ಗುಡಿಬಂಡೆ: ತಾಲೂಕಿನ 15 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿದ್ದರೂ ಶಿಕ್ಷಕರು ಇಲ್ಲದೇ ಇರುವುದರಿಂದ ಮುಚ್ಚುವ ಸ್ಥಿತಿಗೆ ಬಂದಿದ್ದು, ಕೂಡಲೇ ಶಿಕ್ಷಕರ ನೇಮಿಸಬೇಕಿದೆ.
ತಾಲೂಕಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು 66, ಹಿರಿಯ ಪ್ರಾಥಮಿಕ ಶಾಲೆಗಳು 29, ಪ್ರೌಢ ಶಾಲೆಗಳು ಅನುದಾನಿತ, ವಸತಿ ಶಾಲೆಗಳು ಒಳಪಟ್ಟು 15 ಶಾಲೆಗಳಿದ್ದು, ಈ ಶಾಲೆಗಳಲ್ಲಿ ಶಯಕ್ಷಣಿಕ ಕ್ಷೇತ್ರದಲ್ಲೂ ಹಿಂದುಳಿದಿರುವ ತಾಲೂಕಾಗಿರುವ ಗುಡಿಬಂಡೆಯ ಬಡವರ, ಕೂಲಿ ಕಾರ್ಮಿಕರ, ರೈತರ ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ ಒಟ್ಟು 15 ಕಿರಿಯ ಪ್ರಾಥಮಿಕ ಶಾಲೆಗಳು ಶಿಕ್ಷಕರು ಇಲ್ಲದೇ ಮುಚ್ಚುವ ಸ್ಥಿತಿಗೆ ತಲುಪಿದ್ದು, ಆ ಶಾಲೆಯ ಗ್ರಾಮಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಶಾಲೆಗಳ ಮೊರೆ ಹೋಗುವತ್ತ ಯೋಚಿಸುತ್ತಿದ್ದಾರೆ.
15 ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ: ತಾಲೂಕಿನ ರಾಮಗಾನಹಳ್ಳಿ, ತಟ್ಟಹಳ್ಳಿ, ಬೊಮ್ಮನಹಳ್ಳಿ, ಯಲಕಲರಾಳ್ಳಹಳ್ಳಿ, ಚದರ‌್ಲಹಳ್ಳಿ, ದಿನ್ನಮೇಲಿನಹಳ್ಳಿ, ತಿಮ್ಮೇನಹಳ್ಳಿ, ಪುರದಹಳ್ಳಿ, ಬುಳ್ಳಸಂದ್ರ, ಗರುಡಾಚಾರ‌್ಲಹಳ್ಳಿ, ಬುಳ್ಳಸಂದ್ರ, ನರಸಾಪುರ, ಜಂಬಿಗೆಮರದಹಳ್ಳಿ, ಮೇಡಿಮಾಕಲಹಳ್ಳಿ, ಕೊಂಡಾವಲಹಳ್ಳಿ ಗ್ರಾಮಗಳ ಒಟ್ಟು 15 ಶಾಲೆಗಳಿಗೆ ಸುಮಾರು ವರ್ಷಗಳಿಂದ ಖಾಯಂ ಶಿಕ್ಷಕರ ಇಲ್ಲದಿರುವುದರಿಂದ ಬೇರೆ ಶಾಲೆಗಳಿಂದ ಶಿಕ್ಷಕರನ್ನು ಈ ಶಾಲೆಗಳಿಗೆ ನಿಯೋಜನೆ ಮಾಡಿದೆ. ಅವರು ಖಾಯಂ ಜಾಗದಲ್ಲೂ ಹಾಗೂ ಇಲ್ಲೂ ಕೆಲಸ ಮಾಡಬೇಕಾದ ಕಾರಣ ಅತಿಥಿ ಶಿಕ್ಷಕರೇ ಈ ಮಕ್ಕಳಿಗೆ ಖಾಯಂ ಶಿಕ್ಷಕರಂತೆ ಕೆಲಸ ಮಾಡುವಂತಹ ಪರಿಸ್ಥಿತಿ ಈ ಶಾಲೆಗಳಲ್ಲಿ ನಿರ್ಮಾಣವಾಗಿದೆ. ಈ ಶಾಲೆಗಳಲ್ಲಿ ಕೆಲವು ಶಾಲೆಗಳು ಸುಮಾರು ವರ್ಷಗಳಿಂದ ಮುಚ್ಚಿದ್ದು, ಈಗ ಪುನಃ ಗ್ರಾಮಸ್ಥರ ಒತ್ತಾಯದ ಮೇರೆಗೆ ಶಾಲೆ ಬಾಗಿಲು ತೆರೆದು ಮಕ್ಕಳು ಬಂದರೂ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ.
ಅತಿಥಿ ಶಿಕ್ಷಕರಿಂದ ಶಾಲೆ: ತಾಲೂಕಿನ 15 ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರು ಇಲ್ಲದೇ ಇರುವುದರಿಂದ ಈ ಶಾಲೆಗಳಿಗೆ ಖಾಯಂ ಶಿಕ್ಷಕರನ್ನು ವಾರಕ್ಕೆ ಒಂದೆರಡು ದಿನ ಮಾತ್ರ ಕೆಲಸ ನಿರ್ವಹಿಸುವಂತೆ ನಿಯೋಜನೆ ಮಾಡುವುದರಿಂದ, ಶಾಲೆಯ ನಿರ್ವಹಣೆ, ಅಡುಗೆ ಕೆಲಸ, ಮಕ್ಕಳಿಗೆ ಪಾಠ ಎಲ್ಲಾ ಕೆಲಸವನ್ನು ಸಹ ಅತಿಥಿ ಶಿಕ್ಷಕರೇ ನಿರ್ವಹಿಸುತ್ತಿದ್ದು, ಅವರಿಗೂ ಸಹ ಎಲ್ಲಾ ಕೆಲಸ ನಿಭಾಯಿಸುವುದರಿಂದ ಒತ್ತಡ ಜಾಸ್ತಿಯಾಗುತ್ತಿದೆ.
ಶಾಲಾ ದಾಖಲೆ ಬೇಕಾದರೆ ಅಲೆಯಬೇಕು: ಖಾಯಂ ಶಿಕ್ಷಕರು ಇಲ್ಲದ ತಾಲೂಕಿನ 15 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳಿಗೆ ವರ್ಗಾವಣೆ ಪತ್ರ, ಅಂಕಪಟ್ಟಿ, ವ್ಯಾಸಾಂಗ ಪ್ರಮಾಣ ಪತ್ರ ಸೇರಿದಂತೆ ಸಂಬಂಧಪಟ್ಟ ಯಾವುದೇ ಶಾಲಾ ದಾಖಾಲಾತಿ ಬೇಕಾದರೂ ಇಲ್ಲಿಗೆ ನಿಯೋಜನೆಗೊಂಡ ಶಿಕ್ಷಕರು ಬರುವವರೆಗೂ ಇಲ್ಲಿ ಕಾಯಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರು ಮಕ್ಕಳನ್ನು ಈ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಗುಡಿಬಂಡೆ ತಾಲೂಕಿನಲ್ಲಿ 15 ಪ್ರಾಥಮಿಕ ಕಿರಿಯ ಶಾಲೆಗಳಿಗೆ ಖಾಯಂ ಶಿಕ್ಷಕರು ಇಲ್ಲದಿದ್ದು, ಈ ಶಾಲೆಗಳಿಗೆ ಖಾಯಂ ಶಿಕ್ಷಕರನ್ನು ನೇಮಿಸಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಮುಂದಾಗಬೇಕು.
●ವೈ.ಮಧು, ಪಿಎಸ್‌ಎಸ್ ಮುಖಂಡ,ಹಳೇ ಯರ್ರಹಳ್ಳಿ
ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಹತ್ತಿರದ ಶಾಲೆಗಳಿಂದ ಶಿಕ್ಷಕರನ್ನು ನಿಯೋಜನೆ ಮಾಡಿದ್ದು, ಪ್ರತಿ ನಿತ್ಯವು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.
●ಮುನೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗುಡಿಬಂಡೆ ತಾ.