ಬೆಂಗಳೂರು: ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಕೆರೆಗಳ ಡಿನೋಟಿಫಿಕೇಶನ್ ಮಾಡಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಗರಂ ಆಗಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ. 2 ಪುಟಗಳ ಪತ್ರ ಬರೆದಿರುವ ಅವರು, ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ “ಕೆರೆಗಳ ಡಿನೋಟಿಫಿಕೇಶನ್ ಮಾಡುವ ಬದಲು ಕೆರೆಗಳ ಪುನರುಜ್ಜೀವನ ಮಾಡಬೇಕು. ಕೆರೆಗಳು ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸರ್ಕಾರದ ಕ್ರಮದ ಬಗ್ಗೆ ಮಧ್ಯ ಪ್ರವೇಶಿಸುವಂತೆ ಹಲವಾರು ಜನರು ಪತ್ರ ಬರೆದಿದ್ದಾರೆ. ಕೆರೆಗಳನ್ನು ರಕ್ಷಿಸುವ ವಿಷಯದಲ್ಲಿ ಸರ್ಕಾರದಷ್ಟೇ ಸಾರ್ವಜನಿಕರಿಗೂ ಹಕ್ಕಿದೆ.
ಸರ್ಕಾರದ ನಿರ್ಧಾರದಿಂದ ರೈತರು, ಪರಿಸರವಾದಿಗಳು, ಸಾರ್ವಜನಿಕರು ಆತಂಕಗೊಂಡಿದ್ದಾರೆ. ಸರ್ಕಾರ ಕೆರೆಗಳ ಡಿನೋಟಿಫಿಕೇಶನ್ ಮಾಡುವುದಿಲ್ಲ ಎಂದು ನಂಬಿದ್ದೇನೆ. ಈ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ವಾರದಲ್ಲಿ ಮಾಹಿತಿ ನೀಡುವಂತೆ’ ರಾಜ್ಯಪಾಲರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಸರ್ಕಾರ ಕೆರೆಗಳ ಡಿನೋಟಿಫೈಗೆ ಮುಂದಾಗಿದೆ ಎಂಬುದು ಆಧಾರ ರಹಿತ ಆರೋಪ. ಸರ್ಕಾರದ ವಿರೋಧಿಗಳ
ಈ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಇಂಥ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ.
– ಸಿದ್ದರಾಮಯ್ಯ ಸಿಎಂ