ಮುಧೋಳ: ಕರ್ನಾಟದ ಮುಕುಟಮಣಿಯಂತಿರುವ ಯಡಹಳ್ಳಿ ಚೀಂಕಾರದಲ್ಲಿ ಈಗ ಅಕ್ಷರಶಃ ದಾಹ ಮನೆ ಮಾಡಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಅಪರೂಪದ ಪ್ರಾಣಿಗಳೆಂದು ಗುರುತಿಸಿಕೊಂಡಿರುವ ಚೀಂಕಾರ ಸೇರಿದಂತೆ ನೂರಾರು ಪ್ರಾಣಿಗಳು ನೀರಿಗಾಗಿ ಪರದಾಡುವಂತಾಗಿದೆ.
ಜಿಲ್ಲೆಯ ಬೀಳಗಿ ಹಾಗೂ ಮುಧೋಳ ತಾಲೂಕಿನ 9636.91ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿರುವ ಯಡಹಳ್ಳಿ ಚೀಂಕಾರ ವನ್ಯಜೀವಿ ಧಾಮದಲ್ಲಿ ಚೀಂಕಾರ, ಮೊಲ, ನರಿ, ತೋಳ, ಕಾಡುಹಂದಿ ಸೇರಿ ಹತ್ತಾರು ಪಕ್ಷಿಗಳು ಆಶ್ರಯ ಪಡೆದುಕೊಂಡಿದೆ. ಆದರೆ, ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದಾಗಿ ವನ್ಯಜೀವಿಧಾಮದ ಪ್ರಾಣಿ ಪಕ್ಷಿಗಳು ತೀವ್ರ ತೆರನಾದ ತೊಂದರೆ ಅನುಭವಿಸುತ್ತಿವೆ.
ನೀರು ಪೂರೈಕೆಗೆ ಮುಂದಾಗದ ಅರಣ್ಯ ಇಲಾಖೆ: ವನ್ಯಜೀವಿ ಧಾಮದಲ್ಲಿನ ಪ್ರಾಣಿಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಅರಣ್ಯ ಇಲಾಖೆ ಮುಧೋಳ ತಾಲೂಕಿನ ಹಲವು ಕಡೆಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಿದೆ. ಆ ತೊಟ್ಟಿಗಳಿಗೆ ಪ್ರತಿ ವರ್ಷ ಬೇಸಿಗೆಯಲ್ಲಿ ಇಲಾಖೆಯಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮಾರ್ಚ್ ಅಂತ್ಯ ಬಂದರೂ ನೀರು ಪೂರೈಕೆಗೆ ಅಧಿ ಕಾರಿಗಳು ಮುಂದಾಗುತ್ತಿಲ್ಲ. ಅಧಿಕಾರಿಗಳ ಕ್ರಮದಿಂದಾಗಿ ಅರಣ್ಯದಲ್ಲಿನ ಪ್ರಾಣಿಗಳು ನೀರಿಗಾಗಿ ಪರಿತಪಿಸುವಂತಾಗಿದೆ.
ಎರಡುಕಡೆ ಜಲಮೂಲ: ಈ ಬಾರಿ ಹೆಚ್ಚು ಮಳೆಯಾದ ಪರಿಣಾಮ ಮುಧೋಳ ವ್ಯಾಪ್ತಿಯ ಹಲಗಲಿ ಭಾಗದ ಹುಣಚಿಬೆಣಚಿ ಎಂಬ ಸ್ಥಳದಲ್ಲಿ ನೈಸರ್ಗಿಕವಾಗಿ ನೀರು ಸಂಗ್ರಹವಾಗಿದ್ದರೆ, ಪುರಕಟ್ಟೆ ಎಂಬ ಪ್ರದೇಶದಲ್ಲಿ ಹಾದು ಹೋಗಿರುವ ಕುಡಿವ ನೀರಿನ ಪೈಪ್‌ಲೈನ್ ವಾಲ್‌ನಲ್ಲಿ ನೀರು ಸ್ವಲ್ಪ ಮಟ್ಟಿಗೆ ಸಂಗ್ರಹವಾಗಿದೆ. ಸದ್ಯ ಕಾಡು ಪ್ರಾಣಿಗಳಿಗೆ ಈ ಎರಡು ತಾಣಗಳು ನೀರಿನ ಆಶ್ರಯತಾಣಗಳಾಗಿವೆ. ಆದರೆ, ಅಷ್ಟು ದೊಡ್ಡಮಟ್ಟದ ಕಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಮೂಲಗಳನ್ನು ಅರಣ್ಯ ಇಲಾಖೆಯವರು ನಿರ್ಮಿಸಬೇಕು ಎಂಬುದು ಪ್ರಾಣಿಪ್ರಿಯರ ಒತ್ತಾಯವಾಗಿದೆ.
ಬಾಯ್ದೆರೆದು ನಿಂತಿವೆ ನೀರಿನ ತೊಟ್ಟಿಗಳು: ಪ್ರತಿ ವರ್ಷ ಬೇಸಿಗೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಳಜಿಯಿಂದ ನೀರಿನ ತೊಟ್ಟಿಗೆ ನೀರನ್ನು ತುಂಬಿಸುತ್ತಿದ್ದರಿಂದ ಅರಣ್ಯ ಹಲವು ಕಡೆ ಕೃತಕ ನೀರಿನ ಮೂಲ ಸೃಷ್ಟಿಸಿದಂತಾಗುತ್ತಿತ್ತು. ಆದರೆ, ಈ ಬಾರಿ ಇದೂವರೆಗೂ ನೀರು ಪೂರೈಕೆಗೆ ಮುಂದಾಗದಿರುವುದರಿಂದ ನೀರಿನ ತೊಟ್ಟಿಗಳು ಹಾಗೂ ಕೃತಕ ನೀರು ಸಂಗ್ರಹ ತಗ್ಗು ದಿನ್ನಿಗಳು ನೀರಿಲ್ಲದೆ ಬಾಯ್ದೆರೆದು ನಿಂತಿವೆ.
ನಾಡಿನತ್ತ ಕಾಡುಪ್ರಾಣಿಗಳು: ಅರಣ್ಯದಲ್ಲಿ ನೀರಿನ ಮೂಲ ಕಡಿಮೆಯಾಗಿರುವುದರಿಂದ ಕಾಡುಪ್ರಾಣಿಗಳು ದಾಹ ತಣಿಸಿಕೊಳ್ಳಲು ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮ ಹಾಗೂ ಜಮೀನುಗಳಿಗೆ ನುಗ್ಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಕಾಡುಪ್ರಾಣಿಗಳು ನಾಯಿಗಳ ದಾಳಿಗೆ ತುತ್ತಾಗುವ ಸಂಭವ ಹೆಚ್ಚುತ್ತದೆ ಎಂಬುದು ಸಾರ್ವಜನಿಕ ಆತಂಕವಾಗಿದೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆಗೆ ಅಳಿವಿನಂಚಿನಲ್ಲಿರುವ ಚೀಂಕಾರ ಹಾಗೂ ಕಾಡು ಪ್ರಾಣಿಗಳ ದಾಹ ತಣಿಸಲು ನೀರಿನ ಸಮಸ್ಯೆ ನೀಗಿಸಲು ಮುಂದಾಗಬೇಕು ಎಂಬುದು ಪ್ರಾಣಿಪ್ರಿಯರ ಆಗ್ರಹವಾಗಿದೆ.
-ಗೋವಿಂದಪ್ಪ ತಳವಾರ