ಬೆಂಗಳೂರು: ಕೇಂದ್ರ ಸರ್ಕಾರವು ಜಮ್ಮುಕಾಶ್ಮೀರ ಮತ್ತು ಲಡಾಖ್ ಪ್ರಾಂತ್ಯಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿದ ನಂತರ ಮೊದಲ ಬಾರಿಗೆ ಕರ್ನಾಟಕ 23 ಪರ್ವತಾರೋಹಿಗಳ ತಂಡ ಲಡಾಖ್ ಪರ್ವತ ಶ್ರೇಣಿಗಳಲ್ಲಿ ಟ್ರಕಿಂಗ್ ನಡೆಸಲಿದೆ.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಪರ್ವತಾರೋಹಣ ಸಂಸ್ಥೆಯ 23 ಸಾಹಸಿಗಳು ತಂಡ ನಾಯಕ ಸುಧಾಕರ್ ಅವರ ಮುಂದಾಳತ್ವದಲ್ಲಿ ಆ.15ರಿಂದ 27ರ ವರೆಗೆ ಲಡಾಕ್‌ನ ಪರ್ವತ ಶ್ರೇಣಿಗಳಲ್ಲಿ ಟ್ರೆಕಿಂಗ್ ನಡೆಸಲಿದ್ದಾರೆ.
ನೃಪತುಂಗ ರಸ್ತೆಯ ಯುವಜನ ಸೇವಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ವತಾರೋಹಿಗಳನ್ನು ಬಿಳ್ಕೊಟ್ಟು ಮಾತನಾಡಿದ ಇಲಾಖೆಯ ಆಯುಕ್ತ ಆರ್.ಎಸ್.ಪೆದ್ದಪ್ಪಯ್ಯ ಅವರು, ಜಲ ಮತ್ತು ಭೂಮಿ ಮೇಲಿನ ಸಹಸ ಕಾರ್ಯಕ್ಕೆ ಈಗ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಜಲ ಸಾಹಸಿಗಳನ್ನು ಪ್ರೋತ್ಸಾಹಿಸುವ ಜತೆಗೆ ಪರ್ವತಾರೋಹಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಹಾಗೆಯೇ ಏರ್ ಅಡ್ವೆಂಚರ್ ಗೂ(ವಿಮಾನ ಸಾಹಸ) ಪ್ರೋತ್ಸಾಹಕ್ಕೆ ಚಿಂತನೆ ನಡೆಸುತ್ತಿದ್ದಾರೆ.
ಜಕ್ಕೂರು ಏರೋಡ್ರಂನಲ್ಲಿ ಇದಕ್ಕೆ ಬೇಕಾದ ವ್ಯವಸ್ಥೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಿದ್ದೇವೆ ಎಂದರು. ಸಾಹಕ ಕಾರ್ಯಗಳು ಸವಾಲಿನ ಸಂಗತಿಯಾದರೂ ಅಷ್ಟೇ ಅಪಾಯಕಾರಿಯೂ ಹೌದು. ಹೀಗಾಗಿ ಹೆಚ್ಚಿನ ಎಚ್ಚರ ವಹಿಸಬೇಕಾಗುತ್ತದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಇಲಾಖೆಯಡಿ ಸಾಹಸ ತರಬೇತಿ ಪಡೆದವರು ನೆರವಿಗೆ ತಾವಿಸುತ್ತಾರೆ.
ಕಳೆದ ವರ್ಷ ಕೊಡಗಿನಲ್ಲಿ ಮತ್ತು ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ತಂಡದಿಂದ ಸಂರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಕರ್ನಾಟಕ ಪರ್ವತಾರೋಹಣ ಸಂಸ್ಥೆಯ ಅಧ್ಯಕ್ಷ ಎಸ್.ಕೆ. ಮೇಹ್ತಾ, ಇಲಾಖೆಯ ಜಂಟಿ ನಿರ್ದೇಶಕ ಸುಭಾಷ್‌ಚಂದ್ರ ಮೊದಲಾದವರು ಇದ್ದರು.
15ರಿಂದ ಸತತ ಹತ್ತುದಿನ ಟ್ರಕ್ಕಿಂಗ್: ತಂಡದ ನಾಯಕ ಎಸ್.ಸುಧಾಕರ್ ನೇತೃತ್ವದಲ್ಲಿ ಎಸ್.ಶ್ರೀವಾತ್ಸವ್, ಅನಸೂಯ, ಮಧುಕಿರಣ್ ರೆಡ್ಡಿ, ಹರ್ಷವರ್ಧನ್, ಅಶೋಕ್ ಕುಮಾರ್, ಬಾಲಚಂದ್ರ ಜೋಷಿ, ಕಿಶೋರ್, ಚೈತ್ರಾ, ಭರತ್, ನಿರ್ಮಲಾ, ಚಂದ್ರಶೇಖರ್ ಕಲ್ಲೂರ್, ಅಜಯ್ ಶಾ, ಸುಧಾಕರ್, ಆಶಾ ಸುಧಾಕರ್, ಭರತ್ ಕುಮಾರ್, ವಸುಮತಿ ಶ್ರೀನಿವಾಸ್, ಮೀರಾಮೋಹನ್, ಸ್ಮಿತಾ ಶ್ರೀನಿವಾಸ್, ರವಿಶಂಕರ್ ಅಂಗಡಿ, ವಸಂತ್ ಪ್ರಭು ಹಾಗೂ ಸೌಮ್ಯ ಕನಲೆ ಅವರ ತಂಡ ಆ.15ರಂದು ಲಡಾಕ್ ತಲುಪಲಿದೆ.
16ರಿಂದ26ರ ವರೆಗೆ ಸ್ಕೂ, ಮರಾ, ಹಂಕರ್, ನಿಮಲಿಂಗ್, ಕ್ಯಾಂಗಸ್ಟೆ, ಕೊಂಗನಾರು ಲಾ, ಚುಸ್ಕಿನ್ರೊ ಮೊದಲಾದ ಪರ್ವತ ಶ್ರೇಣಿಗಳಲ್ಲಿ ಟ್ರಕಿಂಗ್ ನಡೆಸಿ, ಲಡಾಕ್‌ಗೆ ವಾಪಸಾಗಲಿದ್ದಾರೆ. ಅಲ್ಲಿಂದ ನೇರವಾಗಿ ಆ.27ರಂದು ಕರ್ನಾಟಕ್ಕೆ ಹಿಂದಿರುಗಲಿದ್ದಾರೆ ಎಂದು ಆಯೋಜಕರು ಮಾಹಿತಿ ನೀಡಿದರು.