ಲಕ್ನೋ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲು ನಿರಾಕರಿಸಿದೆ. ನಾನು ಲಂಚ ಕೊಡಲು ಒಪ್ಪದ ಕಾರಣ ಟಿಕೆಟ್ ನೀಡಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತೆ, ಕಾಂಗ್ರೆಸ್ ನ ಲಡ್ಕಿ ಹೂಂ, ಲಡ್ ಸಕ್ತಿ ಹೂಂ (ನಾನು ಹೆಣ್ಣುಮಗಳು, ಹೋರಾಡಬಲ್ಲೆ) ಪ್ರಚಾರ ಅಭಿಯಾನದ ಪೋಸ್ಟರ್ ಗರ್ಲ್ ಪ್ರಿಯಾಂಕಾ ಮೌರ್ಯ ಆರೋಪಿಸಿದ್ದಾರೆ.
ಇದನ್ನೂ ಓದಿ:ಕಂಗನಾ ರಣಾವುತ್ ಕೆನ್ನೆಗಿಂತ ನಯವಾದ ರಸ್ತೆ ಮಾಡುತ್ತೇವೆ: ಕಾಂಗ್ರೆಸ್ ಶಾಸಕ
ತನಗೆ ಟಿಕೆಟ್ ನೀಡುವ ಬದಲು ಕಾಂಗ್ರೆಸ್ ಹೈಕಮಾಂಡ್, ಒಂದು ತಿಂಗಳ ಹಿಂದಷ್ಟೇ ಪಕ್ಷಕ್ಕೆ ಸೇರ್ಪಡೆಗೊಂಡ ವ್ಯಕ್ತಿಗೆ ಟಿಕೆಟ್ ನೀಡಿರುವುದಾಗಿ ಪ್ರಿಯಾಂಕಾ ದೂರಿದ್ದಾರೆ.
ಕಾಂಗ್ರೆಸ್ ಪಕ್ಷ ನನ್ನ ಮುಖ, ನನ್ನ ಹೆಸರು ಹಾಗೂ ಸಾಮಾಜಿಕ ಜಾಲತಾಣದಲ್ಲಿನ 10ಲಕ್ಷ ಫಾಲೋವರ್ಸ್ ಗಳನ್ನು “ಲಡ್ಕಿ ಹೂಂ, ಲಡ್ ಸಕ್ತಿ ಹೂಂ ಪ್ರಚಾರಾಂದೋಲನಕ್ಕೆ ಬಳಸಿಕೊಂಡರು. ಆದರೆ ವಿಧಾನಸಭಾ ಚುನಾವಣೆಯ ಟಿಕೆಟ್ ಅನ್ನು ಬೇರೆ ಯಾರಿಗೋ ನೀಡಿದ್ದಾರೆ. ಇದೆಲ್ಲಾ ಮೊದಲ ನಿರ್ಧಾರವಾಗಿದ್ದು, ನಾನು ಪ್ರಿಯಾಂಕಾ ಗಾಂಧಿ ಕಾರ್ಯದರ್ಶಿ ಸಂದೀಪ್ ಸಿಂಗ್ ಗೆ ಲಂಚ ಕೊಡದಿದ್ದ ಪರಿಣಾಮ ಟಿಕೆಟ್ ಸಿಗಲಿಲ್ಲ ಎಂದು ಉತ್ತರಪ್ರದೇಶ ಕಾಂಗ್ರೆಸ್ ನ ಮಹಿಳಾ ಘಟಕದ ಉಪಾಧ್ಯಕ್ಷೆ ಪ್ರಿಯಾಂಕಾ ಮೌರ್ಯ ಟೀಕಿಸಿದ್ದಾರೆ.
ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರ ಸಮಸ್ಯೆಗಳ ಕುರಿತು ಬಿಂಬಿಸಲು ಪ್ರಿಯಾಂಕಾ ಗಾಂಧಿ, ಲಡ್ಕಿ ಹೂಂ ಲಡ್ ಸಕ್ತಿ ಹೂಂ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ಪ್ರಚಾರ ಅಭಿಯಾನದ ಪೋಸ್ಟರ್ ನಲ್ಲಿ ಪ್ರಿಯಾಂಕಾ ಮೌರ್ಯ ಅವರು ಕಾಣಿಸಿಕೊಂಡಿದ್ದರು.
ಲಕ್ನೋದ ಸರೋಜಿನಿ ನಗರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಿಯಾಂಕಾ ಮೌರ್ಯ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ರುದ್ರ ದಮನ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷ ಇತ್ತೀಚೆಗಷ್ಟೇ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು.