ಹಾವೇರಿ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಸುರಿದ ಸತತ ಮಳೆಯಿಂದಾಗಿ ಕೆರೆ-ಕಟ್ಟೆಗಳು ಭರ್ತಿಯಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಅಂತರ್ಜಲ ಮಟ್ಟ ಸಹ ಗಣನೀಯ ಪ್ರಮಾಣದಲ್ಲಿ ವೃದ್ಧಿಯಾಗಿದೆ. ಹೀಗಾಗಿ, ಭವಿಷ್ಯದ ದಿನಗಳಲ್ಲಿ ಜಿಲ್ಲೆಯಲ್ಲಿ ನೀರಿನ ಕೊರತೆ ನೀಗುವ ಜೊತೆಗೆ ಸಮೃದ್ಧ ಕೃಷಿ ಚಟುವಟಿಕೆಗೆ ಅವಕಾಶ ಲಭಿಸಲಿದೆ.
ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಳೆಯ ಕೊರತೆ ಮತ್ತು ಬಿಸಿಲ ಝಳದಿಂದಾಗಿ ಜಿಲ್ಲೆಯ ಹಲವೆಡೆ ಕೆರೆ-ಕಟ್ಟೆಗಳು ಬತ್ತಿಹೋಗಿದ್ದರೆ, ಇನ್ನು ಕೆಲವು ಕಡೆ ಕೆರೆಗಳ ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಬತ್ತಿಹೋಗುವ ಹಂತಕ್ಕೆ ತಲುಪಿದ್ದವು. ಬೇಸಿಗೆ ಕಾಲದಲ್ಲಿ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ನೀರಿನ ಹಾಹಾಕಾರ ಮುಗಿಲು ಮುಟ್ಟುತ್ತಿತ್ತು. ಇದೇ ಪರಿಸ್ಥಿತಿ ಮುಂದುವರೆದಿದ್ದರೆ ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಿಸುವ ಸಂಭವವಿತ್ತು. ಆದರೆ, ಇತ್ತೀಚಿನ ಎರಡ್ಮೂರು ವರ್ಷಗಳಲ್ಲಿ ಸುರಿದ ಮಳೆ ಹಾಗೂ ಪ್ರಸಕ್ತ ವರ್ಷ ಸುರಿದ ಸತತ ಮಳೆಯಿಂದಾಗಿ ನೀರಿಗಾಗಿ ಎದುರಾಗುತ್ತಿದ್ದ ಹಾಹಾಕಾರ ತಪ್ಪಿದೆ. ಅಲ್ಲದೇ, ಗ್ರಾಮೀಣ ಭಾಗಗಳಲ್ಲಿನ ಹಲವಾರು ಕೆರೆ-ಕಟ್ಟೆಗಳು ಇಂದು ಭರ್ತಿಯಾಗಿ ಕೋಡಿ ಹರಿಯುತ್ತಿದೆ.
ಜಿಲ್ಲೆಯ ಕೆರೆಗಳಿಗೆ ಜೀವಕಳೆ: ಜಿಲ್ಲೆಯ ಪ್ರಮುಖ ಕೆರೆಗಳಾದ ಹಾವೇರಿಯ ಹೆಗ್ಗೇರಿ ಕೆರೆ, ಕಾಗಿನೆಲೆ ಕೆರೆ, ರಟ್ಟಿಹಳ್ಳಿಯ ಮಗದ ಮಾಸೂರ ಕೆರೆ, ಶಿಗ್ಗಾವಿಯ ನಾಗನೂರ ಕೆರೆ, ಗುತ್ತಲ ಪಟ್ಟಣದ ದೊಡ್ಡ ಕೆರೆ, ಹಿರೇಕೆರೂರು ದುರ್ಗಾದೇವಿ ಕೆರೆ, ಸವಣೂರಿನ ಮೋತಿ ತಲಾಬ್ ಕೆರೆ ಸೇರಿದಂತೆ ಜಿಲ್ಲೆಯ ಪ್ರಮುಖ ಕೆರೆ-ಕಟ್ಟೆಗಳು ಭರ್ತಿಯಾಗಿ ಕಳೆಗಟ್ಟಿವೆ. ಜೊತೆಗೆ ಜಿಲ್ಲೆಯಲ್ಲಿ ಸುರಿದ ಸತತ ಮಳೆಯಿಂದಾಗಿ ಅಂತರ್ಜಲಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ನೀರಿಲ್ಲದೇ ಬತ್ತಿ ಹೋಗಿದ್ದ ಬೋರವೆಲ್ ಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಅಂತರ್ಜಲಮಟ್ಟ ಹೆಚ್ಚಳ: ಇತ್ತೀಚಿನ ಎರಡ್ಮೂರು ವರ್ಷಗಳಲ್ಲಿ ಸುರಿದ ಮಳೆ ಹಾಗೂ ಪ್ರಸಕ್ತ ವರ್ಷ ಸುರಿದ ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಏಕಾಏಕಿ ಹೆಚ್ಚಳಗೊಂಡಿದೆ. ಅದರಲ್ಲೂ ನೀರಿಲ್ಲದೇ ಸಾಕಷ್ಟು ವರ್ಷ ಬತ್ತಿ ಹೋಗಿದ್ದ ಬೋರವೆಲ್‌ಗಳಲ್ಲಿ ಇಂದು ನೀರು ಉಕ್ಕಿ ಹರಿಯುತ್ತಿರುವುದು ಜಿಲ್ಲೆಯಲ್ಲಿನ ಅಂತರ್ಜಲ ವೃದ್ಧಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ 2017ರಲ್ಲಿ ಅಂತರ್ಜಲಮಟ್ಟ 23.35 ಮೀಟರ್, 2018ರಲ್ಲಿ 19.98 ಮೀ., 2019ರಲ್ಲಿ 17.56ಮೀ., 2020ರಲ್ಲಿ 11.71ಮೀ., 2021ರಲ್ಲಿ 9.46ಮೀ. ಪ್ರಸಕ್ತ ವರ್ಷ ಆಗಸ್ಟ್ ವರೆಗೆ 8.87ಮೀಟರ್ ದಾಖಲಾಗಿದೆ. ಜಿಲ್ಲೆಯ ಕಳೆದ ಐದು ವರ್ಷಗಳ ಈ ಅಂಕಿ ಅಂಶಗಳನ್ನು ನೋಡಿದಾಗ ವರ್ಷದಿಂದ ವರ್ಷಕ್ಕೆ ಅಂತರ್ಜಲಮಟ್ಟ ವೃದ್ಧಿಯಾಗಿರುವುದು ಕಂಡುಬರುತ್ತದೆ.
ನೆಲಕಚ್ಚಿದ ಬೆಳೆಗಳು: ಜಿಲ್ಲೆಯಲ್ಲಿ ಸುರಿದ ಸತತ ಮಳೆಯಿಂದಾಗಿ ಒಂದುಕಡೆ ಅಂತರ್ಜಲಮಟ್ಟ ಹೆಚ್ಚಾಗಿದ್ದರೆ, ಇನ್ನೊಂದೆಡೆ ಹವಾಮಾನ ವೈಪರೀತ್ಯದಿಂದ ಸುರಿದ ಮಳೆಗೆ ಪ್ರಮುಖ ಬೆಳೆಗಳೆಲ್ಲ ಬಹುತೇಕ ನೆಲಕಚ್ಚಿವೆ. ನಿರಂತರ ಸುರಿದ ಮಳೆಗೆ 60,933.66 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಕಷ್ಟಪಟ್ಟು ಕೃಷಿ ಮಾಡಿದ್ದ ರೈತರ ಫಸಲು ಕೈತಪ್ಪಿ ಹೋಗಿದ್ದರಿಂದ ಅನ್ನದಾತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ನಿರಂತರ ಸುರಿದ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಳಗೊಂಡು ಬೆಳೆ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು “ಹಸಿ ಬರಗಾಲ’ ಎಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕೆಂದು ರೈತ ಸಂಘಟನೆಗಳು ಒತ್ತಾಯಿಸುತ್ತಿವೆ.
ಜಲಶಕ್ತಿ ಹಾಗೂ ಅಮೃತ ಸರೋವರ ಅಭಿಯಾನದಡಿ ಜಿಲ್ಲೆಯಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೆರೆಗಳನ್ನು ಅಭಿವೃದ್ಧಿಪಡಿಸುವುದರಿಂದ ಅಂತರ್ಜಲಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. 2022-23ನೇ ಸಾಲಿನಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ 223 ಕೆರೆಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಅಂತರ್ಜಲಮಟ್ಟ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. –
ಮಹಮ್ಮದ್ ರೋಷನ್, ಜಿಪಂ ಸಿಇಒ
ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗಿದೆ. ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗುತ್ತಿದೆ. 2017ರಲ್ಲಿ 23.35ಮೀ. ಇದ್ದ ಅಂತರ್ಜಲಮಟ್ಟ ಪ್ರಸಕ್ತ ವರ್ಷ 8.87ಮೀ.ಗೆ ಬಂದಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಿ ನೀರು ಉಕ್ಕಿ ಹರಿಯುತ್ತಿವೆ. –
ಸಂತೋಷ ಪ್ಯಾಟಿಗಾಣಗೇರ, ಹಿರಿಯ ಭೂ ವಿಜ್ಞಾನಿ, ಅಂತರ್ಜಲ ಇಲಾಖೆ ಹಾವೇರಿ
-ವೀರೇಶ ಮಡ್ಲೂರ