Advertisement

ಕೆರೆ ಸಂಜೀವಿನಿ ಯೋಜನೆ ಅಡಿ 650 ಕೆರೆ ಅಭಿವೃದ್ಧಿ : ಅಪರ ಜಿಲ್ಲಾಧಿಕಾರಿ

01:02 PM Feb 08, 2021 | Team Udayavani |

ದೇವನಹಳ್ಳಿ: ಅಳಿವಿನ ಅಂಚಿನಲ್ಲಿರುವ ಕೆರೆಗಳಿಗೆ ಮೂಲ ಸ್ವರೂಪ ನೀಡಿ, ಜಲಸಂರಕ್ಷಣೆ ಮಾಡಲು ಸ್ಥಳೀಯರ ಸಹಕಾರ ಅತಿಮುಖ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್‌ ಕೆ. ನಾಯಕ ತಿಳಿಸಿದರು.

Advertisement

ತಾಲೂಕಿನ ವಿಶ್ವನಾಥಪುರ ಗ್ರಾಮದ ಕೆರೆ ಅಂಗಳದಲ್ಲಿ ಶ್ರೀ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕರೆ ಹೂಳೆತ್ತಿದರೆ ಅಂತರ್ಜಲಮಟ್ಟ ಹೆಚ್ಚಿ ಜನ-ಜಾನುವಾರು, ಪ್ರಾಣಿ ಸಂಕುಲಕ್ಕೆ ನೀರು ದೊರೆಯಲಿದೆ. ಜಿಲ್ಲೆಯಲ್ಲಿ ಅಂತರ್ಜಲ ಪ್ರಮಾಣ ನಿರೀಕ್ಷೆಗಿಂತಲೂ ಕೆಳಮಟ್ಟಕ್ಕೆ ಹೋಗುತ್ತಿದೆ. ಜಿಲ್ಲೆಯಲ್ಲಿ 650 ಕೆರೆ ಗುರುತಿಸಿದೆ. ಕೆರೆ ಸಂಜೀವಿನಿ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತಮುಂದಾಗಿದೆ ಎಂದರು.

30 ಕೆರೆ ಅಭಿವೃದ್ಧಿ: ಹೆಬ್ಟಾಳ ನಾಗವಾರ, ಕೆರೆಗಳಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಈಗಾಗಲೇ 9 ಕೆರೆಗಳಿಗೆ ತುಂಬಿಸಲು ಸರ್ಕಾರ ಮುಂದಾಗಿದೆ. ಸುಮಾರು 2 ವರ್ಷದ ಹಿಂದೆ ಸಿಎಸ್‌ಆರ್‌ ಯೋಜನೆಯಡಿ ಶೇ.2ರಷ್ಟು ಖಾಸಗಿ ಕಂಪನಿಗಳ ಅನುದಾನ ಸ್ಥಳೀಯರ, ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ 30 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಇದನ್ನೂ ಓದಿ :ವಿಧಾನಸೌಧದಲ್ಲಿ ಒಡೆಯರ್ ಭಾವಚಿತ್ರ ಅಳವಡಿಕೆಗೆ ಸ್ಪೀಕರ್ ಸಕಾರಾತ್ಮಕ ಸ್ಪಂದನೆ: ಸೋಮಶೇಖರ್

ಹೂಳೆತ್ತುವ ಕಾರ್ಯ: ಜಿಲ್ಲಾ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್‌ ನಾಯಕ್‌ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಗ್ರಾಮೀಣ ಭಾಗದ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. 42 ಎಕರೆ ವಿಸ್ತೀರ್ಣದ ಕೆರೆಯಲ್ಲಿ 15 ಲಕ್ಷ ರೂ.ವೆಚ್ಚದ ಹೂಳು ತೆಗೆಯುವ ಕಾರ್ಯ ಆಗುತ್ತಿದೆ ಎಂದರು.

Advertisement

ವಿಶ್ವನಾಥಪುರ ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷ ವಿನಯ್‌ ಕುಮಾರ್‌, ತಾಪಂ ಸದಸ್ಯೆ ಶೈಲಜಾ ಜಗದೀಶ್‌, ಜಿಲ್ಲಾಧಿಕಾರಿ ಕಚೇರಿಯ ಆರ್‌ಎಚ್‌ಎಂ ಪಿ. ಗಂಗಾಧರ್‌, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್‌, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ, ಪಿಡಿಒ ಉಷಾ, ಕಾರ್ಯದರ್ಶಿ ಪದ್ಮ,  ಮುಖಂಡ ಮನಗೊಂಡನಹಳ್ಳಿ ಜಗದೀಶ್‌, ನಾರಾಯಣಸ್ವಾಮಿ ಗ್ರಾಮಸ್ಥರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next