ಯಡ್ರಾಮಿ: ಯಡ್ರಾಮಿ ನೂತನ ತಾಲೂಕಾಗಿ ಮೂರು ವರ್ಷ ಕಳೆದರೂ ತಾಲೂಕು ಕೇಂದ್ರ ಎನಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ ಇರುವ ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ತಹಶೀಲ್ದಾರ್ ಕಾರ್ಯಾಲಯಗಳನ್ನು ಬಿಟ್ಟರೆ ಮತ್ಯಾವ ಕಚೇರಿಗಳ ಸೇವಾ ಭಾಗ್ಯವೂ ಜನತೆಗೆ ಸಿಗದಂತಾಗಿದೆ.
ಜೇವರ್ಗಿಗೆ ಇನ್ನೂ ಅಲೆಯುವುದು ತಪ್ಪುತ್ತಿಲ್ಲ. ತಹಶೀಲ್ದಾರ್ ಕಚೇರಿಗೆ ಮಂಜೂರಾದ ಒಟ್ಟು 71 ಹುದ್ದೆಗಳಲ್ಲಿ 56 ಹುದ್ದೆಗಳು ಭರ್ತಿಯಾಗಿದ್ದು, 15 ಹುದ್ದೆಗಳು ಖಾಲಿ ಉಳಿದಿವೆ. ಕೆಲಸ ನಿರ್ವಹಿಸುತ್ತಿರುವವರಲ್ಲಿಯೇ ಆರು ಜನ ನಿಯೋಜನೆ ಮೇರೆಗೆ ಬೇರೆ ತಾಲೂಕು, ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಯೋಜನೆ ಮೇರೆಗೆ ಬೇರೆಡೆ ಹೋದವರಿಗೆ ವೇತನ ಮಾತ್ರ ಇಲ್ಲಿನ ತಹಶೀಲ್ ಕಚೇರಿಯೇ ಪಾವತಿಸಬೇಕಾಗಿದೆ. ನಿಯೋಜನೆ ಮೇರೆಗೆ ಹೋದ ಆರು ನೌಕರರಲ್ಲಿ ಸಿಪಾಯಿ ಯಡ್ರಾಮಿ ತಹಶೀಲ್ದಾರ್ ಕಚೇರಿಗೆ ನೇಮಕವಾಗಿ ಸದ್ಯ ಯಾದಗಿರಿ ಜಿಲ್ಲೆಯ ನೂತನ ತಾಲೂಕು ಹುಣಸಗಿ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆಂದು ತಹಶೀಲ್ದಾರರು ತಿಳಿಸಿದ್ದಾರೆ.
ನಿಯೋಜನೆ ಮೇಲೆ ಹೋದ ಸಿಪಾಯಿ ನೌಕರನ ನಿಯೋಜನೆಯನ್ನು ರದ್ದು ಮಾಡಿ ಮೂಲ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರಾದೇಶಿಕ ಆಯುಕ್ತರ ಆದೇಶವೂ ಆಗಿದೆ. ಆದೇಶವಾಗಿ ಐದಾರು ತಿಂಗಳು ಕಳೆದರೂ ಮೂಲ ಸ್ಥಳಕ್ಕೆ ಹಾಜರಾಗಿಲ್ಲ. ಇಲ್ಲಿ ಸಿಪಾಯಿ ಇರದ ಕಾರಣ ಕಾರ್ಯಾಲಯ ದಲ್ಲಿನ ಮೇಜು, ಕುರ್ಚಿಗಳನ್ನು ಇಲ್ಲಿನ ಸಿಬ್ಬಂದಿಯೇ ಸ್ವಚ್ಛ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕಾದ ದುಸ್ಥಿತಿ ಇದೆ. ಕಚೇರಿಯ ಕೋಣೆಗಳು ಧೂಳಿನಿಂದ ತುಂಬಿವೆ. ಕೂಡಲೇ ನಿಯೋಜನೆ ಮೇರೆಗೆ ಹೋದ ನೌಕರರನ್ನು ಮೂಲ ಸ್ಥಳಕ್ಕೆ ಕರೆ ತರುವ ನಿಟ್ಟಿನಲ್ಲಿ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದೆ.
ಸಿಪಾಯಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರನ ನಿಯೋಜನೆ, ಆರ್‌ಸಿ ಅವರಿಂದ ರದ್ದತಿ ಆದೇಶ ಆಗಿದೆ. ನಾನು ಅಲ್ಲಿನ ತಹಶೀಲ್ದಾರ್ ಜತೆ ಮಾತನಾಡಿದ್ದೇನೆ. ಆದರೆ ಇಲ್ಲಿಯವರೆಗೆ ಸಿಪಾಯಿಯನ್ನು ಹುಣಸಗಿ ಕಾರ್ಯಾಲಯ ಏಕೆ ಬಿಡುಗಡೆಗೊಳಿಸಿಲ್ಲ ಎಂಬುದರ ಬಗ್ಗೆ ನನಗೆ ಗೊತ್ತಾಗ್ತಿಲ್ಲ.
–ಶಾಂತಗೌಡ ಬಿರಾದಾರ, ತಹಶೀಲ್ದಾರ್, ಯಡ್ರಾಮಿ
ನಮ್ಮ ಕಾರ್ಯಾಲಯದಲ್ಲಿ ನಿಯೋಜನೆ ಮೇರೆಗೆ ಶಿವರಾಜ ಎನ್ನುವ ಸಿಪಾಯಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ನಾನು ಇಲ್ಲಿ ಕರ್ತವ್ಯಕ್ಕೆ ಬಂದು ಎರಡ್ಮೂರು ತಿಂಗಳಷ್ಟೆ ಆಗಿದೆ. ಆದರೆ ನಿಯೋಜನೆ ರದ್ದತಿ ಆಗಿದ್ದರ ಕುರಿತು ನನಗೆ ಮಾಹಿತಿ ಇಲ್ಲ.
–ಅಶೋಕ ಕುಮಾರ, ತಹಶೀಲ್ದಾರ್, ಹುಣಸಗಿ
-ಸಂತೋಷ ಬಿ.ನವಲಗುಂದ