಕಾರಣವಾಗುವುದು ಸಂಶೋಧನೆ ಸಮಯದಲ್ಲಿ ಕಂಡುಬಂದಿದೆ ಎಂದು ಪವನ್ ತಿಳಿಸಿದರು.
ಬೆಳ್ಳಂದೂರು ಕೆರೆಯ ನೊರೆ ಮತ್ತು ಬೆಂಕಿಯ ಸುದ್ದಿ ಓದಿದಾಗ, ಕೆರೆ ರಸ್ತೆಯಲ್ಲಿ ತೆರಳುವಾಗ ಭಯವಾಗುತ್ತಿತ್ತು. ಈ ಸಮಸ್ಯೆಗೆ ಏನಾದರೂ ಪರಿಹಾರ ಕಂಡುಕೊಳ್ಳಲೇಬೇಕೆಂಬ ಗುರಿಯೊಂದಿಗೆ 8 ತಿಂಗಳ ಹಿಂದೆ ಈ ಪ್ರಯೋಗ ಆರಂಭಿಸಿದೆ. ಸಮೀಪದ ಜ್ಯೂಸ್ ಶಾಪ್‌ಗ್ಳಿಂದ ಬಾಳೆಹಣ್ಣು, ಅನಾನಸ್, ಕಲ್ಲಂಗಡಿ, ನಿಂಬೆ ಮತ್ತು ಪಪ್ಪಾಯ ಹಣ್ಣುಗಳ ಸಿಪ್ಪೆಗಳನ್ನು ಸಂಗ್ರಹಿಸಿ, ಎರಡು ವಾರದವರೆಗೆ ಬಿಸಿಲಿನಲ್ಲಿ ಒಣಗಿಸಿದೆ. ನಂತರ ಈ ಸಿಪ್ಪೆಗಳನ್ನು ಪುಡಿಯಾಗಿ ಮಾರ್ಪಡಿಸಿ, ಕೃತಕ ಪೊರೆ ರೂಪಕ್ಕೆ ತರಲಾಯಿತು.
ಬಳಿಕ, ಬೆಳ್ಳಂದೂರು ಕೆರೆಯಿಂದ ಐದು ಲೀಟರ್ ಕೊಳಚೆ ನೀರನ್ನು ಸಂಗ್ರಹಿಸಿ ಪೊರೆಯ ಮೂಲಕ ಫಿಲ್ಟರ್ ಮಾಡಲು ಒಂದು ದಿನ ಬೇಕಾಯಿತು. ಹೀಗೆ ಶುದ್ಧವಾದ ನೀರು ಕುಡಿಯಲು ಬರುವುದಿಲ್ಲ. ಬದಲಿಗೆ ಬೇರೆಲ್ಲ ಕೆಲಸಗಳಿಗೂ ಬಳಸಬಹುದು ಎಂದು ಪವನ್ ಹೇಳಿದರು.
ಕಲ್ಲಂಗಡಿ ಸಿಪ್ಪೆಯಲ್ಲಿನ ಪೊಟ್ಯಾಶಿಯಂ, ಮೆಗ್ನಿಶಿಯಂ ಮತ್ತು ನಿಂಬೆ ಸಿಪ್ಪೆಗಳಲ್ಲಿನ ಸಿಟ್ರಿಕ್ ಆಮ್ಲವು ಫ್ಲೋರೈಢ್ ಮತ್ತು ಇತರ ಪ್ರಮುಖ ಎಲೆಕ್ಟ್ರೋಲ್ ಪಾಸಿಟಿವ್ ಅಂಶಗಳನ್ನು ತೊಡೆದುಹಾಕುವಲ್ಲಿ ನೆರವಾಗಲಿದೆ. ಕೈಗಾರಿಕಾ ತ್ಯಾಜ್ಯದಲ್ಲಿನ ಸೀಸ, ತಾಮ್ರ, ಕ್ಯಾಡ್ಮಿಯಂ ಮತ್ತು ಸತು ದ್ರಾವಣಗಳನ್ನು ಬಾಳೆಹಣ್ಣಿನ ಸಿಪ್ಪೆಗಳು ತೆಗೆದುಹಾಕುತ್ತವೆ.