ಕೊಲಂಬೋ: ಏಷ್ಯಾಕಪ್ ಮತ್ತು ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಹಿರಿಯ ಸದಸ್ಯರೊಬ್ಬರು ವಿದಾಯ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶ್ರೀಲಂಕಾದ ಬ್ಯಾಟ್ಸ್‌ಮನ್ ಲಹಿರು ತಿರಿಮನ್ನೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
33 ವರ್ಷ ವಯಸ್ಸಿನ ತಿರಿಮನ್ನೆ 2010 ರಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾಪರ್ಣೆ ಮಾಡಿದ್ದರು. ಅವರು ಲಂಕಾ ಪರ 44 ಟೆಸ್ಟ್, 127 ಏಕದಿನ ಮತ್ತು 26 ಟಿ20 ಪಂದ್ಯಗಳನ್ನು ಆಡಿದ್ದಾರೆ.
ತಿರಿಮನ್ನೆ 2014ರಲ್ಲಿ ಐಸಿಸಿ ವಿಶ್ವ ಟ್ವೆಂಟಿ-20 ಗೆದ್ದ ಲಂಕಾ ತಂಡದ ಪ್ರಮುಖ ಸದಸ್ಯರಾಗಿದ್ದರು.
ಇದನ್ನೂ ಓದಿ:Prince Khan…ಇದು ರೀಲ್ ಅಲ್ಲ…ಈತನೇ ಗ್ಯಾಂಗ್ಸ್ ಆಫ್ ವಾಸೈಪುರ್ ನ ನಿಜವಾದ ಪಾತಕಿ!
“ನಾನು ನನ್ನ ಮಾತೃಭೂಮಿಗೆ ಪ್ರಾಮಾಣಿಕವಾಗಿ ಮತ್ತು ನೈತಿಕವಾಗಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಇದು ಕಷ್ಟಕರವಾದ ನಿರ್ಧಾರವಾಗಿತ್ತು, ಆದರೆ ಈ ನಿರ್ಧಾರವನ್ನು ಇಷ್ಟವಿತ್ತೋ ಅಥವಾ ಇಷ್ಟವಿಲ್ಲದೆಯೋ ತೆಗೆದುಕೊಳ್ಳಲು ನನ್ನ ಮೇಲೆ ಪ್ರಭಾವ ಬೀರಿದ ಅನೇಕ ಅನಿರೀಕ್ಷಿತ ಕಾರಣಗಳನ್ನು ನಾನು ಇಲ್ಲಿ ಉಲ್ಲೇಖಿಸಲಾರೆ” ಎಂದು ತಿರಿಮನ್ನೆ ಹೇಳಿದ್ದಾರೆ.
ತಿರಿಮನ್ನೆ ಲಂಕಾ ಪರ ಟೆಸ್ಟ್ ನಲ್ಲಿ 2,080 ರನ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ 3,194 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು ಏಳು ಶತಕ ಸಿಡಿಸಿರುವ ಅವರು 2022ರಲ್ಲಿ ಭಾರತದ ಎದುರು ಕೊನೆಯದಾಗಿ ಲಂಕಾ ಪರ ಪಂದ್ಯವಾಡಿದ್ದರು.