ಸವದತ್ತಿ: ಮುಂಗಾರು ಹಂಗಾಮು ಆರಂಭಗೊಂಡಿದ್ದು, ರೈತಾಪಿ ವರ್ಗ ಬಿತ್ತನೆ ಕಾರ್ಯಕ್ಕೆ ಮುಂದಾಗಿದೆ. ಆದರೆ ಕೃಷಿ ಇಲಾಖೆಯಿಂದ ಸಮರ್ಪಕ ಬೀಜ, ರಸಗೊಬ್ಬರ ಪೂರೈಕೆಯಿಲ್ಲದ್ದರಿಂದ ನಿತ್ಯವೂ ಅಲೆಯುವ ಸ್ಥಿತಿ ಎದುರಾಗಿದೆ.
ತಾಲೂಕಿನಲ್ಲಿ 4ರೈತ ಸಂಪರ್ಕ ಕೇಂದ್ರ, ಪಿಕೆಪಿಎಸ್ ಸೇರಿ ಒಟ್ಟು 15 ವಿತರಣಾ ಕೇಂದ್ರಗಳಿವೆ. ಆದರೆ ಆರ್‌ಎಸ್‌ಕೆ ಸೇರಿ ಪಿಕೆಪಿಎಸ್‌ಗಳಲ್ಲಿ ಬಿತ್ತನೆಗೆ ಪೂರಕವಾಗುವ ಡಿಎಪಿ, 10:26, 12:32:16, ಯೂರಿಯಾ, ಪೊಟ್ಯಾಷ್ ಗೊಬ್ಬರಗಳಿಲ್ಲದೇ ರೈತ ಕಂಗಾಲಾಗಿದ್ದಾರೆ.
ಬಿತ್ತನೆಗಾಗಿ ರೈತ ಭೂಮಿ ಹದ ಮಾಡಿ ಕುಳಿತಿದ್ದು, ಗೊಬ್ಬರದ ಕೊರತೆಯಿಂದ ವಿಧಿಯಿಲ್ಲದೇ ಬೇರೆ ತಾಲೂಕು, ಜಿಲ್ಲೆಗಳ ಮೊರೆ ಹೋಗುವಂತಾಗಿದೆ. ಕೆಲ ದಿನಗಳಿಂದ ಆಧಾರ್ ಕಾರ್ಡ್ ಹೊಂದಿದ ರೈತರಿಗೆ 3 ಮೂಟೆ ಗೊಬ್ಬರ ಲಭಿಸುತ್ತಿದೆ. ಇನ್ನು ಹೆಚ್ಚು ಅವಶ್ಯವಿದ್ದಲ್ಲಿ ಗೊಬ್ಬರ ಇಲ್ಲವೆಂದು ಕೇಂದ್ರಗಳ ಸಿಬ್ಬಂದಿ ಮರಳಿ ಕಳಿಸುತ್ತಿದ್ದಾರೆ. 1ಎಕರೆ ರೈತನಿಗೂ ಅಷ್ಟೇ, 10 ಎಕರೆ ರೈತರಿಗೂ ಅಷ್ಟೇ ಗೊಬ್ಬರ ನೀಡಲಾಗುತ್ತಿದೆ.
ಪ್ರತಿ ಎಕರೆಗೆ 1 ಪ್ಯಾಕೆಟ್‌ನಂತೆ ಬೀಜ ವಿತರಣೆ ನಡೆದಿದೆ. ಬಯೋಮೆಟ್ರಿಕ್ ವಿದ್ಯುನ್ಮಾನ ಮೂಲಕ ಬೆರಳಚ್ಚು ಪಡೆದು ಗೊಬ್ಬರ ಪೂರೈಕೆಯಿಂದ ಹೊಲದ ಮಾಲೀಕನೇ ವಿತರಣಾ ಕೇಂದ್ರಕ್ಕೆ ಅಲೆಯುವ ಸ್ಥಿತಿಯಿದೆ. 3 ಮೂಟೆ ಜತೆ 250-500 ರೂ.ವರೆಗಿನ ಟಾನಿಕ್ ಖರೀದಿ ಕಡ್ಡಾಯವೆಂದು ಒತ್ತಾಯಿಸುತ್ತಿದ್ದಾರೆ. ಟಾನಿಕ್ ಖರೀದಿಸದಿದ್ದಲ್ಲಿ ಗೊಬ್ಬರವೂ ಇಲ್ಲವೆಂದು ಸಿಬ್ಬಂದಿ ಹೇಳುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ. ಹೆಸರು, ಹತ್ತಿ, ಗೋವಿನಜೋಳ ಸೇರಿ ಎಲ್ಲ ಬೀಜಗಳು ಸಮರ್ಪಕವಿದೆ. ಆದರೆ ಪೂರಕ ಗೊಬ್ಬರ ಇಲ್ಲದಾಗಿದೆ. ಗೊಬ್ಬರ ರಶೀದಿಯೊಡನೆ ಬೇರೊಂದು ರಶೀದಿ ನೀಡಿ ಸಾಗಾಟ ವೆಚ್ಚವೆಂದು ಹೆಚ್ಚುವರಿ ಹಣ ಪಡೆಯುತ್ತಿದ್ದಾರೆಂಬ ಆರೋಪವೂ ರೈತಾಪಿ ವರ್ಗದಲ್ಲಿ ಕೇಳಿ ಬರುತ್ತಿದೆ.
ಬೀಜೋಪಚಾರದ ಮೂಲಕ ರೈತರಿಗೆ ಮಾಹಿತಿ ನೀಡಿದೆ. ಸೋಯಾಬಿನ್, ಸೂರ್ಯಕಾಂತಿ, ಮೆಕ್ಕೆಜೋಳ, ಉದ್ದು ಸೇರಿ ಕಳೆದ ಬಾರಿ 2300 ಕ್ವಿಂಟಲ್ ಬೀಜ ಪೂರೈಸಲಾಗಿದೆ. ಈ ಬಾರಿ 2500 ಕ್ವಿಂಟಲ್ ದಾಸ್ತಾನಿದೆ. ತಾಲೂಕಿನಾದ್ಯಂತ ಗೊಬ್ಬರದ ಕೊರತೆ ಇದೆ. ಪಿಕೆಪಿಎಸ್ 90 ಮಳಿಗೆಗಳ ಬೇಡಿಕೆ ಕುರಿತು ಮೇಲಾಧಿ ಕಾರಿಗಳಿಗೆ ತಿಳಿಸಲಾಗಿದೆ. ಸಮರ್ಪಕ ಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. –
ಎಸ್.ವಿ. ಪಾಟೀಲ, ಕೃಷಿ ಸಹಾಯಕ ನಿರ್ದೇಶಕರು, ಸವದತ್ತಿ
-ಡಿ.ಎಸ್. ಕೊಪ್ಪದ