Advertisement

ಬರನಾಡಿನಲ್ಲೂ ನೀರು ಹರಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

03:19 PM Jun 22, 2018 | Team Udayavani |

ಬೆಳ್ತಂಗಡಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಂಗಾರಹಳ್ಳಿ ಕೆರೆ ಪುನಶ್ಚೇತನ ಕಾರ್ಯ ನಡೆಸಿದ್ದು, ಬರ ನಾಡಿನಲ್ಲೂ ಸ್ಥಳೀಯ ಜನತೆಗೆ ಉತ್ತಮ ನೀರು ಲಭಿಸಿದೆ. ಮುಳಬಾಗಿಲು ತಾಲೂಕಿನ ಹನುಮನ ಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಂಗಾರಹಳ್ಳಿ ಗ್ರಾಮದ ಕೆರೆಯನ್ನು ಯೋಜನೆ ಮೂಲಕ ಸ್ಥಳೀಯರ ಸಹಭಾಗಿತ್ವದಲ್ಲಿ ಪುನಶ್ಚೇತನಗೊಳಿಸಲಾಗಿದೆ.

Advertisement

ಸುಮಾರು 18 ಎಕ್ರೆ ವಿಸ್ತೀರ್ಣದ ಕೆರೆಯ ಹೂಳನ್ನು 30 ವರ್ಷಗಳ ಬಳಿಕ ತೆಗೆದಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆಯಿಂದ 18.10 ಲಕ್ಷ ರೂ. ಅನುದಾನ ನೀಡಲಾಗಿದೆ.

15,371 ಲೋಡ್‌ ಹೂಳು
4 ಅಡಿ ಹೂಳು ಎತ್ತಲಾಗಿದ್ದು, ಸುಮಾರು 3 ತಿಂಗಳ ಕಾಲ ಕಾಮಗಾರಿ ನಡೆಸಲಾಗಿದೆ. 15,371 ಲೋಡ್‌ ಹೂಳನ್ನು ತೆಗೆಯಲಾಗಿದ್ದು, 377 ಕುಟುಂಬಗಳ 500 ಎಕ್ರೆ ಜಮೀನಿಗೆ ರೈತರು ಫಲವತ್ತಾದ ಹೂಳನ್ನು ಉಪಯೋಗಿಸಿಕೊಂಡಿದ್ದಾರೆ. 2 ಹಿಟಾಚಿ, 1 ಜೆಸಿಬಿ ಸುಮಾರು 1,494 ಗಂಟೆಗಳ ಕಾಲ ಕೆಲಸ ನಿರ್ವಹಿಸಿದೆ. ಮುಳಬಾಗಿಲು ತಾಲೂಕಿನ ಆಗಿನ ಶಾಸಕ ಕೊತ್ತೂರು ಜಿ. ಮಂಜುನಾಥ್‌ ಅವರೂ ಕೆರೆಯ ಕೆಲಸ ಪೂರ್ತಿಯಾಗುವವರೆಗೆ 1 ಜೆ.ಸಿ.ಬಿ. ನೀಡಿದ್ದು, 400 ಗಂಟೆ ಕೆಲಸ ನಿರ್ವಹಿಸಿದೆ.

ಉತ್ತಮ ಮಳೆಯಾದ ಕಾರಣ ಕೆರೆ ತುಂಬಿದೆ. ಕುಡಿಯುವ ನೀರಿಗೂ ಸಮಸ್ಯೆಯಿದ್ದ ಈ ಸುತ್ತಮುತ್ತಲಿನ 7 ಗ್ರಾಮಗಳಲ್ಲಿ ಬೋರ್‌ಗಳಲ್ಲಿ ನೀರು ದೊರೆಯುತ್ತಿದೆ. ಕುಡಿಯಲು, ಕೃಷಿ, ಜಾನುವಾರುಗಳೀಗೆ ನೀರಿನ ಕೊರತೆ ನೀಗಿಸಿದೆ. ಪ್ರಸ್ತುತ 9 ಅಡಿ ನೀರಿದೆ.

12.06 ಕೋ. ರೂ. ಅನುದಾನ 
2016-17 ಮತ್ತು 2017-18, 2018-19 ಸಾಲಿನಲ್ಲಿ 152 ಕೆರೆಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 12.06 ಕೋಟಿ ರೂ.ಅನುದಾನ ನೀಡಲಾಗಿದೆ. ಊರಿನವರ ಸಹಭಾಗಿತ್ವದ ಮೂಲಕ 17.93 ಕೋಟಿ ರೂ. ಖರ್ಚು ಮಾಡಿ ಕೆರೆ ಕಾಮಗಾರಿ ಮಾಡಲಾಗಿದೆ. ಕೆರೆ ಹೂಳನ್ನು ಸುಮಾರು 20 ಸಾವಿರಕ್ಕೂ ಮಿಕ್ಕಿ ರೈತರು ಪಡೆದುಕೊಂಡು ಕೃಷಿಗೆ ಬಳಕೆ ಮಾಡಿದ್ದಾರೆ.

Advertisement

ಶ್ರೀಕ್ಷೇತ್ರ ಧ.ಗ್ರಾ.ಯೋ. ಕೇಂದ್ರ ಕಚೇರಿ ಧರ್ಮಸ್ಥಳದ ಕೆರೆ ಅಭಿವೃದ್ಧಿ ವಿಭಾಗದ ನಿರ್ದೇಶಕರು, ಯೋಜನಾಧಿಕಾರಿ, 3 ಮಂದಿ ಎಂಜಿನಿಯರು, ಆಡಿಟರ್‌, ಪ್ರಬಂಧಕರು, ಕಚೇರಿ ಸಿಬಂದಿ, ಪ್ರಾದೇಶಿಕ ನಿರ್ದೇಶಕರು, ಜಿಲ್ಲಾ ನಿರ್ದೇಶಕರು, ತಾ| ಯೋಜನಾಧಿಕಾರಿ, ಮೇಲ್ವಿಚಾರಕರು ಪ್ರಯತ್ನದಿಂದ ಯೋಜನೆಗಳು ಫಲಪ್ರದವಾಗುತ್ತಿವೆ.

ಕೆರೆಗಳ ಪುನಶ್ಚೇತನ
28 ಜಿಲ್ಲೆಗಳ 152 ತಾಲೂಕುಗಳಲ್ಲಿ ಕೆರೆ ಪುನಶ್ಚೇತನ ನಡೆದಿದೆ. ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಬಯಲುಸೀಮೆ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿ ಮಾಡಲು ಮಾರ್ಗದರ್ಶನ ನೀಡಿದ್ದಾರೆ. ಸ್ಥಳೀಯ ಸಮಿತಿ ರಚಿಸಿ ಹೂಳೆತ್ತಲಾಗುತ್ತದೆ. ಮುಂದೆ ಈ ಕೆರೆಯ ನಿರ್ವಹಣೆಯನ್ನು ಸಮಿತಿ ಮಾಡುತ್ತದೆ.
– ಲಕ್ಷ್ಮಣ್‌ ಎಂ. ಎ
ಶುದ್ಧಗಂಗಾ, ಕೆರೆ-ಸ್ವಚ್ಛತಾ ವಿಭಾಗದ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next