ಪಾತಪಾಳ್ಯ: ಕೆರೆಯಲ್ಲಿ ನೀರು ಶೇಖರಣೆಯಿಂದ ಅಂತರ್ಜಲವೃದ್ಧಿ ಆಗುವುದಲ್ಲದೆ, ಕೊಳವೆ ಬಾವಿಗಳಲ್ಲಿ ಸಮೃದ್ಧವಾದ ನೀರು ಲಭ್ಯವಾಗಿ ರೈತರಸಮಸ್ಯೆ ನಿವಾರಣೆಯಾಗುತ್ತದೆ ಎಂದು ಪೋಲನಾಯಕನಪಲ್ಲಿ ಗ್ರಾಪಂ ಆಡಳಿತಾಧಿಕಾರಿ ಸುನೀಲ್‌ಕುಮಾರ್ ತಿಳಿಸಿದರು.
ಪೋಲನಾಯಕನಪಲ್ಲಿ ಬಳಿ ಇರುವ ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರು ಮಾಡುತ್ತಿದ್ದ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಖಾತ್ರಿ ಯೋಜನೆಯಲ್ಲಿ ಕಾಮಗಾರಿ ಮಾಡುವಾಗ ಜಾಬ್‌ಕಾರ್ಡ್‌ನಲ್ಲಿ ನೋಂದಣಿ ಮಾಡಿರುವ ವ್ಯಕ್ತಿಯೇ ಕೆಲಸ ಮಾಡಬೇಕು. ನರೇಗಾ ಅಭಿಯಂತರರು ನಿಗದಿ ಪಡಿಸಿದ ಸ್ಥಳದಲ್ಲಿ ಹಾಗೂ ಅವರು ತಿಳಿಸಿದ ವಿಸ್ತೀರ್ಣದ ಪ್ರಕಾರ ಕಾಮಗಾರಿ ಮಾಡಬೇಕು ಎಂದರು.
ಯಾವುದೇ ಕಾರಣಕ್ಕೂ ವೃದ್ಧರು, ವಿದ್ಯಾರ್ಥಿಗಳು, ಅಪ್ರಾಪ್ತರು ಕೆಲಸಕ್ಕೆ ಹಾಜರಾಗಬಾರದು. ಹಾಗೆ ಮಾಡಿದ ಪಕ್ಷದಲ್ಲಿ ಕಾಯಕಬಂಧು ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ನರೇಗಾ ಅಭಿಯಂತರ ಹರಿನಾಥರೆಡ್ಡಿ, ಪಿಡಿಒ ಅಯೋಬ್‌ಪಾಷಾ, ಕರ ವಸೂಲಿಗಾರ ಎ.ರಾಜಶೇಖರ ರಾವ್ ಹಾಗೂ ಕೂಲಿ ಕಾರ್ಮಿಕರು ಹಾಜರಿದ್ದರು.
ಕಸ ಸಂಗ್ರಹಕ್ಕಿಲ್ಲ ಸೂಕ್ತ ಗಾಡಿ : ಬಾಗೇಪಲ್ಲಿ: ತುಕ್ಕು ಹಿಡಿದ ತಗಾಡಿಯಲ್ಲೇ ನೌಕರರು ಕಸ ಸಂಗ್ರಹಿಸುತ್ತಿರುವ ದೃಶ್ಯ ತಾಲೂಕಿನ ಗೂಳೂರು ಗ್ರಾಮದಲ್ಲಿ ಕಂಡು ಬಂದಿದೆ.
ಹೋಬಳಿ ಕೇಂದ್ರವಾದ ಗೂಳೂರು ಗ್ರಾಮದಲ್ಲಿ ಕಳೆದ 10 ವರ್ಷಗಳ ಹಿಂದೆ ಕಸ ಸಂಗ್ರಹಿಸಲು ತಳ್ಳುವ ಗಾಡಿಗಳನ್ನು ಆಗಿನ ಪಿಡಿಒ ರಾಜಗೋಪಾಲ್‌ರೆಡ್ಡಿ ಖರೀದಿ ಮಾಡಿದ್ದರು. ಅಲ್ಲಿಂದ ಇದುವರೆಗೂ ಹೊಸ ಕಸ ಸಂಗ್ರಹಿಸುವ ಗಾಡಿ ಖರೀದಿ ಮಾಡಿಲ್ಲ. ಗ್ರಾಮದ ಜಾಡಮಾಲಿ ನರಸಿಂಹಪ್ಪ ಪ್ರತಿ ದಿನ ಕಿಲುಬು ಹಿಡಿದು ತೂತು ಬಿದ್ದಿರುವ ತಳ್ಳುವ ಗಾಡಿಯಲ್ಲೇ ಕಸ ಸಂಗ್ರಹಿಸುತ್ತಿದ್ದಾರೆ. ಸಂಗ್ರಹಿಸಿದ ಕಸ ತೂತಿನಲ್ಲೇ ಉದುರಿ ಹೋಗುತ್ತಿದೆ. ಜಾಡಮಾಲಿ ಇದನ್ನು ತಪ್ಪಿಸಲು ಗಾಡಿಗೆ ಗೋಣಿ, ಪ್ಲಾಸ್ಟಿಕ್ ಚೀಲ ಕಟ್ಟಿದರೂ ಕಸ ಸೋರುತ್ತಿದೆ. ಈಗ ಹಣಕಾಸಿನ ಸಮಸ್ಯೆ ಇದೆ. ಆದರೂ, ಅತೀ ಶೀಘ್ರದಲ್ಲೇ ಕಸ ಸಂಗ್ರಹಿಸುವ ಗಾಡಿ ಖರೀದಿ ಮಾಡುತ್ತೇನೆ. ಎಂದು ಪಿಡಿಒ ಭಾಗ್ಯಲಕ್ಷ್ಮೀ ಹೇಳಿದರು.
ಗೂಳೂರು ಗ್ರಾಪಂಗೆ ಹೊಸದಾಗಿ ಆಡಳಿತಾಧಿಕಾರಿ ಆಗಿ ನೇಮಕಗೊಂಡಿದ್ದೇನೆ. ತುಕ್ಕು ಹಿಡಿದ ಗಾಡಿಯಲ್ಲಿ ಕಸ ಸಂಗ್ರಹಿಸುತ್ತಿರುವುದು ನನ್ನ ಗಮನಕ್ಕೆ ಇಲ್ಲ. ಕೂಡಲೇ ಪಿಡಿಒಗೆ ಹೊಸ ಗಾಡಿ ಖರೀದಿಸಲು ಹೇಳುತ್ತೇನೆ.
– ರಾಜೇಂದ್ರಪ್ರಸಾದ್, ಆಡಳಿತಾಧಿಕಾರಿ, ಗೂಳೂರು ಗ್ರಾಪಂ