ಮಂಗಳೂರು: ಒಎನ್ ಜಿಸಿ-ಎಂಆರ್‌ಪಿಎಲ್‌ನ ಸಿಎಸ್‌ಆರ್ ಅನುದಾನದಿಂದ ನಿರ್ಮಾಣಗೊಳ್ಳುತ್ತಿರುವ ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡಿದ್ದು, ಮುಂದಿನ ಎರಡು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲು ತಿಳಿಸಿದರು.
ಸೋಮವಾರ ನಗರದ ಲೇಡಿ ಗೋಶನ್ ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಅವರು ಪತ್ರಕರ್ತರ ಜತೆ ಮಾತನಾಡಿದರು.
ಐದು ವರ್ಷಗಳ ಹಿಂದೆ ಅಂದಿನ ವಿಧಾನ ಸಭಾ ಉಪಸಭಾಪತಿ ಯೋಗೀಶ್ ಭಟ್ ಅವರ ಮನವಿಯ ಮೇರೆಗೆ ಅಂದಿನ ಕೇಂದ್ರ ಸಚಿವ ಎಂ. ವೀರಪ್ಪ ಮೊಲಿ ಅವರ ಪ್ರಯತ್ನದಿಂದ ಎಂಆರ್‌ಪಿಎಲ್ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಅನುದಾನ ನೀಡಿತ್ತು. ರಾಜ್ಯ ದಲ್ಲಿಯೇ ಸಿಎಸ್‌ಆರ್ ನಿಧಿಯಿಂದ ನಿರ್ಮಾಣವಾಗುವ ಅತಿ ದೊಡ್ಡ ಆಸ್ಪತ್ರೆ ಕಟ್ಟಡ ಇದಾಗಿದೆ ಎಂದರು.
ಬಳಿಕ ಆಸ್ಪತ್ರೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು. ಕಳೆದ 2 ತಿಂಗಳ ಹಿಂದೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕಟ್ಟಡವನ್ನು ಪರಿಶೀಲಿಸಿದ ವೇಳೆ ಶೇ. 60ರಷ್ಟು ಮಾತ್ರ ಕಾಮಗಾರಿ ನಡೆದಿತ್ತು. ಇದೀಗ ಕಾಮಗಾರಿ ವೇಗವನ್ನು ಪಡೆದು ಕೊಂಡಿದೆ. ಆಸ್ಪತ್ರೆಯ ನೂತನ ಘಟಕಕ್ಕೆ ಪರಿಕರಗಳನ್ನು ಒದಗಿ ಸಲು ಎಂಆರ್‌ಪಿಎಲ್‌ಗೆ ಮನವಿ ಮಾಡಿ ರುವ ಹಿನ್ನೆಲೆಯಲ್ಲಿ 1.5 ಕೋ.ರೂ. ನೀಡಿದ್ದಾರೆ.
ಇದರ ಜತೆಗೆ ಜಿಲ್ಲೆಯ ಇತರ ಕಾಮಗಾರಿ ಗಳಿಗೂ ಎಂಆರ್‌ಪಿಎಲ್ ಸಾಕಷ್ಟು ಅನುದಾನಗಳನ್ನು ನೀಡಿದೆ. ಕಟೀಲು ಶಾಲೆಯ ಶೌಚಾಲಯ ನಿರ್ಮಾಣ, ಕಟೀಲಿನಲ್ಲಿ 150 ಬೆಡ್ ಗಳ ಸಂಜೀವಿನಿ ನರ್ಸಿಂಗ್ ಹೋಂ, ಜಿಲ್ಲೆಯ 18 ಗ್ರಾಮ ಗಳಿಗೆ ಸ್ವತ್ಛ ಭಾರತ ಯೋಜನೆ ಯಲ್ಲಿ ವಿವಿಧ ಸೌಕರ್ಯ, ಪೊಳಲಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಹಕಾರ, ವೇಣೂರು ಕಾಲೇಜಿಗೆ ವಿಜ್ಞಾನ ಲ್ಯಾಬ್, ಆದರ್ಶ ಗ್ರಾಮ ಬಳ್ಪದಲ್ಲಿ ಪ್ರೌಢ ಶಾಲೆಗೆ ಹೊಸ ಕಟ್ಟಡ, ಪುತ್ತೂರಿನ ರೋಟರಿ ಬ್ಲಿಡ್ ಬ್ಯಾಂಕಿನ ಮೇಲ್ದರ್ಜೆಗೆ 25 ಲಕ್ಷ ರೂ. ಹೀಗೆ ಸಾಕಷ್ಟು ಅಭಿವೃದ್ಧಿ ಕಾರ್ಯ ಗಳಿಗೆ ಅನುದಾನ ನೀಡಿದೆ ಎಂದು ಸಂಸದ ನಳಿನ್ ವಿವರಿಸಿದರು.
ಎಂಆರ್‌ಪಿಎಲ್: ಒಟ್ಟು 23.2 ಕೋ.ರೂ.
ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್. ಕುಮಾರ್ ಮಾತ ನಾಡಿ, ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿಗೆ ಒಎನ್‌ಜಿಸಿ-ಎಂಆರ್‌ಪಿಎಲ್ ಈ ಹಿಂದೆ 21.70 ಕೋ.ರೂ. ನೀಡಿತ್ತು. ಆದರೆ ಪ್ರಸ್ತುತ ಆಸ್ಪತ್ರೆಗೆ ನೂತನ ಪರಿಕರಗಳನ್ನು ಒದಗಿಸಲು ಸಂಬಂಧಪಟ್ಟವರು ಮನವಿ ಮಾಡಿ ರುವ ಹಿನ್ನೆಲೆಯಲ್ಲಿ 1.50 ಕೋ.ರೂ. ನೀಡಲು ತೀರ್ಮಾನಿಸಿದ್ದು, ಇದೀಗ ಒಟ್ಟು ಅನುದಾನ 23.2 ಕೋ.ರೂ.ಗೆ ತಲುಪಿದೆ. ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕಟ್ಟಡದ ಕಾಮಗಾರಿ ವೇಗ ವನ್ನು ಪಡೆದುಕೊಂಡಿದ್ದು, ಶೀಘ್ರ ದಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಎಂಆರ್‌ಪಿಎಲ್‌ನ ಗ್ರೂಪ್ ಜನರಲ್ ಮ್ಯಾನೇಜರ್(ಎಚ್‌ಆರ್) ವಿ.ಬಿ.ಎಚ್.ವಿ. ಪ್ರಸಾದ್, ಆಸ್ಪತ್ರೆಯ ಆರ್‌ಎಂಒ ದುರ್ಗಾಪ್ರಸಾದ್ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು.