ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಬಂದೊದಗಿರುವುದು ಒಂದು ಕಡೆಯಾದರೆ, ಮತ್ತೂಂದೆಡೆ ಟೆರೇಸ್ ಗಾರ್ಡನ್ ಗಳಿಗೂ ನೀರು ಇಲ್ಲದೇ ಬಿಕೋ ಎನ್ನುತ್ತಿವೆ.
ಬರೋಬ್ಬರಿ 8 ಲಕ್ಷಕ್ಕೂ ಹೆಚ್ಚಿನ ಟೆರೆಸ್ ಗಾರ್ಡನ್‌ಗಳಲ್ಲಿರುವ ಲಕ್ಷಾಂತರ ಗಿಡಗಳು ನೀರಿಲ್ಲದೇ ಒಣಗಿ ಸಾಯುತ್ತಿವೆ. ಗಾರ್ಡನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ 8 ಲಕ್ಷಕ್ಕೂ ಹೆಚ್ಚು ಟೆರೇಸ್ ಗಾರ್ಡನ್ ಗಳಿವೆ ಎಂದು ಅಂದಾಜಿಸಲಾಗಿದೆ.
ಇತ್ತೀಚೆಗೆ ಪ್ರತಿ ಮನೆಗಳಲ್ಲೂ ಕನಿಷ್ಠ 10-15 ಪಾಟ್‌ಗಳಲ್ಲಿ ಗಿಡ ನೆಟ್ಟು ಪೋಷಿಸುತ್ತಿರುವವರ ಪ್ರಮಾಣ ಹೆಚ್ಚಾಗಿದೆ. ಆದರೆ, ಇದೀಗ ಪಾಟ್, ಟೆರೇಸ್‌ಗಳಲ್ಲಿ ಚಿಗುರೊಡೆದು ಇನ್ನೇನು ಹೂವಾಗುವ ಹಂತದಲ್ಲಿರುವ ಲಕ್ಷಾಂತರ ಹೂವಿನ ಗಿಡಗಳು ನೀರಿಲ್ಲದೇ ಒಣಗುತ್ತಿವೆ. ಮನೆ ಮಾಲೀಕರು, ಬಾಡಿಗೆದಾರರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಸಂದರ್ಭ ಬಂದೊದಗಿದೆ. ಇನ್ನು ಗಿಡಗಳಿಗೆ ನೀರುಣಿಸುವುದು ಹೇಗೆ ಎಂಬುದು ಬೆಂಗಳೂರಿನಲ್ಲಿ ಟೆರೇಸ್ ಗಾರ್ಡನ್ ನಿರ್ವಹಣೆ ಮಾಡುತ್ತಿರುವ ಬಹುತೇಕ ಜನರ ಆತಂಕ.
8 ಲಕ್ಷ ಟೆರೆಸ್ ಗಾರ್ಡನ್‌ಗಳ ಪೈಕಿ 4 ಲಕ್ಷ ಟೆರೇಸ್ ಗಾರ್ಡನ್ ಗಿಡಗಳಿಗೆ ನೀರುಣಿಸಲು ಆಗುತ್ತಿಲ್ಲ. ಅಂದಾಜು 40 ಸಾವಿರ ದೊಡ್ಡ ಮಟ್ಟದ ನೂರಾರು ಗಿಡಗಳಿರುವ ಗಾರ್ಡನ್‌ಗಳಿದ್ದರೆ, ಉಳಿದ ಟೆರೇಸ್ ಗಾರ್ಡನ್‌ಗಳಲ್ಲಿ 100ರಿಂದ 200 ಗಿಡ ಬೆಳೆಯಲಾಗಿದೆ. ಕೆಲವು ಪುಷ್ಪ ಪ್ರಿಯರು ಅಪಾರ್ಟ್ ಮೆಂಟ್‌ನ ಫ್ಲ್ಯಾಟ್, ಮನೆ ಅಂಗಳದಲ್ಲಿ ಗಾರ್ಡನ್ ನಿರ್ಮಿಸಿದ್ದಾರೆ. ಇನ್ನು ಕೆಲವು ಟೆರೇಸ್ ಗಾರ್ಡನ್ ಮಾಲೀಕರು ಖಾಸಗಿ ಟ್ಯಾಂಕರ್‌ಗಳಿಗೆ ಸಾವಿರಾರು ರೂ. ನೀಡಿ ನೀರು ಖರೀದಿಸಿ ಹೂವಿನ ಗಿಡಗಳಿಗೆ ಸಿಂಪಡಿಸು ತ್ತಿರುವ ದೃಶ್ಯಗಳೂ ಅಲ್ಲಲ್ಲಿ ಕಾಣ ಸಿಗುತ್ತವೆ. ಆದರೆ, ಶೇ.70 ಟೆರೆಸ್ ಗಾರ್ಡನ್ ಮಾಲೀಕರು ಅತಂತ್ರ ಸ್ಥಿತಿ ಯಲ್ಲಿದ್ದಾರೆ. ನೀರುಣಿಸಲಾಗದೇ ಕೊರಗುತ್ತಿದ್ದಾರೆ.
ನೀರಿಲ್ಲದೇ ಬಸವಳಿದ ಪ್ರಾಣಿ-ಪಕ್ಷಿಗಳು : ತಾಪಮಾನ ಏರಿಕೆಗೆ ಕಾಂಕ್ರೀಟ್ ಬೀಡಾಗಿರುವ ಬೆಂಗಳೂರಿನಲ್ಲಿ ಮನುಷ್ಯರು ಮಾತ್ರವಲ್ಲದೆ, ಪ್ರಾಣಿ-ಪಕ್ಷಿಗಳೂ ಬಸವಳಿಯುತ್ತಿವೆ. ನಗರದಲ್ಲಿ ಎಲ್ಲೆಲ್ಲಿ ಪಕ್ಷಿಗಳು ಹೆಚ್ಚಾಗಿವೆಯೇ ಅಲ್ಲೆಲ್ಲಾ ನೀರಿನ ಬಟ್ಟಲುಗಳನ್ನು ಇಟ್ಟು ಅವುಗಳ ಬಾಯಾರಿಕೆ ನೀಗಲು ಕೆಲವರು ಮುಂದಾಗಿದ್ದಾರೆ. ಹದ್ದುಗಳು, ಕಾಗೆ, ಗೂಬೆ, ಪಾರಿವಾಳಗಳು ಉಷ್ಣಾಂಶದ ಬೇಗೆಗೆ ಪರಿತಪಿಸುತ್ತಿವೆ. ಪಕ್ಷಿಗಳ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿತ್ರಾಣವಾಗಿ ತಲೆತಿರುಗಿ ನೆಲಕ್ಕೆ ಬೀಳುತ್ತಿವೆ. ಬಿಸಿಲ ತಾಪಕ್ಕೆ ನೀರಿಲ್ಲದೇ ನಗರದಲ್ಲಿ ಸಾವಿರಾರು ಪಕ್ಷಿಗಳು ಬಸವಳಿದಿವೆ.
ಇವುಗಳ ಜತೆಗೆ ನಾಯಿ, ಬೆಕ್ಕು, ಕೋತಿ ಹಾಗೂ ಬೀಡಾಡಿ ದನ ಕರುಗಳೂ ಕುಡಿಯಲು ಸರಿಯಾಗಿ ನೀರು ನೀರಿಲ್ಲದೇ ಸಂಕಷ್ಟಕ್ಕೆ ಸಿಲುಕಿವೆ. ಈ ಹಿಂದೆ ಅಂಗಡಿ, ಅಲ್ಲಲ್ಲಿ ನಿಂತಿರುತ್ತಿದ್ದ ನೀರು, ಸಮೀಪದ ಕೆರೆ-ಕಟ್ಟೆಗಳು ಸೇರಿದಂತೆ ವಿವಿಧೆಡೆ ಸಿಗುವ ನೀರಿನ ಮೂಲಗಳನ್ನು ಇವುಗಳು ಆಶ್ರಯಿಸಿದ್ದವು.
ಸಾರ್ವಜನಿಕರು ಏನು ಮಾಡಿದರೆ ಒಳಿತು? :
ಮರು ಸಂಸ್ಕರಣೆ ಮಾಡಿದ ನೀರನ್ನು ಗಿಡಗಳಿಗೆ ಬಳಸಿ
ನೀರಿನಾಂಶ ಹೀರಿಕೊಳ್ಳುವ ತ್ಯಾಜ್ಯ ಗಳಿಂದ ತಯಾರಿಸಿದ ಗೊಬ್ಬರ ಹಾಕಿ
ಮನೆಗಳ ತಾರಸಿ ಮೇಲೆ, ಅಂಗಡಿಗಳ ಬಳಿ ಪ್ರಾಣಿ-ಪಕ್ಷಿಗಳಿಗಾಗಿ ನೀರಿನ ಬಟ್ಟಲು ಇಡಿ
ಮನೆ ಸಮೀಪ ಬೀದಿ ನಾಯಿ, ಹಸು, ಬೆಕ್ಕು ಇನ್ನಿತರ ಪ್ರಾಣಿಗಳಿಗೆ ನೀರಿನ ತೊಟ್ಟಿ ರಚಿಸಿ
ಕಿಚನ್ ತ್ಯಾಜ್ಯ ಬಳಸಿ ಸಣ್ಣ ಪ್ರಮಾಣದಲ್ಲಿ ಮನೆಯಲ್ಲಿ ಗೊಬ್ಬರ ತಯಾರಿಸಬಹುದು. ಈಗ ಬಹಳಷ್ಟು ಕಡೆಗಳಲ್ಲಿ ಬಿದ್ದಿರುವ ಎಲೆಗಳನ್ನು ಸಂಗ್ರಹಿಸಿ ಗೊಬ್ಬರದಂತೆ ಮಾಡಿ ಟೆರೇಸ್ ಗಾರ್ಡನ್ ಗಿಡಗಳಿಗೆ ಬಳಸಬಹುದು. ಇದರಿಂದ ಕೆಲವು ದಿನ ಗಿಡಗಳಿಗೆ ನೀರು ಹಾಕದಿದ್ದರೂ ಅವುಗಳು ಒಣಗುವುದಿಲ್ಲ.
-ಜಿ.ಕುಸುಮಾ, ಉಪ ನಿರ್ದೇಶಕಿ, ಲಾಲ್‌ಬಾಗ್ ಸಸ್ಯಶಾಸ್ತ್ರ ತೋಟ (ತೋಟಗಾರಿಕಾ ಇಲಾಖೆ)
–ಅವಿನಾಶ ಮೂಡಂಬಿಕಾನ