Advertisement

ಲೇಡಿ ರಾಣಾ ಬ್ಯಾಟಿಂಗ್‌ ಪ್ರತಾಪ : ಚೊಚ್ಚಲ ಟೆಸ್ಟ್‌ನಲ್ಲೇ ಅಮೋಘ ಆಲ್‌ರೌಂಡ್‌ ಸಾಹಸ

11:11 PM Jun 20, 2021 | Team Udayavani |

ಬ್ರಿಸ್ಟಲ್‌: ಏಳು ವರ್ಷಗಳ ಬಳಿಕ ಟೆಸ್ಟ್‌ ಆಡಲಿಳಿದ ಭಾರತವನ್ನು ಇಬ್ಬರು “ಡೆಬ್ಯು’ ವನಿತಾ ಆಟಗಾರ್ತಿಯರು ಬಚಾಯಿಸಿದ್ದು ದೊಡ್ಡ ಸಾಧನೆಯಾಗಿ ದಾಖಲಾಗಿದೆ. ಆತಿಥೇಯ ಇಂಗ್ಲೆಂಡ್‌ ವಿರುದ್ಧ ಬ್ರಿಸ್ಟಲ್‌ನಲ್ಲಿ ಆಡಲಾದ ಈ ಟೆಸ್ಟ್‌ ಪಂದ್ಯದಲ್ಲಿ 17 ವರ್ಷದ ಡ್ಯಾಶಿಂಗ್‌ ಓಪನರ್‌ ಶಫಾಲಿ ವರ್ಮ ಮತ್ತು ಉತ್ತರಾಖಂಡದ ಆಲ್‌ರೌಂಡರ್‌ ಸ್ನೇಹ್‌ ರಾಣಾ ಭರವಸೆಯ ತಾರೆ ಗಳಾಗಿ ಮಿಂಚಿದರು.

Advertisement

ಯಾವ ಎಸೆತಗಳಿಗೂ ಕೇರ್‌ ಮಾಡದ ಶಫಾಲಿ ಥೇಟ್‌ ವೀರೇಂದ್ರ ಸೆಹವಾಗ್‌ ಶೈಲಿಯಲ್ಲಿ ಬ್ಯಾಟ್‌ ಬೀಸಿ 96 ಮತ್ತು 63 ರನ್‌ ಬಾರಿಸಿ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡದ್ದು ಈಗ ಇತಿಹಾಸ.

ಮ್ಯಾಚ್‌ ಸೇವಿಂಗ್‌ ನಾಕ್‌
ಇನ್ನೊಂದೆಡೆ ಸ್ನೇಹ್‌ ರಾಣಾ ಸಂಕಟದ ಸಮಯದಲ್ಲಿ ತಂಡದ ಕೈಹಿಡಿದರು. ಫಾಲೋಆನ್‌ಗೆ ಸಿಲುಕಿದ ಭಾರತ 199ಕ್ಕೆ 7 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದಾಗ “ಲೇಡಿ ರಾಣಾ’ ಅಜೇಯ 80 ರನ್‌ ಬಾರಿಸಿ ತಮ್ಮ ಬ್ಯಾಟಿಂಗ್‌ ಪ್ರತಾಪ ತೋರಿದರು. ಇದು ಫಾಲೋಆನ್‌ ಇನ್ನಿಂಗ್ಸ್‌ನಲ್ಲಿ ದಾಖಲಾದ 3ನೇ ಅತ್ಯಧಿಕ ವೈಯಕ್ತಿಕ ಗಳಿಕೆ.

ಶಿಖಾ ಪಾಂಡೆ (18), ತನಿಯಾ ಭಾಟಿಯ (ಅಜೇಯ 44) ನೆರವಿ ನಿಂದ ರಾಣಾ ತಂಡವನ್ನು ಸೋಲಿನಿಂದ ಪಾರುಮಾಡಿದರು. ಇಂಗ್ಲೆಂಡ್‌ ನೆಲದಲ್ಲಿ ಭಾರತ ಅಜೇಯವಾಗಿ ಉಳಿಯಿತು.

ಇದನ್ನೂ ಓದಿ : ಐಸಿಸಿ ವಿಶ್ವಕಪ್‌ ಟೆಸ್ಟ್‌ ಫೈನಲ್‌ : ಜಾಮೀಸನ್‌ ಜಬರ್ದಸ್ತ್ ದಾಳಿ; ಭಾರತ 217ಕ್ಕೆ ಆಲೌಟ್‌

Advertisement

8ನೇ ಕ್ರಮಾಂಕದಲ್ಲಿ ಆಡಲಿಳಿದ ಸ್ನೇಹ್‌ ರಾಣಾ 154 ಎಸೆತಗಳನ್ನು ಎದುರಿಸಿ 13 ಬೌಂಡರಿ ನೆರವಿನಿಂದ ತಮ್ಮ ಇನ್ನಿಂಗ್ಸ್‌ ಕಟ್ಟಿದರು. ಪಂದ್ಯ ವನ್ನು 12 ಓವರ್‌ಗಳಷ್ಟು ಬೇಗ ಮುಗಿಸಿ ಡ್ರಾ ಮುದ್ರೆ ಒತ್ತಿದಾಗ ಭಾರತ 8 ವಿಕೆಟಿಗೆ 344 ರನ್‌ ಗಳಿಸಿತ್ತು. ಇದು ಫಾಲೋಆನ್‌ಗೆ ತುತ್ತಾದ ತಂಡವೊಂದು ಪೇರಿಸಿದ ಎರಡನೇ ಅತ್ಯಧಿಕ ರನ್‌ ಆಗಿದೆ. ಪಂದ್ಯವನ್ನು ಇನ್ನೂ ಕೆಲವು ಓವರ್‌ ಮುಂದುವರಿಸಿದರೆ ರಾಣಾ ಶತಕ ಸಂಭ್ರಮವನ್ನು ಆಚರಿಸುವ ಎಲ್ಲ ಸಾಧ್ಯತೆ ಇತ್ತು.

ಭಾರತದ ಮೊದಲ ಸಾಧಕಿ
ಸ್ನೇಹ್‌ ರಾಣಾ ಚೊಚ್ಚಲ ಟೆಸ್ಟ್‌ ನಲ್ಲೇ 4 ವಿಕೆಟ್‌ ಉರುಳಿಸುವ ಜತೆಗೆ 4 ವಿಕೆಟ್‌ ಕಿತ್ತ ಭಾರತದ ಮೊದಲ ಹಾಗೂ ವಿಶ್ವದ 4ನೇ ಆಟಗಾರ್ತಿ ಎನಿಸಿದರು. ಏಕೈಕ ಬೌಲಿಂಗ್‌ ಅವಕಾಶದಲ್ಲಿ ಅವರು 131ಕ್ಕೆ 4 ವಿಕೆಟ್‌ ಉರುಳಿಸಿದ್ದರು.

ರಾಣಾ 6ನೇ ಹಾಗೂ ಇದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಲಿಳಿದು ಅತ್ಯಧಿಕ ರನ್‌ ಹೊಡೆದ ಭಾರತೀಯ ಆಟಗಾರ್ತಿ ಎಂಬ ದಾಖಲೆಯನ್ನೂ ಸ್ಥಾಪಿಸಿದರು. ಹಿಂದಿನ ದಾಖಲೆ 72 ರನ್‌ ಆಗಿತ್ತು. ತನಿಯಾ ಭಾಟಿಯ ಜತೆಗೂಡಿ 104 ರನ್ನುಗಳ ಅಜೇಯ ಜತೆಯಾಟ ದಾಖಲಿಸಿದರು. ಇದು 9ನೇ ವಿಕೆಟಿಗೆ ಭಾರತದ ಜೋಡಿಯೊಂದು ಪೇರಿಸಿದ ಅತ್ಯಧಿಕ ರನ್‌ ಆಗಿದೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-9 ವಿಕೆಟಿಗೆ 396 ಡಿಕ್ಲೇರ್‌. ಭಾರತ-231 ಮತ್ತು 8 ವಿಕೆಟಿಗೆ 344 (ರಾಣಾ ಔಟಾಗದೆ 80, ಶಫಾಲಿ 63, ದೀಪ್ತಿ 54, ತನಿಯಾ ಔಟಾಗದೆ 44, ಪೂನಂ ರಾವತ್‌ 39).
ಪಂದ್ಯಶ್ರೇಷ್ಠ: ಶಫಾಲಿ ವರ್ಮ.

Advertisement

Udayavani is now on Telegram. Click here to join our channel and stay updated with the latest news.

Next