ಕೊಪ್ಪಳ: ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ 290 ಕೋಟಿ ರೂ. ವೆಚ್ಚದ ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ 13 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಸ್ಥಿತಿ ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಎರಡೂ ಕ್ಷೇತ್ರದ ಶಾಸಕರು ಯೋಜನೆಯ ಪ್ರಗತಿಯನ್ನೊಮ್ಮೆ ನೋಡಬೇಕಿದೆ.
ಜಿಲ್ಲೆಯ ಕೆರೆಗಳನ್ನು ಹಂತ ಹಂತವಾಗಿತುಂಗಭದ್ರಾ ಜಲಾಶಯದಿಂದ ನೀರು ತುಂಬಿಸಿ, ಕೆರೆಗೆ ಜೀವಕಳೆ ಕೊಡಬೇಕೆಂಬ ಮಹದಾಸೆಯಿಂದ 290 ಕೋಟಿ ರೂ. ಅನುದಾನ ಮೀಸಲಿಟ್ಟು ಯೋಜನೆ ಘೋಷಿಸಿದೆ. ಆದರೆ ಎರಡು ವರ್ಷ ಗತಿಸಿದರೂ ಕೆರೆಗೆ ನೀರು ಹರಿಯುತ್ತಿಲ್ಲ. ಇದು ನಿಜಕ್ಕೂ ಬೇಸರ ತರಿಸಿದೆ.
ಕೆರೆಗಳಿಗೆ ನೀರು ಹರಿದರೆ ಸುತ್ತಲಿನ ಹತ್ತಾರು ಹಳ್ಳಿಗಳ ಜನರ ಬದುಕು ಹಸನಾಗಲಿದೆ.ಅಂತರ್ಜಲವು ಹೆಚ್ಚಳವಾಗಿ ಸುತ್ತಲಿನ ರೈತರ ಬೋರ್‌ವೆಲ್‌ಗಳು ರಿಚಾರ್ಜ್ ಆಗಿ ಕೃಷಿ ಬದುಕಿಗೆ ಆಸರೆಯಾಗಲಿದೆ. ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದು ಜನರು ಕೆರೆಗೆ ನೀರು ಯಾವಾಗ ಬರುವುದೋ ಎಂದು ಜಾತಕ ಪಕ್ಷಿಯಂತೆಕಾಯುತ್ತಿದ್ದಾರೆ. ಕೆಲ ವರ್ಷಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿ ಬ್ಯಾನರ್‌ನಲ್ಲಿ ಅಬ್ಬರಿಸಿದ್ದು, ಬಿಟ್ಟರೆ ಎಲ್ಲ ಕೆರೆಗಳಿಗೆ ನೀರು ಬಂದೇ ಇಲ್ಲ.
2 ವರ್ಷದಲ್ಲಿ 25 ಕಿಮೀ ಪ್ರಗತಿ: 290 ಕೋಟಿ ರೂ. ಮೊತ್ತದ ಕೆರೆ ತುಂಬಿಸುವ ಯೋಜನೆಯು 2018-19ರಲ್ಲಿ ಘೋಷಣೆಯಾಗಿದ್ದರೂ 2 ವರ್ಷಗಳಲ್ಲಿ ಕೇವಲ 25 ಕಿಲೋ ಮೀಟರ್ ನಷ್ಟು ಪ್ರಗತಿ ಕಂಡಿದೆ. ಉಳಿದಂತೆ ಎಲ್ಲಿಯೂ ದೊಡ್ಡ ಮಟ್ಟದಪ್ರಗತಿ ಕಂಡಿಲ್ಲ. ಅರಣ್ಯ ಇಲಾಖೆಯಿಂದ ಅನುಮತಿ,ವನ್ಯಜೀವಿ ಸಂರಕ್ಷಣಾ ಇಲಾಖೆಯಿಂದ ಅನುಮತಿ,ಕಂದಾಯ ಇಲಾಖೆಯಿಂದ ಅನುಮತಿ, ವಿದ್ಯುತ್‌ಗೆ ಅನುಮತಿ ಎಂದು ಹೇಳಿಕೊಂಡೇ ಕಾಲಹರಣ ಮಾಡಿ ಕಾಮಗಾರಿ ನಿಧಾನಗತಿ ಮಾಡಲಾಗಿದೆ. ತಾಲೂಕಿನ ಶಿವಪುರ ಬಳಿಯ ತುಂಗಭದ್ರಾ ಡ್ಯಾಂಹರಿವಿನ ತಟದ ದೂರದಲ್ಲಿ ಜಾಕವೆಲ್ ಕಾಮಗಾರಿನಡೆದಿದೆ. ಪೈಪ್‌ಲೈನ್ ಕಾಮಗಾರಿ ನಡೆದಿದೆ. ಆದರೆ ಉಳಿದಂತೆ ಏನೂ ನಡೆದೇ ಇಲ್ಲ.
ಯಾವ ಕೆರೆಗಳಿಗೆ ನೀರು?: ಕೊಪ್ಪಳ ತಾಲೂಕಿನ ಕೆರೆಹಳ್ಳಿ, ಗಿಣಗೇರಿ, ಹುಲಿಕೆರೆ, ಕುಕನೂರು ತಾಲೂಕಿನ ತಳಕಲ್, ಬೆಣಕಲ್ ಯಲಬುರ್ಗಾ ತಾಲೂಕಿನಲಾಲ್‌ತಲಾಬ್, ಮಲಕಸಮುದ್ರ, ವೀರಾಪುರ,ತಲ್ಲೂರು, ಮುರಡಿ, ನಿಲೋಗಲ್, ಕಲ್ಲಬಾವಿ, ಬಳ್ಳೋಟಗಿ ಸೇರಿದಂತೆ ಒಟ್ಟು 13 ಕೆರೆಗಳಿಗೆ ನೀರುತುಂಬಿಸುವ ಬಹು ದೊಡ್ಡ ಯೋಜನೆ ಇದಾಗಿದೆ. ತುಂಗಭದ್ರಾ ಜಲಾಶಯದಿಂದ ನದಿಪಾತ್ರಗಳಿಗೆ ಹರಿ ಬಿಡುವ ನೀರನ್ನೇ ಜಾಕ್‌ವೆಲ್ ಮೂಲಕ ಎತ್ತುವಳಿ ಮಾಡಿ ಮೂರು ತಾಲೂಕಿನ 13 ಕೆರೆಗಳಿಗೆ ತುಂಬಿಸುವ ಯೋಜನೆ ಇದಾಗಿದೆ.
ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಈ ಹಿಂದೆ ಯೋಜನೆ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿದ್ದಾರೆ. ಬಳಿಕ ಯೋಜನೆಯ ಪ್ರಗತಿ ಗಮನಿಸಿದಂತೆ ಕಾಣುತ್ತಿಲ್ಲ. ಎರಡೂ ಕ್ಷೇತ್ರದ ಜನರು ಕೆರೆಗಳಿಗೆ ನೀರು ಬರಲಿದೆ ಎಂದು ಕನಸು ಕಾಣುತ್ತಿದ್ದಾರೆ. ಯೋಜನೆಯು ಕೇವಲ ಲೆಕ್ಕಪತ್ರದಲ್ಲೇ ಕಾಲಹರಣ ಮಾಡುವುದಕ್ಕಿಂತ ಯೋಜನೆ ಬೇಗ ಪೂರ್ಣಗೊಂಡರೆ ಜನರಿಗೂ ನೆರವಾಗಲಿದೆ. ಆಮೆಗತಿಯಲ್ಲಿರುವ ಕಾಮಗಾರಿಗೆ ವೇಗ ಪಡೆದುಕೊಳ್ಳಲು ಎರಡು ಕ್ಷೇತ್ರದ ಶಾಸಕರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದೆ.
13 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು 25 ಕಿ.ಮೀ. ಪೈಪ್ ಲೈನ್ ಕಾಮಗಾರಿ ಮುಗಿದಿದೆ. ಇನ್ನು 64 ಕಿಮೀಕಾಮಗಾರಿಯಲ್ಲಿ ರೈಲ್ವೇ ಲೈನ್, ಹೆದ್ದಾರಿ ಸೇರಿ ಅರಣ್ಯ ಪ್ರದೇಶವಿದ್ದು, ಆಯಾ ಇಲಾಖೆಗಳಿಂದನಾವು ಅನುಮತಿ ಪಡೆಯಬೇಕಿದೆ. ಹಾಗಾಗಿವಿಳಂಬವಾಗಿದ್ದು, ಕೆಲವೊಂದು ಅನುಮತಿ ದೊರೆತಿವೆ. ಇನ್ಮುಂದೆ ಕಾಮಗಾರಿಗೆ ವೇಗ ಪಡೆದುಕೊಳ್ಳಲಿದೆ. ಮುರಳೀಧರ್, ಎಇ ಯಲಬುರ್ಗಾ
-ದತ್ತು ಕಮ್ಮಾರ