Advertisement
ರವೀಶ್ ಎಂಬಾತನ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾಸಿಪಾಳ್ಯ ನಿವಾಸಿ ಶರವಣ ಕುಮಾರ್ ಅಲಿಯಾಸ್ ಮೆಂಟಲ್ ವಿಜಿ, ಈತನ ಸಂಬಂಧಿ ಕುಮಾರ್ ಹಾಗೂ ಕುಮಾರ್‌ನ ಪುತ್ರ ಆನಂದ್‌ನನ್ನು ಬಂಧಿಸಲಾಗಿತ್ತು. ಇದೇ ವೇಳೆ ಕೈ ಕತ್ತರಿಸಲು ಸುಪಾರಿ ಕೊಟ್ಟಿದ್ದ ವಿ.ವಿ.ಪುರ ಸಂಚಾರ ಠಾಣೆ ಮಹಿಳಾ ಕಾನ್‌ಸ್ಟೆಬಲ್ ಜಯಲಕ್ಷ್ಮಿ ಎಂಬಾಕೆಯನ್ನು ಸೆ.14ರಂದು ಪೊಲೀಸರು ಬಂಧಿಸಿದ್ದರು.
Related Articles
Advertisement
ಏನಿದು ಪ್ರಕರಣ?: ವಿ.ವಿ.ಪುರ ಸಂಚಾರ ಠಾಣೆ ಮಹಿಳಾ ಕಾನ್‌ಸ್ಟೆಬರ್ ಜಯಲಕ್ಷ್ಮಿ ಹಾಗೂ ಹಲ್ಲೆಗೊಳಗಾದ ರವೀಶ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅನ್ಯ ಜಾತಿ ಎಂಬ ಕಾರಣಕ್ಕೆ ರವೀಶ್ ಜಯಲಕ್ಷ್ಮಿಯನ್ನು ಮದುವೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಯಲಕ್ಷ್ಮಿಗೆ ಮನೆಯವರು ಬೇರೆ ವಿವಾಹ ಮಾಡಿದ್ದರು. ಆದರೆ, ರವೀಶ್ ಜಯಲಕ್ಷ್ಮಿ ಪತಿಗೆ ತಮ್ಮಿಬ್ಬರ ಸಂಬಂಧದ ಬಗ್ಗೆ ಹೇಳಿದ್ದ.
ಇದರಿಂದ ಬೇಸರಗೊಂಡ ಮಹಿಳಾ ಕಾನ್‌ಸ್ಟೆಬಲ್ ಪತಿ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾರೆ. ಆದರೂ ರವೀಶ್ ಪ್ರತಿ ಹಂತದಲ್ಲೂ ಜಯಲಕ್ಷ್ಮಿಗೆ ನಿತ್ಯ ಕಿರುಕುಳ ಕೊಡುತ್ತಿದ್ದ. ಮದುವೆಗೂ ಒಪ್ಪುವುದಿಲ್ಲ ಇತ್ತ ಬೇರೆಯವರ ಜತೆ ಜೀವನ ನಡೆಸಲು ಬಿಡುತ್ತಿಲ್ಲ ಎಂದು ಕೋಪಗೊಂಡ ಜಯಲಕ್ಷ್ಮಿ, ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡುವ ಕುಮಾರ್, ಶರವಣನಿಗೆ ರವೀಶ್ ಮೇಲೆ ಹಲ್ಲೆ ನಡೆಸಲು 1 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.
ಕಲಾಸಿಪಾಳ್ಯದಲ್ಲಿ ಪರಿಚಯ: ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮೂವರು ಆರೋಪಿಗಳ ವಿರುದ್ಧ ಹಲ್ಲೆ ಆರೋಪಗಳಿವೆ. ಆದರೆ, ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಇದೇ ವೇಳೆ ಕಾನ್‌ಸ್ಟೆಬಲ್ ಜಯಲಕ್ಷ್ಮಿ ಆರೋಪಿಗಳನ್ನು ಪರಿಚಯಿಸಿಕೊಂಡಿದ್ದರು. ಈ ವೇಳೆ ತನಗೆ ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ ರವೀಶ್ ಮೇಲೆ ದಾಳಿ ನಡೆಸಲು ಸುಪಾರಿ ಕೊಟ್ಟಿದ್ದರು. ಅದರಂತೆ ಆರೋಪಿಗಳು ನಾಲ್ಕೈದು ಬಾರಿ ರವೀಶ್ ಮೇಲೆ ದಾಳಿ ನಡೆಸಲು ವಿಫಲ ಯತ್ನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಯಲಕ್ಷ್ಮಿಯೇ ಸ್ಥಳ ನಿಗದಿ ಮಾಡಿ ಮಾಜಿ ಪ್ರಿಯಕರನ್ನು ಕರೆದೊಯ್ದು ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಭೇಟಿಯಾಗುತ್ತಿದ್ದ ಜಾಗದಲ್ಲೇ ಕೈ ಕಟ್: ಕಾನ್‌ಸ್ಟೆಬಲ್ ಜಯಲಕ್ಷ್ಮಿ ಹಾಗೂ ರವೀಶ್ ಈ ಮೊದಲು ಪ್ರೀತಿಸುತ್ತಿದ್ದಾಗ ಬನ್ನೇರುಘಟ್ಟದ ಚಂಪಕಧಾಮ ದೇವಾಲಯದ ನಿರ್ಜನ ಪ್ರದೇಶದಲ್ಲಿ ಭೇಟಿಯಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೆ.11ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ರವೀಶ್‌ಗೆ ಕರೆ ಮಾಡಿ ಇದೇ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಬಳಿಕ ಸಂಜೆ 5 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ಮೂವರು ಆರೋಪಿಗಳು ದರೋಡೆ ನೆಪದಲ್ಲಿ ರವೀಶ್‌ನ ಕೈ ಕತ್ತರಿಸಿಕೊಂಡು ಕೈ ಸಮೇತ ಪರಾರಿಯಾಗಿದ್ದರು. ಮತ್ತೂಂದೆಡೆ ತನ್ನ ಮೇಲೆ ಅನುಮಾನ ಬಾರದ ರೀತಿಯಲ್ಲಿ ಎಚ್ಚರಿಕೆ ವಹಿಸಿದ್ದ ಕಾನ್‌ಸ್ಟೆಬಲ್ ಜಯಲಕ್ಷ್ಮಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದರು.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬನ್ನೇರುಘಟ್ಟ ಪೊಲೀಸರು ಅನುಮಾನದ ಮೇರೆಗೆ ಜಯಲಕ್ಷ್ಮಿಯನ್ನು ವಿಚಾರಣೆ ನಡೆಸಿದಾಗ ಆಕೆ ಗೊಂದಲದ ಹೇಳಿಕೆ ನೀಡಿದ್ದರು. ಆ ವೇಳೆ ಈಕೆಯೇ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಈಕೆಯನ್ನು ತೀವ್ರ ವಿಚಾರಣೆ ನಡೆಸಿದಾಗ ಕೃತ್ಯದ ಹಿಂದಿನ ಅಸಲಿ ಬೆಳಕಿಗೆ ಬಂದಿದೆ. ಈಕೆ ನೀಡಿದ ಮಾಹಿತಿ ಮೇರೆಗೆ ಸೆ.14ರಂದು ಕಲಾಸಿಪಾಳ್ಯದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.