ಬೀದರ: ಪಶ್ಚಿಮಘಟ್ಟ ಸೇರಿ ರಾಜ್ಯದ ಅರ್ಧಕ್ಕಿಂತ ಹೆಚ್ಚು ಪ್ರದೇಶದಲ್ಲಿ ಮುಂಗಾರು ಮಳೆ ಆರ್ಭಟ ದಿಂದ ಜಲಾಶಯ, ನದಿಗಳು ಬೋರ್ಗರೆಯುತ್ತಿದ್ದರೆ, ಇತ್ತ ಬಿಸಿಲು ನಾಡಿನಲ್ಲಿ ಮಾತ್ರ ವ್ಯತಿರಿಕ್ತ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯ ಮಳೆಯಿಂದಾಗಿ ರೈತರ ಜೀವನಾಡಿ ಕಾರಂಜಾ ಜಲಾಶಯ ಅಷ್ಟೇ ಅಲ್ಲ ಕೆರೆ-ಕಟ್ಟೆಗಳೂ ಸಹ ನೀರಿಲ್ಲದೇ ಬರಿದಾಗಿವೆ.
ಕಳೆದ ಐದಾರು ದಿನಗಳಿಂದ ಮಳೆ ಅಬ್ಬರದಿಂದಾಗಿ ಮಲೆನಾಡು, ಕರಾವಳಿ ಪ್ರದೇಶ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಬಂದಿದೆ. ಆದರೆ, ಮಳೆಯಾಶ್ರಿತ ಪ್ರದೇಶವಾಗಿ ರುವ ಗಡಿ ನಾಡು ಬೀದರನಲ್ಲಿ ಮಾತ್ರ ಮಳೆ ಅಭಾವ ಎದುರಾಗಿದೆ. ಉತ್ತಮ ಬೆಳೆಗೆ ಸಾಕಾಗುವಷ್ಟು ಮಳೆ ಬಿದ್ದಿದೆ ಆದರೂ ಕಾರಂಜಾ ಜಲಾಶಯ, ಕೆರೆಗಳಿಗೆ ನೀರು ಹರಿದು ಬಂದಿಲ್ಲ. ಮಳೆಗಾಲಯದಲ್ಲೂ ರೈತರ ಭೂಮಿಗೆ ನೀರುಣಿಸುವ ಮತ್ತು ಜನರ ದಾಹ ನೀಗಿಸುವ ಕಾರಂಜಾದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಆತಂಕ ಹೆಚ್ಚಿಸಿದೆ.
ಆಗಸ್ಟ್‌ನಲ್ಲಿ ಮಳೆ ಕೊರತೆ: ಆಗಸ್ಟ್ ಮೊದಲ ವಾರದಲ್ಲಿ ರಾಜ್ಯದೆಲ್ಲೆಡೆ ವರ್ಷಧಾರೆ ಆಗುತ್ತಿದ್ದರೆ ಬೀದರ ಜಿಲ್ಲೆಯಲ್ಲಿ ಮಳೆ ಕೈ ಕೊಟ್ಟಿದೆ. ಕಳೆದ 8 ದಿನಗಳಲ್ಲಿ ಜಿಲ್ಲೆಯಲ್ಲಿ 45.20 ಮಿಮೀ ಮಳೆ ಆಗಬೇಕಾಗಿದ್ದು, ಕೇವಲ 26.10 ಮಿಮೀನಷ್ಟು ಮಳೆ ಬಿದ್ದಿದೆ. ಮುಂಗಾರು ಆರಂಭದಿಂದ ಜೂ.1ರಿಂದ ಆ.8ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ 67 ಮಿಮೀ ಮಳೆ ಹೆಚ್ಚಾಗಿದೆ. 341 ಮಿಮೀ ಬೀಳ ಬೇಕಾಗಿದ್ದು, 408 ಮಿಮೀ ಮಳೆ ಸುರಿದಿದೆ. ಈ ಮಳೆ ಬೆಳೆಗಳಿಗಷ್ಟೇ ಸಾಥ್ ನೀಡಿದ್ದು, ಜಲಾನಯನ ಪ್ರದೇಶದಲ್ಲಿ ಮಳೆ ಅಭಾವದಿಂದ ಜಲಾಶಯ, ಹಳ್ಳ-ಕೊಳ್ಳಗಳಲ್ಲಿ ನೀರು ಸಂಗ್ರಹವಾಗಿಲ್ಲ.
ಕಾರಂಜಾ ಜಲಾಶಯ 7.69 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದ್ದು, 7 ಟಿಎಂಸಿ ನೀರು ಹಿಡಿದಿಟ್ಟುಕೊಳ್ಳಬಹುದು. ಆದರೆ ಸದ್ಯ ಜಲಾಶಯದಲ್ಲಿ 1.032 ಟಿಎಂಸಿ ನೀರಿನ ಸಂಗ್ರಹವಿದೆ ಇದರಲ್ಲಿ 0.375 ಟಿಎಂಸಿ ಡೆಡ್ ಸ್ಟೋರೇಜ್, 0.657 ಲೈವ್ ಸ್ಟೋರೇಜ್ ಇದೆ. ಜಮೀನು ಜತೆಗೆ ಬೀದರ ನಗರ, ಹುಮನಾಬಾದ, ಚಿಟಗುಪ್ಪ ಪಟ್ಟಣ, ಕಮಠಾಣಾ ಸೇರಿದಂತೆ ಸುತ್ತಲಿನ 30ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರಿಗೆ ಈ ಜಲಾಶಯವೇ ಆಸರೆ. ಬಹುತೇಕ ಮುಂಗಾರು ಅವಧಿ ಪೂರ್ಣಗೊಳ್ಳುತ್ತಿದ್ದರೂ ಕಾರಂಜಾದಲ್ಲಿ ಕುಡಿಯಲು ಸಹ ಸಾಕಾಗದಷ್ಟು ನೀರಿನ ಲಭ್ಯತೆ ಇರುವುದು ಬರುವ ದಿನಗಳಲ್ಲಿ ಜಲಕ್ಷಾಮ ಸೃಷ್ಟಿಯಾಗಿರುವ ಸಾಧ್ಯತೆ ದಟ್ಟವಾಗಿದೆ.
ಕೆರೆಗಳು ಭಣ ಭಣ : ಜಮೀನುಗಳಲ್ಲಿ ಕಳೆ ಹೆಚ್ಚಿಸಬೇಕಾದ ಕೆರೆಗಳು ನೀರಿಲ್ಲದೇ ಇಂದು ಭಣಗುಡುತ್ತಿವೆ. ಜಿಲ್ಲೆಯಲ್ಲಿ 124 ಸಣ್ಣ ನೀರಾವರಿ ಕೆರೆಗಳ ಪೈಕಿ 99 ಕೆರೆಗಳು ನೀರಿಗಾಗಿ ಎದುರು ನೋಡುತ್ತಿದ್ದು, ಕೇವಲ 25 ಕೆರೆಗಳು ಮಾತ್ರ ಭರ್ತಿ ಆಗಿವೆ. ಎಲ್ಲವೂ ಬಸವಕಲ್ಯಾಣ ಮತ್ತು ಭಾಲ್ಕಿ ತಾಲೂಕಿನದ್ದೇ ಆಗಿವೆ. ಒಟ್ಟು ಕೆರೆಗಳಲ್ಲಿ 50ಕ್ಕೂ ಹೆಚ್ಚು ಕೆರೆಗಳು ಸಂಪೂರ್ಣ ಖಾಲಿ ಇದ್ದು, ಇನ್ನುಳಿದವುಗಳು ಶೇ. 40ರಿಂದ 90ರಷ್ಟು ತುಂಬಿವೆ.
ಬೀದರ ಜಿಲ್ಲೆಯಲ್ಲಿ ಸಾಮಾನ್ಯ ಮಳೆ ಆಗಿದೆ. ಜಲಾನಯನ ಪ್ರದೇಶದಲ್ಲಿ ವರ್ಷಧಾರೆ ಕೊರತೆಯಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಆಗಿಲ್ಲ. ಕೇವಲ 1.032 ಟಿಎಂಸಿ ನೀರಿನ ಲಭ್ಯತೆ ಇದೆ. ಈ ವರ್ಷ ಬೀದರ ನಗರ ಸೇರಿ ಜಿಲ್ಲೆಯ ವಿವಿಧ ಪಟ್ಟಣ, ಗ್ರಾಮಗಳಿಗೆ ಕುಡಿಯುವ ನೀರಿಗೂ ಕೊರತೆ ಆಗಬಹುದು. ಆಗಸ್ಟ್ ತಿಂಗಳಾಂತ್ಯದವರೆಗೆ ಉತ್ತಮ ಮಳೆಯಾದರೆ ಮಾತ್ರ ಜಲಾಶಯ ತುಂಬಲು ಸಾಧ್ಯ.
-ಆನಂದಕುಮಾರ ಪಾಟೀಲ, ಎಇಇ, ಕಾರಂಜಾ ಯೋಜನೆ, ಬೀದರ
–ಶಶಿಕಾಂತ ಬಂಬುಳಗೆ