ಪಾರ್ಸಿ ಸಮುದಾಯಕ್ಕೆ ಸೇರಿದ ಅಮೀರಾಳಿಗೆ ಚಿತ್ರರಂಗ ದೂರದ ಊರಾಗಿರಲಿಲ್ಲ. ಹಾಗೆಂದು ಆಗರ್ಭ ಶ್ರೀಮಂತ ಕುಟುಂಬದ ಅವಳಿಗೆ ಹೊಟ್ಟೆ ಹೊರೆಯಲು ಬಣ್ಣ ಹಚ್ಚುವ ಅಗತ್ಯವೂ ಇರಲಿಲ್ಲ. ಮುಂಬಯಿಯ ಅತಿ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಕಲಿತ ಅಮೀರಾ ಚಿತ್ರರಂಗಕ್ಕೆ ಬಂದಿರುವುದು ಬರೀ ಅದರ ಕುರಿತಾಗಿದ್ದ ಆಕರ್ಷಣೆಯಿಂದ ಮಾತ್ರ. ಹೀಗಾಗಿ ಅವಕಾಶಗಳಿಗಾಗಿ ನಿರ್ಮಾಪಕರ ಎದುರು ಹಲ್ಲುಗಿಂಜಿ ನಿಲ್ಲುವ ಅಗತ್ಯ ಅವಳಿಗಿರಲಿಲ್ಲ.
Advertisement
ಈ ಕಾರಣಕ್ಕೋ ಏನೋ ಅಮೀರಾಳಿಗೆ ಹೇಳಿಕೊಳ್ಳುವಂಥ ಉತ್ತಮ ಸಿನೆಮಾಗಳು ಸಿಗಲಿಲ್ಲ. ಇಸಾಕ್ ಎಂಬ ಚಿತ್ರದಲ್ಲಿ ಪ್ರತೀಕ್ ಬಬ್ಬರ್ ಎದುರು ನಾಯಕಿಯಾಗಿ ನಟನೆ ಆರಂಭಿಸಿದ ಅಮೀರಾ ಅನಂತರ ಮಿಸ್ಟರ್ ಎಕ್ಸ್ ಚಿತ್ರದಲ್ಲಿ ಇಮ್ರಾನ್ ಹಶ್ಮಿಗೆ ನಾಯಕಿಯಾದಳು. ಎರಡೂ ಸಾಧಾರಣ ಚಿತ್ರವಾಗಿದ್ದ ಕಾರಣ ಅಮೀರಾ ಗಮನ ಸೆಳೆಯಲಿಲ್ಲ. ಆದರೆ ಜಾಕಿಚಾನ್ ಎದುರು ಕುಂಗ್‌ಫು ಯೋಗ ಚಿತ್ರದಲ್ಲಿ ನಟಿಸಿದ ಬಳಿಕ ಅಮೀರಾ ಎಂಬ ನಟಿಯನ್ನು ಎಲ್ಲರೂ ಹುಬ್ಬೇರಿಸಿ ನೋಡಿದರು. ಬರೀ ಎರಡು ಚಿತ್ರಗಳಲ್ಲಿ ನಟಿಸಿದವಳಿಗೆ ಜಾಕಿಚಾನ್ ಎದುರು ನಟಿಸುವ ಅವಕಾಶ ಸಿಕ್ಕಿದ್ದನ್ನು ನಂಬಲು ಕೆಲವರಿಗೆ ಸಾಧ್ಯವಾಗಿರಲಿಲ್ಲ. ಆದರೆ ದುರದೃಷ್ಟ ಮಾತ್ರ ಇಲ್ಲೂ ಹಿಂಬಾಲಿಸಿಕೊಂಡು ಬರಬೇಕೆ. ಈ ಚಿತ್ರವೂ ಸಾಧಾರಣ ಯಶಸ್ಸು ಕಂಡ ಕಾರಣ ಅಮೀರಾಳಿಗೆ ಹೆಚ್ಚಿನ ಪ್ರಯೋಜನವಾಗಲಿಲ್ಲ. ಇದೀಗ ಅಮೀರಾ ಚಿತ್ರರಂಗದ ಉಸಾಬರಿಯೇ ಬೇಡ ಎಂದು ವ್ಯಾಪಾರಕ್ಕಿಳಿದಿದ್ದಾಳೆ. ಸದ್ಯದಲ್ಲೇ ಸಹೋದರನ ಜತೆಗೂಡಿ ಅಮೀರಾ ಮುಂಬಯಿಯಲ್ಲಿ ಹೊಟೇಲು ಪ್ರಾರಂಭಿಸಲಿದ್ದಾಳೆ.