ಬೆಳ್ತಂಗಡಿ: ಪಶ್ಚಿಮ ಘಟ್ಟದ ತಪ್ಪಲಿನ ವನಸಿರಿಯ ಮಧ್ಯೆ ಶತಮಾನಗಳಿಂದ ನೆಲೆಸಿರುವ ಅದೆಷ್ಟೋ ಕುಟುಂಬಗಳು ಮೂಲ ಸೌಕರ್ಯದಿಂದ ವಂಚಿತವಾಗಿದೆ. ಪ್ರಸಕ್ತ ಹಂತ ಹಂತವಾಗಿ ಅಭಿವೃದ್ಧಿಯಾದರೂ ವನವಾಸ ತಪ್ಪುತ್ತಿಲ್ಲ. ಪ್ರಸಕ್ತ ಮಲವಂತಿಗೆ, ಮಿತ್ತಬಾಗಿಲು ಸಹಿತ ಒಂದೊಮ್ಮೆ ಕುಗ್ರಾಮವೆಂದೇ ಗುರುತಿಸಲ್ಪಟ್ಟ ದಿಡುಪೆ ಗ್ರಾಮಕ್ಕೆ ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಬಹುಮುಖ್ಯವಾಗಿ ಸಂಪರ್ಕ ಬೆಸುಗೆಯಾಗಿರುವ ಲಾೖಲಕ್ರಾಸ್- ಕೊಲ್ಲಿ ರಸ್ತೆ ಅಭಿವೃದ್ಧಿಗೆ ಸರಕಾರ ಇದೀಗ 9 ಕೋ.ರೂ. ಅನುದಾನ ಒದಗಿಸಿದೆ.
ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಮಲವಂತಿಗೆ ಗ್ರಾಮದ ರಾಷ್ಟ್ರೀಯ ಉದ್ಯಾನದಂಚಿನಲ್ಲಿರುವ ಕಟ್ಟಕಡೆಯ ಊರು ಎಳನೀರು ಭಾಗಕ್ಕೆ ತಲುಪಲು 100 ಕಿ.ಮೀ. ಸುತ್ತಿಬಳಸಿ ಬರಬೇಕು. ಇದಕ್ಕಾಗಿ ಸಂಸೆ ರಸ್ತೆ ಅಭಿವೃದ್ಧಿಗೆ ಬಹಳಷ್ಟು ಪ್ರಯತ್ನ ಪಡಲಾಗುತ್ತಿದ್ದರೂ ಇನ್ನೂ ಕೈಗೂಡಿಲ್ಲ. ಮತ್ತೂಂದೆಡೆ ಮಲವಂತಿಗೆ ಗ್ರಾಮದ ದಿಡುಪೆ ಸಹಿತ, ಕೊಲ್ಲಿ ದುರ್ಗಾ ಪರಮೇಶ್ವರೀ ದೇವಸ್ಥಾನ, ಕಡಿರುದ್ಯಾವರ ಗ್ರಾಮ, ಮಿತ್ತಬಾಗಿಲು ಸಹಿತ ಕಾಜೂರು ದರ್ಗಾ ಸೇರಿದಂತೆ ಅಲ್ಲಿರುವ ಜಲಪಾತಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕೆ ಹಾಗೂ ಅದಕ್ಕಿಂತಲೂ ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್‌ಗೆ ತೆರಳಲು ಉಜಿರೆ ಯಿಂದ ಬರುವ ರಸ್ತೆಗೆ ಪರ್ಯಾಯ ರಸ್ತೆಯಾಗಿ ಮುಂಡಾಜೆಯಿಂದ ಕೊಲ್ಲಿ- ಲಾೖಲವಾಗಿ ಬೆಳ್ತಂಗಡಿ ಪೇಟೆಗೆ ಸೇರಲು ಅತ್ಯವಶ್ಯ.
ಬೆದ್ರಬೆಟ್ಟು-ಕೊಲ್ಲಿ ರಸ್ತೆ ವಿಸ್ತರಣೆ
ಈಗಾಗಲೆ ಲಾೖಲ ಕ್ರಾಸ್‌ನಿಂದ ಬೆದ್ರಬೆಟ್ಟುವರೆಗೆ ರಸ್ತೆ ವಿಸ್ತರಣೆಗೊಂಡಿದೆ. ಬೆದ್ರಬೆಟ್ಟುವಿಂದ ಕೊಲ್ಲಿವರೆಗೆ 4 ಕಿ.ಮೀ. ರಸ್ತೆ ಕಿರಿದಾಗಿದೆ. ಲಾೖಲ ಕ್ರಾಸ್‌ನಿಂದ ಕೊಲ್ಲಿವರೆಗೆ 18 ಕಿ.ಮೀ. ದೂರದ ರಸ್ತೆಯಲ್ಲಿ ಬಾಡಿಗೆ ವಾಹನ ಸಹಿತ ಖಾಸಗಿ, ಸರಕಾರಿ ಬಸ್‌ಗಳು ದಿನನಿತ್ಯ ಓಡಾಡುತ್ತಿವೆ. ಹೀಗಾಗಿ ಇಲ್ಲಿನ ರಸ್ತೆ ವಿಸ್ತರಣಗೆ ಸ್ಥಳೀಯರಿಂದ ಬಹಳಷ್ಟು ಒತ್ತಡಗಳು ಕೇಳಿ ಬಂದಿದ್ದವು. ಇಲ್ಲಿನ ಕಾಜೂರು ಉರೂಸ್, ನೇತ್ರಾವತಿ ನದಿಯಲ್ಲಿ ನಡೆಯುವ ಕಂಬಳ ಸಮಯದಲ್ಲಂತೂ ತಾಸುಗಟ್ಟಲೆ ರಸ್ತೆ ತಡೆಯಾಗುತ್ತಿರುತ್ತದೆ. ಇದಕ್ಕಾಗಿಯೂ ರಸ್ತೆ ವಿಸ್ತರಣೆ ಆವಶ್ಯಕವಾಗಿತ್ತು. ಲಾೖಲದಿಂದ ಬೆದ್ರಬೆಟ್ಟುವರೆಗಿನ ರಸ್ತೆಯೂ ಅಲ್ಲಲ್ಲಿ ಹದಗೆಟ್ಟಿದ್ದರಿಂದ ಮರುಡಾಮರು ಕಾಮಗಾರಿಯೂ ತುರ್ತು ಅವಶ್ಯವಿತ್ತು.
ಲಾೖಲಕ್ರಾಸ್‌ನಿಂದ- ಕೊಲ್ಲಿವರೆಗೆ ರಸ್ತೆ ಅಭಿವೃದ್ಧಿಗೆ ಇದೀಗ ಲೋಕೋಪಯೋಗಿ ಇಲಾಖೆಯಡಿ 9 ಕೋ.ರೂ. ಅನುದಾನ ಮಂಜೂರುಗೊಳಿಸಿದ್ದು ಟೆಂಡರ್ ಹಂತದಲ್ಲಿದೆ. ಲಾೖಲದಿಂದ ಬೆದ್ರಬೆಟ್ಟು ರಸ್ತೆ ಈಗಾಗಲೆ ವಿಸ್ತರಣೆಗೊಂಡಿದ್ದರೂ ಅಲ್ಲಿಗೆ ಮರುಡಾಮರು ಅಗತ್ಯ. ಬೆದ್ರ ಬೆಟ್ಟುವಿನಿಂದ ಕೊಲ್ಲಿವರೆಗೆ 4 ಕಿ.ಮೀ.ರಸ್ತೆ ಐದೂವರೆ ಮೀಟರ್ ವಿಸ್ತಾರವಾಗಲಿದೆ.
ಗ್ರಾಮಗಳ ಸಂಪರ್ಕಕ್ಕೆ ವರದಾನ
ಒಂದು ಕಾಲದಲ್ಲಿ ದಿಡುಪೆ ಗ್ರಾಮಕ್ಕೆ ಸರಿಯಾದ ಸಂಪರ್ಕವಿಲ್ಲದೆ ಕುಗ್ರಾಮದಂತೆ ಭಾಸವಾಗಿತ್ತು. 2015ರಲ್ಲಿ ಮಾಜಿ ಶಾಸಕ ವಸಂತ ಬಂಗೇರ ಅವರ ಅವಧಿಯಲ್ಲಿ ನೇತ್ರಾವತಿ ನದಿಗೆ ಸುಸಜ್ಜಿತ ಸೇತುವೆ ನಿರ್ಮಿಸುವ ಮೂಲಕ ಬಹುದೊಡ್ಡ ಕೊಡುಗೆ ನೀಡಿದ್ದರು. ಆದರೆ ಕೂಡು ರಸ್ತೆ ಅಭಿವೃದ್ಧಿ ಬಾಕಿಯಾಗಿತ್ತು. ಬಳಿಕ ಹರೀಶ್ ಪೂಂಜ ಶಾಸಕರಾಗಿ ಆಯ್ಕೆಯಾದ ಬಳಿಕ ಎರಡು ಬದಿ ಕೂಡುರಸ್ತೆ ನಿರ್ಮಿಸಿ ಕೊಡುವ ಮೂಲಕ ನೆರವಾಗಿದ್ದರು.
ವರ್ಷಾಂತ್ಯದೊಳಗೆ ಪೂರ್ಣ ನಿರೀಕ್ಷೆ: ಲಾೖಲ-ಕೊಲ್ಲಿ 18 ಕೀ.ಮೀ. ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿ ಲೋಕೋ ಪಯೋಗಿ ಇಲಾಖೆಯಡಿ 9 ಕೋ.ರೂ. ಅನುದಾನ ಮೀಸಲಿರಿಸಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿದ್ದು ನವೆಂಬರ್ ಒಳಗೆ ಆರಂಭಿಸಿ, ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕೊಲ್ಲಿಯಿಂದ ಬೊಲ್ಲಾಜೆ ವರೆಗೆ 800 ಮೀ. ರಸ್ತೆಗೆ ಇದೇ ಅನುದಾನದಡಿ ರಸ್ತೆ ನಿರ್ಮಾಣವಾಗಲಿದೆ. –
ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ.
250 ಮನೆಗಳಿಗೆ ಅನುಕೂಲ: ಕೊಲ್ಲಿಯಿಂದ ಬೊಲ್ಲಾಜೆವರೆಗೆ 800 ಮೀ. ರಸ್ತೆ ಅಭಿವೃದ್ಧಿಯಾದರೆ ಮಿತ್ತಬಾಗಿಲು ಹಾಗೂ ಮಲವಂತಿಗೆ ಎರಡೂ ಗ್ರಾಮಗಳ ಕೊಲ್ಲಿಪಾಲು, ಪರಾರಿಗುಡ್ಡೆ, ಕುಂಬಪಾಲು, ಪಣಿಕಲ್ ಪಾಡಿಯ 250 ಮನೆಗಳ ಸಂಪರ್ಕ ಸುಗಮವಾಗಲಿದೆ. ಕುಡೆಂಚಾರು ಬಳಿ ಸೇತುವೆ ನಿರ್ಮಿಸುವಂತೆ ಶಾಸಕರಲ್ಲಿ ಮನವಿ ಮಾಡಲಾಗಿದೆ.
-ಕೇಶವ ಫಡಕೆ, ಪರಾರಿಮನೆ, ಸ್ಥಳೀಯರು.
-ಚೈತ್ರೇಶ್ ಇಳಂತಿಲ