ನವದೆಹಲಿ:ಲೋಕಸಭೆಯಲ್ಲಿ ಅಪರಿಚಿತರಾಗಿಯೇ ಇದ್ದ ಲಡಾಖ್ ನ ಯುವ ಸಂಸದ ಜಮ್ಯಂಗ್ ತ್ಸೆರಿಂಗ್ ನಮ್ಗ್ಯಾಲ್ ಇದೀಗ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿಬಿಟ್ಟಿದ್ದಾರೆ. ಕುತೂಹಲದ ಸಂಗತಿ ಏನೆಂದರೆ ಲಡಾಖ್ ನ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಜಮ್ಯಂಗ್ ಗೆ ಸಿಕ್ಕ ಮತಗಳಿಗಿಂತ ಹೆಚ್ಚು ಟ್ವಿಟರ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ!
ಹೌದು ಅದಕ್ಕೆ ಕಾರಣವಾಗಿದ್ದು ಕೇಂದ್ರ ಸರಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ನ್ನು ರದ್ದುಗೊಳಿಸಿರುವುದು!
370ನೇ ವಿಧಿಯನ್ನು ರದ್ದುಗೊಳಿಸಿ, ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ್ದರು. ಮಂಗಳವಾರ ಲೋಕಸಭೆಯಲ್ಲಿ ವಾಕ್ಝರಿ ಹರಿಸುವ ಮೂಲಕ ಜಮ್ಯಂಗ್ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಎಲ್ಲಾ ಸಂಸದರ ಗಮನಸೆಳೆದುಬಿಟ್ಟಿದ್ದರು. ಹೀಗಾಗಿ ಲಡಾಖ್ ಸಂಸದ ಜಮ್ಯಂಗ್ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾರೆ!
ಈ ಯುವ ಸಂಸದ ನಿರೀಕ್ಷೆ ಮಾಡದೇ ತಮ್ಮ ಸಾಧನೆಯ ಗುರಿ ತಲುಪಿದ್ದಾರೆ. ಭಾಷಣ ಮುಗಿಸಿದ ನಂತರ ಮಂಗಳವಾರ ರಾತ್ರಿಯೊಳಗೆ ಜಮ್ಯಂಗ್ ಟ್ವೀಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದು, 40 ಸಾವಿರಕ್ಕಿಂತ ಅಧಿಕ ಟ್ವೀಟ್ ದಾಖಲಾಗಿತ್ತು. ಇದರೊಂದಿಗೆ ಟ್ವೀಟರ್ ನಲ್ಲಿ ಟ್ರೆಂಡ್ ಆದ ಮೊದಲ ಲಡಾಖ್ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
ಲೋಕಸಭಾ ಸಂಸದರಾಗಿದ್ದ ಜಮ್ಯಂಗ್ ಟ್ವೀಟರ್ ಖಾತೆಯಲ್ಲಿದ್ದ ಫಾಲೋವರ್ಸ್ ಸಂಖ್ಯೆ ಬರೇ ನಾಲ್ಕು ಸಾವಿರ. ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿದ ಬಗ್ಗೆ ಕುರಿತು ಲೋಕಸಭೆಯಲ್ಲಿ ಭಾಷಣ ಮಾಡಿದ ನಂತರ ಜಮ್ಯಂಗ್ ಟ್ವೀಟರ್ ಫಾಲೋವರ್ಸ್ ಸಂಖ್ಯೆ 1.29ಲಕ್ಷಕ್ಕೆ ಏರಿಕೆಯಾಗಿದೆ!
ಜಮ್ಯಂಗ್ ಲೋಕಸಭೆಯಲ್ಲಿ ಹೇಳಿದ್ದೇನು?
ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಇಂದು ಲಡಾಖ್ ಜನರು ಮನಬಿಚ್ಚಿ ಮಾತನಾಡುವಂತಾಗಿದೆ.ಕಳೆದ 7ದಶಕಗಳಿದ ಲಡಾಖ್ ಜನರು ಕೇಂದ್ರಾಡಳಿತ ಪ್ರದೇಶಕ್ಕಾಗಿ ಹೋರಾಡುತ್ತಲೇ ಬಂದಿದ್ದರು.
ಲಡಾಖ್ ಅಭಿವೃದ್ಧಿ ವಂಚಿತವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಮತ್ತು 370ನೇ ವಿಧಿ ಕಾರಣ. ಯುಪಿಎ ಸರ್ಕಾರ ಕಾಶ್ಮೀರಕ್ಕೆ ಕೇಂದ್ರೀಯ ವಿವಿ ನೀಡಿತ್ತು. ನಾವು ಹೋರಾಟ ಮಾಡುತ್ತಲೇ ಇದ್ದರೂ ಸಿಗಲಿಲ್ಲ. ಇದೀಗ ಪ್ರಧಾನಿ ಮೋದಿ ನಮಗೂ ಒಂದು ವಿವಿ ನೀಡಿದ್ದಾರೆ ಎಂದು ಜಮ್ಯಂಗ್ ಶ್ಲಾಘಿಸಿದ್ದರು.