Advertisement
ಸೋಮವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 98ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದ ಅವರು, ಇವತ್ತಿನ ಸಮಾಜ ಧರ್ಮ, ಜಾತಿ, ಶ್ರೀಮಂತಿಕೆ ಮತ್ತು ಬಡತನವೆಂಬ ದ್ವಂದ್ವಗಳಲ್ಲಿ ಸಿಲುಕಿಕೊಂಡಿದೆ. ಈ ರಾಷ್ಟ್ರದ ಭಾವಿ ರಕ್ಷಕರು ನೀವೆ. ಹಾಗಾಗಿ ರಾಷ್ಟ್ರದ ಸೂತ್ರ ಹಿಡಿಯಲು ನೀವೆಲ್ಲ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕಾಗಿದೆ. ಆ ಕಾರಣದಿಂದಲೇ ಮೌಲ್ಯಾಧಾರಿತ ನಾಗರಿಕರಾಗಲು ನೀವು ತರಬೇತಿ ಪಡೆಯಬೇಕು ಎಂದು ಹೇಳಿದರು.
Related Articles
Advertisement
ದೇಶದಲ್ಲಿ ಭ್ರಷ್ಟಾಚಾರ ಈ ಪ್ರಮಾಣದಲ್ಲಿ ಬೆಳೆಯಲು ಭ್ರಷ್ಟಾಚಾರದ ಬಗ್ಗೆ ಸಮಾಜ ಹೊಂದಿರುವ ಧೋರಣೆಯೇ ಕಾರಣ. ಈವತ್ತಿನ ಸಮಾಜಕ್ಕೆ ನ್ಯಾಯಯುತವಾದ ಸಂಪತ್ತು ಯಾವುದು, ಅನ್ಯಾಯದ ದ್ರವ್ಯ ಯಾವುದು ಎಂಬ ವಿವೇಚನೆಯೇ ಇಲ್ಲದಂತಾಗಿದೆ. ಸಿರಿವಂತಿಕೆಯೆಂಬುದು ಯಶಸ್ಸಿನ ದ್ಯೋತಕ ಎಂದು ಈವತ್ತಿನ ಸಮಾಜ ಪುರಸ್ಕರಿಸುತ್ತದೆ. ಸಿರಿವಂತಿಕೆ ಪ್ರಾಪ್ತವಾದದ್ದು ಹೇಗೆ ಎಂಬುದರ ಬಗ್ಗೆ ಅದು ತಲೆಕೆಡಿಸಿಕೊಳ್ಳುವುದಿಲ್ಲ.
ಶ್ರಮದಿಂದ ದುಡಿದು ನ್ಯಾಯಯುತವಾಗಿ ಶ್ರೀಮಂತರಾದವರೂ ಒಂದೇ, ಅಡ್ಡದಾರಿ ಹಿಡಿದು ಹಣ ಸಂಪಾದಿಸಿದವರೂ ಒಂದೇ. ಈ ರೀತಿ ಸಮಾಜದಲ್ಲಿ ವಿವೇಚನೆ ಗೈರು ಹಾಜರಾಗಿರುವುದರಿಂದ ಜನರು ಹೆಚ್ಚು ಹೆಚ್ಚು ಭ್ರಷ್ಟಾಚಾರದ ಕಡೆ ವಾಲುತ್ತಿದ್ದಾರೆ, ಏಕೆಂದರೆ ಸಮಾಜದಲ್ಲಿ ಯಾರೊಬ್ಬರೂ ಭ್ರಷ್ಟಾಚಾರ ಒಂದು ಕೇಡು ಎಂದು ಬಗೆಯುವುದೇ ಇಲ್ಲ. ಎಲ್ಲಿಯವರೆಗೆ ಸಮಾಜ ನ್ಯಾಯಯುತ ಸಂಪತ್ತು ಮತ್ತು ನ್ಯಾಯಬಾಹಿರ ಸಂಪತ್ತಿನ ನಡುವಿನ ವ್ಯತ್ಯಾಸವನ್ನು ಗುರುತಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಭ್ರಷ್ಟಾಚಾರದ ವಿರುದ್ಧದ ನಮ್ಮ ಸಮಯದಲ್ಲಿ ಜಯಶಾಲಿಗಳಾಗುವುದಿಲ್ಲ ಎಂದರು.
ಈ ಎಲ್ಲ ಕೇಡುಗಳನ್ನು ಸದೆಬಡಿಯಬೇಕಾದರೆ ನೀವು ಮೌಲ್ಯಾಧಾರಿತ ಸಮಾಜವನ್ನು ನಿರ್ಮಾಣಮಾಡಬೇಕು. ನಮ್ಮ ಹಿರೀಕರು ಹೋರಾಡಿದ ಮೌಲ್ಯಗಳಿಗಾಗಿ ನಾವು ಹೋರಾಡಬೇಕು. ನಮ್ಮ ಸಂವಿಧಾನದಲ್ಲಿ ಕೊಡಮಾಡಿರುವಂಥ ಮೌಲ್ಯಗಳವು. ಭಾರತದ ಸಂವಿಧಾನ ಕೇವಲ ಹಕ್ಕುಗಳ ಮಸೂದೆಯಲ್ಲ. ಅದೊಂದು ಪವಿತ್ರವಾದ ದಸ್ತಾವೇಜು. ಯಾವುದೇ ಧರ್ಮಗ್ರಂಥದಷ್ಟೇ ಪವಿತ್ರ ಅದು ಎಂದರು.
ಸಂಪತ್ತಿನ ಮೂಲ ಅರಿಯುವಲ್ಲಿ ವಿಫಲ: ಪ್ರಸ್ತುತ ಪೀಳಿಗೆ, ನನ್ನ ತಲೆಮಾರಿನಂತೆಯೇ, ಸಂಪತ್ತಿನ ಮೂಲವನ್ನು ಅರಿಯುವ ಗೊಡವೆಗೇ ಹೋಗದೆ ದ್ರವ್ಯವನ್ನು ಆರಾಧಿಸುತ್ತಿದೆ. ಹಾಗಾಗಿಯೇ ಯಾವ ಮಾರ್ಗದಿಂದಲಾದರೂ ಧನ ಸಂಗ್ರಹಿಸಬೇಕೆಂದು ಮುಗಿಬೀಳುತ್ತಿದೆ. ಹಾಗಾಗಿ, ಪ್ರಾಮಾಣಿಕ ರಾಷ್ಟ್ರಗಳ ಪೈಕಿ ಭಾರತದ ಸ್ಥಾನ ಚಿಂತಾಜನಕ ಸ್ಥಿತಿಯಲ್ಲಿದೆ. ನಮ್ಮ ಅಭಿವೃದ್ಧಿಯೆಲ್ಲ ಜನಸಂಖ್ಯೆಯ ಪ್ರಮಾಣದಲ್ಲಿ ಭ್ರಷ್ಟಾಚಾರದ ಅಗಾಧತೆಯಲ್ಲಿ ಕಣ್ಮರೆಯಾಗಿದೆ.
ಕಡಿಮೆ ಜನಸಂಖ್ಯೆಯಿದ್ದು, ಕಡಿಮೆ ಭ್ರಷ್ಟಾಚಾರವಿದ್ದಿದ್ದರೆ ಬಡತನ ಕಡಿಮೆ ಇರುತ್ತಿತ್ತು. ಭಾರತೀಯರ ಕಣ್ಣೀರಿನ ಪ್ರಮಾಣವೂ ಕಡಿಮೆ ಇರುತ್ತಿತ್ತು ಎಂದು ಹೇಳಿದರು. ಇಂಥ ತಾರತಮ್ಯವುಳ್ಳ ಸಮಾಜದ ಅಸಮಾನತೆಗಳನ್ನು ತೊಡದುಹಾಕಿ, ಹಸಿವು ಮತ್ತು ಕಣ್ಣೀರನ್ನು ಹೋಗಲಾಡಿಸುವ ದಿಸೆಯಲ್ಲಿ ನೀವು ಕಂಕಣಬದ್ಧರಾಗಬೇಕಿದೆ ಎಂದು ಕಿವಿಮಾತು ಹೇಳಿದರು. ಪ್ರಭಾರ ಕುಲಪತಿ ಪೊ›. ಸಿ.ಬಸವರಾಜು, ಕುಲಸಚಿವರುಗಳಾದ ಡಿ.ಭಾರತಿ, ಪೊ›.ಜಿ.ಸೋಮಶೇಖರ್ ಉಪಸ್ಥಿತರಿದ್ದರು.
ಕುಲಾಧಿಪತಿ ಗೈರು: ಮೈಸೂರು ವಿಶ್ವವಿದ್ಯಾನಿಲಯದ 98ನೇ ವಾರ್ಷಿಕ ಘಟಿಕೋತ್ಸವಕ್ಕೆ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳಾದ ರಾಜ್ಯಪಾಲ ವಜುಭಾಯ್ ವಾಲಾ, ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಗೈರು ಹಾಜರಾಗಿದ್ದರು. ಜತೆಗೆ ಈ ಬಾರಿ ಯಾರೊಬ್ಬರಿಗೂ ಗೌರವ ಡಾಕ್ಟರೇಟ್ ನೀಡಲಾಗಲಿಲ್ಲ.
ಮಹಿಳೆಯರದ್ದೇ ಮೇಲುಗೈ: 98ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪಡೆದವರಲ್ಲಿ ಮಹಿಳೆಯರದ್ದೇ ಮೇಲುಗೈ. 27502 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಯಿತು. ಈ ಪೈಕಿ 17122 ಮಹಿಳೆಯರು ಮತ್ತು 10380 ಪುರುಷರು ಪದವಿ ಪಡೆದರು.
263 ಮಹಿಳೆಯರು ಮತ್ತು 312 ಪುರುಷರು ಸೇರಿದಂತೆ 575 ಅಭ್ಯರ್ಥಿಗಳಿಗೆ ಪಿಎಚ್.ಡಿ, 207 ಅಭ್ಯರ್ಥಿಗಳಿಗೆ 348 ಪದಕಗಳು ಮತ್ತು 168 ಬಹುಮಾನಗಳು, 7576 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 19361 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಯಿತು. ಇವರಲ್ಲೂ ಕ್ರಮವಾಗಿ 4213 ಹಾಗೂ 12646 ಮಹಿಳೆಯರಿದ್ದಾರೆ.