Advertisement

ಮಹಿಳೆಯರಲ್ಲಿ ಲಕ್ವಾದ ಎಚ್ಚರಿಕೆಯ ಸಂಕೇತಗಳು

08:29 PM Nov 06, 2021 | Team Udayavani |

ಜಾಗತಿಕವಾಗಿ ವಯಸ್ಕ ಜನಸಂಖ್ಯೆಯಲ್ಲಿ ಮರಣ ಮತ್ತು ಅಂಗವೈಕಲ್ಯಗಳಿಗೆ ಲಕ್ವಾವು ಒಂದು ಪ್ರಧಾನ ಕಾರಣವಾಗಿದೆ. ಲಕ್ವಾ ಉಂಟಾಗುವುದರ ಲಕ್ಷಣಗಳನ್ನು ಆದಷ್ಟು ಬೇಗನೆ ಗ್ರಹಿಸುವುದರಿಂದ ಚಿಕಿತ್ಸೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಬಹುದಾಗಿದೆ. ಲಕ್ವಾ ಉಂಟಾದ ತತ್‌ಕ್ಷಣ ನಾಲ್ಕೈದು ಗಂಟೆಗಳ ಒಳಗಿನ ಅವಧಿಯಲ್ಲಿ ಚಿಕಿತ್ಸೆ ಒದಗಿಸುವುದರಿಂದ ಸಂಭಾವ್ಯ ವೈಕಲ್ಯಗಳನ್ನು ಕನಿಷ್ಠ ಮಟ್ಟಕ್ಕೆ ಇಳಿಸಬಹುದಾಗಿದೆ. ಭಾರತದಲ್ಲಿ ಲಕ್ವಾ ಉಂಟಾಗುವ ಪ್ರಮಾಣ ಪ್ರತೀ 1 ಲಕ್ಷ ಜನಸಂಖ್ಯೆಗೆ 40ರಿಂದ 270ರ ನಡುವೆ ಇದೆ. ಲಕ್ವಾವು ಪುರುಷರಲ್ಲಿ ಮರಣ ಸಂಭವಿಸುವುದಕ್ಕೆ ಐದನೆಯ ಅತೀ ಪ್ರಮುಖ ಕಾರಣವಾಗಿದ್ದರೆ ಮಹಿಳೆಯರ ಮಟ್ಟಿಗೆ ಹೇಳುವುದಾದರೆ ಅದು ಮೂರನೇ ಸ್ಥಾನದಲ್ಲಿದೆ. ಜೀವಿತಾವಧಿ ಹೆಚ್ಚಿರುವುದರಿಂದ ಲಕ್ವಾದಿಂದ ಉಂಟಾಗುವ ಮರಣ ಪ್ರಮಾಣ ಹೆಚ್ಚಿದೆ. ಲಕ್ವಾ ನಿಭಾವಣೆ, ಚಿಕಿತ್ಸೆಯಲ್ಲಿ ಇತ್ತೀಚೆಗೆ ಆಗಿರುವ ಮುನ್ನಡೆಗಳ ಹೊರತಾಗಿಯೂ ಜನಸಾಮಾನ್ಯರಲ್ಲಿ ಲಕ್ವಾದ ಬಗ್ಗೆ ಅರಿವಿನ ಕೊರತೆ ಇದೆ. ಇದರಿಂದಾಗಿ ಲಕ್ವಾ ಪೀಡಿತರ ಕುಟುಂಬಗಳ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಹೊರೆ ಹೆಚ್ಚುತ್ತಿದೆ.

Advertisement

ಲಕ್ವಾ ಪ್ರಕರಣಗಳಲ್ಲಿ ಬಹುತೇಕ ಇಶೆಮಿಕ್‌ ಅಂದರೆ ರಕ್ತ ಸರಬರಾಜಿನಲ್ಲಿ ತಡೆ ಉಂಟಾಗುವುದರಿಂದ ಉಂಟಾಗುತ್ತವೆ. ಒಟ್ಟು ಲಕ್ವಾ ಪ್ರಕರಣಗಳಲ್ಲಿ ಇದು ಶೇ. 87ರಷ್ಟಿದೆ. ಉಳಿದವು ಹೆಮರಾಜಿಕ್‌ ಅಂದರೆ ಆಂತರಿಕ ರಕ್ತಸ್ರಾವದಿಂದ ಉಂಟಾಗುವಂಥವು. ಇವು ಇಂಟ್ರಾಸೆರಬ್ರಲ್‌ ಆಗಿರಬಹುದು ಅಥವಾ ಸಬ್‌ಅರಕ್ನಾಯಿಡ್‌ ಆಗಿರಬಹುದು.ಹಾರ್ಮೋನ್‌ ಅಂಶಗಳು, ಗರ್ಭಧಾರಣೆಯಂತಹ ಪ್ರಜನನಾತ್ಮಕ ಅಂಶಗಳು, ರೋಗನಿರೋಧಕ ಶಕ್ತಿ ಮತ್ತು ರಕ್ತ ಹೆಪ್ಪುಗಟ್ಟುವಿಕೆಯಂತಹ ಅನೇಕ ವಿಚಾರಗಳಲ್ಲಿ ಮಹಿಳೆಯರು ಪುರುಷರಿಗಿಂತ ಭಿನ್ನರಾಗಿರುತ್ತಾರೆ.

ಗರ್ಭಧಾರಣೆಯು ಮಹಿಳೆಯರಿಗೆ ಮೀಸಲಾದುದಾಗಿದೆ. ಗರ್ಭಧಾರಣೆಯ ಸಂದರ್ಭದಲ್ಲಿ ಉಂಟಾಗಬಹುದಾದ ಅಧಿಕ ರಕ್ತದೊತ್ತಡವು ಲಕ್ವಾಕ್ಕೆ ಒಂದು ಕಾರಣ ಆಗಬಹುದಾಗಿದೆ. ಸೆರಬ್ರಲ್‌ ವೆನಸ್‌ ಥ್ರೊಂಬೋಸಿಸ್‌ ರಕ್ತನಾಳಗಳಲ್ಲಿ ಥ್ರೊಂಬಸ್‌ನಿಂದ ಉಂಟಾಗುವ ಲಕ್ವಾವಾಗಿದೆ. ಇಂತಹ ರೋಗಿಗಳಲ್ಲಿ ಬಹುತೇಕ ಅಂದರೆ, ಶೇ. 70ರಷ್ಟು ಮಹಿಳೆಯರಾಗಿರುತ್ತಾರೆ.

ಬಾಯಿಯ ಮೂಲಕ ತೆಗೆದುಕೊಳ್ಳುವ ಗರ್ಭನಿರೋಧಕ ಔಷಧಗಳನ್ನು ಉಪಯೋಗಿಸುವ ಮಹಿಳೆಯರು ಇಂತಹ ಗರ್ಭನಿರೋಧಕ ಉಪಯೋಗಿಸದ ಮಹಿಳೆಯರಿಗಿಂತ 1.4ರಿಂದ 2 ಪಟ್ಟು ಹೆಚ್ಚು ಲಕ್ವಾಕ್ಕೆ ಒಳಗಾಗುವ ಅಪಾಯ ಹೊಂದಿರುತ್ತಾರೆ. ಹಿರಿಯ ವಯಸ್ಸಿನವರು, ಧೂಮಪಾನಿ, ಅಧಿಕ ರಕ್ತದೊತ್ತಡ ಅಥವಾ ಮಧುಮೇಹ ಹೊಂದಿರುವ, ಹೈಪರ್‌ ಕೊಲೆಸ್ಟೀರಿಲೆಮಿಯಾ ಹೊಂದಿರುವ ಮಹಿಳೆಯರಿಗೆ ಲಕ್ವಾ ಉಂಟಾಗುವ ಅಪಾಯ ಹೆಚ್ಚು. ಕಡಿಮೆ ವಯಸ್ಸಿನಲ್ಲಿ ಋತುಚಕ್ರ ಬಂಧ ಉಂಟಾಗುವುದು ಲಕ್ವಾಕ್ಕೆ ಒಳಗಾಗುವ ಅಪಾಯವನ್ನು ವೃದ್ಧಿಸುತ್ತದೆ ಎಂದು ಇತ್ತೀಚೆಗಿನ ಅಧ್ಯಯನಗಳು ಹೇಳಿವೆ.

ಇಷ್ಟು ಮಾತ್ರವಲ್ಲದೆ, ಪುರುಷರಿಗಿಂತ ಹೆಚ್ಚು ಸಾಮಾನ್ಯವಾದ ಲಕ್ವಾ ಅಪಾಯಾಂಶಗಳು ಮಹಿಳೆಯರಿಗೆ ಇವೆ. ಮಹಿಳೆಯರಲ್ಲಿ ಮೈಗ್ರೇನ್‌ ಇರುವ ಪ್ರಮಾಣ ಶೇ. 18ರಿಂದ ಶೇ. 20ರಷ್ಟಿದೆ. ಮೈಗ್ರೇನ್‌ ತಲೆನೋವು ಲಕ್ವಾದ ಒಂದು ಅಪಾಯಾಂಶ ಅಲ್ಲದಿದ್ದರೂ ಔರಾ (ಲಕ್ವಾಕ್ಕೆ ಮುನ್ನ ದೃಷ್ಟಿಯಲ್ಲಿ ಸಮಸ್ಯೆ, ಜೋಮು, ನಿಶ್ಶಕ್ತಿ ಅಥವಾ ಮಾತಿನಲ್ಲಿ ತೊಂದರೆ) ಉಂಟಾಗುವುದು ಇಶೆಮಿಕ್‌ ಲಕ್ವಾದ ಅಪಾಯವನ್ನು ಇಮ್ಮಡಿಗೊಳಿಸುವುದಕ್ಕೆ ಸಂಬಂಧಿಸಿದೆ. ಇದಕ್ಕೆ ಚಿಕಿತ್ಸೆ ಒದಗಿಸುವಲ್ಲಿ ಮೈಗ್ರೇನ್‌ ಉಂಟಾಗುವ ಸಂದರ್ಭಗಳನ್ನು ಕಡಿಮೆಗೊಳಿಸುವುದು ಸೂಕ್ತವಾಗಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಬೊಜ್ಜು ಸ್ವಲ್ಪ ಮಟ್ಟಿಗೆ ಹೆಚ್ಚು. ಬೊಜ್ಜು ಎಂಬುದು ಥ್ರೊಂಬೋಟಿಕ್‌ಪೂರ್ವ ಮತ್ತು ಉರಿಯೂತಪೂರ್ವ ಸ್ಥಿತಿಯಾಗಿದ್ದು, ಲಕ್ವಾದ ಅಪಾಯವನ್ನು ಹೆಚ್ಚಿಸಬಹುದಾಗಿದೆ. ಚಯಾಪಚಯ ಕ್ರಿಯೆಗೆ ಸಂಬಂಧಪಟ್ಟ ಅನಾರೋಗ್ಯಗಳು (ಇನ್ಸುಲಿನ್‌ ಪ್ರತಿರೋಧ, ಹೊಟ್ಟೆಯಲ್ಲಿ ಬೊಜ್ಜು, ಡಿಸ್‌ಲಿಪಿಡೇಮಿಯಾ ಮತ್ತು ಅಧಿಕ ರಕ್ತದೊತ್ತಡಗಳು ಜತೆಯಾಗಿ ಇರುವುದು) ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಲಕ್ವಾದ ಅಪಾಯ ಹೆಚ್ಚಲು ಕಾರಣವಾಗುತ್ತವೆ. ಮಹಿಳೆಯರಲ್ಲಿ ಫೈಬ್ರಿಲೇಶನ್‌ (ಹೃದಯದ ಬಡಿತ ಅನಿಯಮಿತವಾಗಿರುವ ಸ್ಥಿತಿ) ಉಂಟಾಗುವ ಸಾಧ್ಯತೆಯೂ ಹೆಚ್ಚು.

Advertisement

-ಮುಂದಿನ ವಾರಕ್ಕೆ

-ಡಾ| ರೋಹಿತ್‌ ಪೈ
ಕನ್ಸಲ್ಟಂಟ್‌ ನ್ಯುರಾಲಜಿ,
ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next