Advertisement

Lack of Water: ಶುದ್ಧ ನೀರಿನ ಘಟಕಗಳಲ್ಲಿ “ನೀರಿಲ್ಲ, ಸಹಕರಿಸಿ’

12:19 PM Feb 10, 2024 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಗೆ ಬೇಸಿಗೆ ಕಾಲಿಡುತ್ತಿದ್ದಂತೆ ಕುಡಿಯುವ ನೀರಿಗೂ ಹಾಹಾಕಾರ ಬಂದೊದಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಮಾತ್ರ ನೀರು ಲಭ್ಯವಾಗುತ್ತಿದ್ದು, ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

Advertisement

ಉದ್ಯಾನ ನಗರಿಯಲ್ಲಿರುವ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಕೊಳವೆಬಾವಿಗಳ ನೀರು ಪೂರೈಕೆ ಆಗುತ್ತಿವೆ. ಈ ಬಾರಿ ಮಳೆ ಕೊರತೆಯಿಂದ ಬರಗಾರ ಬಂದಿರುವ ಹಿನ್ನೆಲೆಯಲ್ಲಿ ಕೊಳವೆಬಾವಿಗಳಲ್ಲಿ ನೀರು ಬತ್ತುತ್ತಿವೆ. ಹೀಗಾಗಿ ರಾಜರಾಜೇಶ್ವರಿನಗರ, ಬ್ಯಾಟರಾಯನಪುರ, ಜಯನಗರ, ರಾಜಾಜಿನಗರ, ಯಶವಂತಪುರ, ಎಲೆಕ್ಟ್ರಾನಿಕ್‌ ಸಿಟಿ, ಮಡಿವಾಳ, ಯಲಹಂಕ, ಸರ್ಜಾಪುರ, ಮಾರತ್ತಹಳ್ಳಿ ಸೇರಿದಂತೆ ವಿವಿಧೆಡೆ ಬೇಡಿಕೆಗೆ ತಕ್ಕಷ್ಟು ಕುಡಿಯುವ ನೀರು ಸಿಗದೇ ಜನ ಸಾಮಾನ್ಯರು ಹೈರಾಣಾಗಿದ್ದಾರೆ. ಇತ್ತ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀರು ಪೂರೈಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನೀರಿನ ಘಟಕಗಳಲ್ಲೇ ನೀರು ಅಭಾವ ನಾಮಫ‌ಲಕ: ಬೆಂಗಳೂರಿನಲ್ಲಿರುವ ಶೇ.15ಕ್ಕೂ ಹೆಚ್ಚಿನ ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ನೀರಿನ ಅಲಭ್ಯತೆ ಕುರಿತು ನಾಮಫ‌ಲಕ ಅಳವಡಿಸಲಾಗಿದೆ. “ನೀರಿನ ಅಭಾವವಿರು ವುದರಿಂದ ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮುಚ್ಚಲಾಗುತ್ತದೆ. (ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ). ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ನೀರಿನ ಲಭ್ಯತೆ ಇದೆ’ ಎಂಬ ನಾಮಫ‌ಲಕಗಳು ಬೆಂಗಳೂರಿನ 50ಕ್ಕೂ ಹೆಚ್ಚು “ಶುದ್ಧ ಕುಡಿಯುವ ನೀರಿನ ಘಟಕ’ಗಳಲ್ಲಿ ರಾರಾಜಿಸುತ್ತಿವೆ. ಇಂತಹ ಕಡೆಗಳಲ್ಲಿ ಹಲವು ಸಮಯಗಳ ಕಾಲ ಸರತಿ ಸಾಲಿನಲ್ಲಿ ನಿಂತು ಸಾರ್ವಜನಿಕರು ನೀರು ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಕಾಣ ಸಿಗುತ್ತಿವೆ. ಶೀಘ್ರದಲ್ಲೇ ಬೆಂಗಳೂರಿನ ಇನ್ನಷ್ಟು ಕಡೆಗಳಲ್ಲಿ ಇದೇ ದೃಶ್ಯಗಳು ಕಾಣ ಸಿಗುವ ಲಕ್ಷಣ ಗೋಚ ರಿಸಿದೆ ಎಂಬುದು ಜಲತಜ್ಞರ ಅಭಿಪ್ರಾಯ.

ಕುಡಿಯುವ ನೀರಿಗೂ ಸಂಚಕಾರ ಏಕೆ?: ಮಳೆ ಅಭಾವದಿಂದ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಹೀಗಾಗಿ ಕೊಳವೆಬಾವಿಗಳಲ್ಲಿ ಶುದ್ಧ ಘಟಕಗಳಿಗೆ ಬೇಕಾದಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇಂಗುಗುಂಡಿಗಳಂತಹ ಭೂಮಿಯಲ್ಲೇ ನೀರು ಸಂಗ್ರಹಿಸಿಡುವ ವೈಜ್ಞಾನಿಕ ವಿಧಾನಗಳನ್ನು ಅಳವಡಿಸದೇ ಇರುವ ಪ್ರದೇಶಗಳಲ್ಲಿರುವ ಕೊಳವೆಬಾವಿಗಳಲ್ಲಿ ನೀರು ಬತ್ತಿವೆ. ಕೆಲವು ಶುದ್ದ ಕುಡಿಯುವ ನೀರಿನ ಘಟಕಗಳು ಈಗಾಗಲೇ ಮುಚ್ಚಿವೆ. ಇನ್ನೇನು ಫೆ.15ರಿಂದ ಬೇಸಿಗೆ ಕಾಲವು ಶುರುವಾಗಲಿದ್ದು, ಆ ವೇಳೆ ಬೆಂಗಳೂರಿನ ಇನ್ನಷ್ಟು ಕುಡಿಯುವ ನೀರಿನ ಘಟಕಗಳು ಬಾಗಿಲು ಹಾಕುವ ಮುನ್ಸೂಚನೆ ಸಿಕ್ಕಿದೆ.

ಕೆಟ್ಟು ಹೋಗಿವೆ ಬೋರ್‌ವೆಲ್‌ಗ‌ಳು: ರಾಜಧಾನಿಯಲ್ಲಿ ಬತ್ತಿರುವ ಬೋರ್‌ವೆಲ್‌ಗ‌ಳಿಗೆ ರೀ ಬೋರಿಂಗ್‌ ಮಾಡಿಸುವ ಅನಿವಾರ್ಯತೆ ಎದುರಾಗಿದೆ. ದಿನ ಬಳಕೆಯ ಅಗತ್ಯಗಳಿಗೆ ನೀರು ಪೂರೈಸುವ ಸಂಬಂಧ ಬಿಬಿಎಂಪಿಯು ನಗರದ ಪ್ರಮುಖ ಸ್ಥಳಗಳಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬೋರ್‌ವೆಲ್‌ಗ‌ಳಲ್ಲಿ ನೀರಿದ್ದರೂ ನಿರ್ವಹಣೆ ಇಲ್ಲದೇ ಕೆಟ್ಟು ಹೋಗಿವೆ. ಖಾಸಗಿ ಟ್ಯಾಂಕರ್‌ ಮೊರೆ ಹೋಗುತ್ತಿರುವವರ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಖಾಸಗಿ ನೀರು ಪೂರೈಕೆದಾರರೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಆರ್‌ಆರ್‌ ನಗರದಲ್ಲಿ ನೀರಿಗಾಗಿ ಹಾಹಾಕಾರ: ಆರ್‌ಆರ್‌ನಗರದ ಬಿಎಚ್‌ಇಎಲ್‌ ಲೇಔಟ್‌ನಲ್ಲಿ ಜಲಮಂಡಳಿಯು ಸೂಕ್ತ ರೀತಿಯಲ್ಲಿ ನೀರು ಪೂರೈಸದೇ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಸಂಗವೂ ನಡೆದಿದೆ. ಬೋರ್‌ವೆಲ್‌ಗ‌ಳಲ್ಲಿರುವ ನೀರು ಬತ್ತಿ ಹೋಗಿ ಆರ್‌ಆರ್‌ ನಗರ ನಿವಾಸಿಗಳಿಗೆ ಭಾರಿ ಸಮಸ್ಯೆ ಉಂಟಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ನೀರಿಗಾಗಿ ಪರದಾಡುತ್ತಿದ್ದಾರೆ. ಮುಂದೆ ಬೇಸಿಗೆಯಲ್ಲಿ ಏನು ಮಾಡುವುದು ಎಂಬ ಚಿಂತೆ ಕಾಡುತ್ತಿದೆ ಎಂದು ಆರ್‌ಆರ್‌ ನಗರದ ನಿವಾಸಿ ಪಿ.ವೆಂಕಟೇಶ್‌ “ಉದಯವಾಣಿ’ ಜೊತೆಗೆ ಸಮಸ್ಯೆ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಅಭಾವ ಇರುವ ವಿಚಾರದ ಬಗ್ಗೆ ಪರಿಶೀಲಿಸುತ್ತೇನೆ. ಇದಾದ ಬಳಿಕ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದಿಂದ ಕೈಗೊಳ್ಳಬೇಕಾದ ಕ್ರಮ ಕೈಗೊಳ್ಳಲಾಗುವುದು. -ರಾಕೇಶ್‌ ಸಿಂಗ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ.

 

Advertisement

Udayavani is now on Telegram. Click here to join our channel and stay updated with the latest news.

Next