ಗದಗ: ನೀರಿನ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಮಲ್ಲಸಮುದ್ರ ಗ್ರಾದ ಬಳಿ ಇರುವ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಂಸ್ಥೆಯಲ್ಲಿ (ಜಿಮ್ಸ್) ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಜೆ ಕೊಟ್ಟು ಮನೆಗೆ ಕಳುಹಿಸಲಾಗಿದೆ.
ಜಿಮ್ಸ್ ಆವರಣದಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳ ವಸತಿನಿಲಯಕ್ಕೆ ಹಲವು ದಿನಗಳಿಂದ ನಿಯಮಿತವಾಗಿ ನೀರು ಪೂರೈಕೆ ಆಗುತ್ತಿರಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಎದುರಾಗಿತ್ತು. ಈ ಸಂಬಂಧ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ನೀರಿನ ಸಮಸ್ಯೆ ಎದುರಾಗಿರುವ ಕಾರಣಕ್ಕೆ ರಜೆ ಕೊಟ್ಟಿದ್ದಾರೆ. ಪ್ರಾಧ್ಯಾಪಕರ ವಸತಿಗೃಹಗಳಿಗೂ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಇಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಸಮಸ್ಯೆ ಬಗೆಹರಿಸಲು ನಿರ್ದೇಶಕರು ಕ್ರಮವಹಿಸಬೇಕು ಎಂದು ಜಿಮ್ಸ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಆದರೆ, ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಇದನ್ನು ಅಲ್ಲಗಳೆದಿದ್ದಾರೆ. ನೀರಿನ ಸಮಸ್ಯೆ ಎದುರಾಗಿರುವ ಕಾರಣಕ್ಕೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ರಜೆ ಕೊಟ್ಟು ಮನೆಗೆ ಕಳುಹಿಸಿಲ್ಲ. ಎರಡು ಬ್ಯಾಚ್‌ನ ವಿದ್ಯಾರ್ಥಿಗಳ ಆಂತರಿಕ ಪರೀಕ್ಷೆಗಳು ಮುಗಿದಿರುವ ಕಾರಣ ಅವರಿಗೆ ಐದು ದಿನಗಳ ಕಾಲ ರಜೆ ಕೊಡಲಾಗಿದೆ. ಸೋಮವಾರದಿಂದ ಎಲ್ಲರೂ ತರಗತಿ ಹಾಜರಾಗುತ್ತಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆಸ್ಪತ್ರೆಗೆ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಲಾಗಿದೆ. ಇಲ್ಲಿಗೆ 24/7 ನೀರು ಪೂರೈಕೆ ಆಗುತ್ತಿಲ್ಲ. ಕೊಳವೆಬಾವಿ ನೀರನ್ನು ಒದಗಿಸಿದ್ದು, ರೋಗಿಗಳಿಗೆ ತೊಂದರೆ ಆಗಿಲ್ಲ. ಹಮ್ಮಿಗಿ ಬ್ಯಾರೇಜ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆದಿರುವುದರಿಂದ ವಸತಿ ನಿಲಯಕ್ಕೆ ನೀರು ಪೂರೈಕೆ ಆಗುತ್ತಿಲ್ಲ. ಹಾಗಾಗಿ, ನೀರನ್ನು ಮಿತವಾಗಿ ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Dharwad: ಶರಣರ ತತ್ವ ಪ್ರಚಾರಕ್ಕೆ ವಚನ ವಿಶ್ವವಿದ್ಯಾಲಯ ಬೇಕು : ಬಾಲ್ಕಿ ಶ್ರೀ