ಕತೆ ಬರೆಯುವ ಪ್ರತಿಯೊಬ್ಬನಿಗೂ ಇದು ಗೊತ್ತಿರುತ್ತದೆ, ಆದರೆ ಟಿ. ಎಸ್. ಎಲಿಯಟ್‌ಗಿಂತ ಹೆಚ್ಚು ಯಾರಿಗೆ ತಾನೆ ಗೊತ್ತಿರುತ್ತದೆ? ಒಮ್ಮೆ ಎಲಿಯಟ್‌ಗೆ ಇನ್ನು ಬರೆಯುವುದೇ ಅಸಾಧ್ಯ ಎನಿಸಿತ್ತು, ಆಗ ಒಬ್ಬ ಮನೋವಿಶ್ಲೇಷಕ ಎಲಿಯಟ್‌ನ ಮಿತ್ರನಿಗೆ ಹೇಳಿದ್ದು: ಅವ ತನ್ನನ್ನು ಏನಂತ ತಿಳಕೊಂಡಿದ್ದಾನೆ, ದೇವರಂತಲೇ?
Advertisement
ಅದನ್ನು ಕೇಳಿಯೇ ಎಲಿಯಟ್ ಬಂಜರು ಭೂಮಿ ಮುಂದುವರಿಸಿದ್ದು. ಆದರೂ ಅದನ್ನು ಈಗಿನ ರೂಪಕ್ಕೆ ತರಲು “ಕವಿಗಳ ಕವಿ’ ಎಝಾ ಪೌಂಡ್ ಬೇಕಾಯಿತು. ನಾವು ಯಾರೂ ದೇವರಲ್ಲ, ಪರಿಪೂರ್ಣತೆಯ ಹಂಬಲವಿರುತ್ತದೆ, ಆದರೆ, ಅದರ ಕಲ್ಪನೆ ಇರುವುದಿಲ್ಲ- ಮನುಷ್ಯನಿಗೆ ಅದು ಅಸಾಧ್ಯ. ಭಾಷೆ ಬಳಸಿದಾಗಲೇ ಅದು ಐಹಿಕವಾಗುತ್ತದೆ. ಆ ಮೂಲಕವೇ ನಾವು ಆಕಾಶಕ್ಕೆ ಏಣಿ ಕಟ್ಟಬೇಕು.
. ನನ್ನನ್ನು ಜೀವನ ಚರಿತ್ರೆ ಬರೆಯುವಂತೆ ಕೆಲವರು ಕೇಳಿದ್ದಾರೆ. ಆದರೆ, ಇದು ನನ್ನಿಂದ ಆಗದ ವಿಚಾರ. ನನ್ನ ಬಾಲ್ಯ ಕಾಲದ ಕುರಿತು ಕೆಲವೊಮ್ಮೆ ಲೇಖನಗಳನ್ನು, ಟಿಪ್ಪಣಿಗಳನ್ನು ಬರೆದದ್ದಿದೆ. ಉಳಿದಂತೆ ನನ್ನ ಕತೆಗಳು, ಕತೆಗಳೇ ನನ್ನ ಜೀವನ ಚರಿತ್ರೆ. ನಾನೊಬ್ಬ ಸಾಮಾನ್ಯ ಮನುಷ್ಯ, ಬರೆಯುವ ಸಾಹಿತ್ಯವೂ ಅಂಥವರ ಬಗ್ಗೆಯೇ. ಅನೇಕ ಬಾವಿಗಳ ನೀರು ಕುಡಿದಿದ್ದೇನೆ. ಅನೇಕ ಸಾಹಿತ್ಯ ಕೃತಿಗಳನ್ನು ಓದಿದ್ದೇನೆ, ಪ್ರಭಾವಿತನಾಗಿದ್ದೇನೆ. ನನ್ನ ಬರಹದಲ್ಲಿ ಅನೇಕರ ಬರಹಗಳಿವೆ. ಈ ಕುರಿತು ನನಗೆ ಸಂಕೋಚವಿಲ್ಲ. ನಮ್ಮ ಮೇಲಿನ ಪ್ರಭಾವ ನೇರ ಜೀವನದಿಂದ ಆಗಬಹುದು, ಪುಸ್ತಕಗಳಿಂದ, ಕಲೆಗಳಿಂದ ಆಗಬಹುದು. ಚಿತ್ರ ನೋಡಿ ಕತೆ ಬರೆದವರಿದ್ದಾರೆ, ಕತೆ ಓದಿ ಚಿತ್ರ ಬರೆದವರಿದ್ದಾರೆ. ಅನೇಕ ಎನ್ನುವುದು ನನಗೆ ಪ್ರಿಯವಾದ ಪದ. ಆಹಾ ಹೀಗೆ ಹೇಳುತ್ತ ಹೋದರೆ ಇದಕ್ಕೆ ಮಿತಿಯಿದೆಯೇ!
Related Articles
Advertisement
(ತಮ್ಮ ಸಾಹಿತ್ಯದ ಕುರಿತು ಇತ್ತೀಚೆಗೆ ಶಿರಸಿಯಲ್ಲಿ ಆಯೋ ಜನೆಗೊಂಡ ವಿಚಾರಗೋಷ್ಠಿಗೆ ಕೆ. ವಿ. ತಿರುಮಲೇಶ್ ಅವರು ಬರೆದ ಪ್ರತಿಕ್ರಿಯೆಯ ಆಯ್ದ ಭಾಗ)
ಕೆ. ವಿ. ತಿರುಮಲೇಶ್