ಗದಗ: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ತರಕಾರಿ ಮಾರುಕಟ್ಟೆ ಸಂಪೂರ್ಣ ಸ್ಥಗಿತಗೊಂಡಿದೆ. ದಿನ ಬಿಟ್ಟು ದಿನ ಸಗಟು ತರಕಾರಿ ವ್ಯಾಪಾರವನ್ನೂ ನಿರ್ಬಂಧಿಸಿದ್ದು, ಎರಡು ದಿನಕ್ಕೊಮ್ಮೆ ಸಗಟು ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಇದು ರೈತರುಹಾಗೂ ಗ್ರಾಹಕರಿಗೆ ಸಮಸ್ಯೆಯಾಗಿದ್ದು, ನಗರದ ಹೃದಯ ಭಾಗದ ವಕಾರ ಸಾಲು ಬಯಲಿನಲ್ಲಿ ಸಾಮಾಜಿಕ ಅಂತರ ಪಾಲನೆ ವ್ಯವಸ್ಥೆಯೊಂದಿಗೆ ತರಕಾರಿ ಮಾರಾಟಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿವೆ.
ಕೋವಿಡ್ ಲಾಕ್‌ಡೌನ್ ಜಾರಿ ಆಗುತ್ತಿದ್ದಂತೆ ಜಿಲ್ಲಾಡಳಿತ ಗ್ರೇನ್ ಮಾರುಕಟ್ಟೆ, ದತ್ತಾತ್ರೇಯ ರಸ್ತೆಯಲ್ಲಿ ತರಕಾರಿ ವ್ಯಾಪಾರ ನಿರ್ಬಂಧಿಸಿತು. ತಳ್ಳುಗಾಡಿ, ಟಂಟಂ ರಿಕ್ಷಾ ಇಲ್ಲವೇ ಬುಟ್ಟಿಯಲ್ಲಿ ಹೊತ್ತುಕೊಂಡು ಮನೆಗಳ ಬಾಗಿಲಿಗೆ ತರಕಾರಿ ಮಾರಾಟಕ್ಕೆ ಅವಕಾಶ ನೀಡಿತ್ತು. ತಳ್ಳುಗಾಡಿ, ಸರಕು ಸಾಗಾಣಿಕೆ ವಾಹನಗಳನ್ನು ಹೊಂದಿದ್ದವರು ಹಾಗೂ ದೈಹಿಕವಾಗಿ ಸದೃಢರಾದವರು ಮಾತ್ರ ಬೀದಿ ಬೀದಿ ಸುತ್ತಿ ತರಕಾರಿ ಮಾರುತ್ತಿದ್ದಾರೆ. ಇನ್ನುಳಿದಂತೆ ಶೇ.50ರಷ್ಟು ವ್ಯಾಪಾರಸ್ಥರು ತರಕಾರಿ ಮಾರಾಟದಿಂದ ದೂರ ಉಳಿದಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರಾಹಕರ ಜೇಬಿಗೆ ಕತ್ತರಿ: ಪ್ರತಿನಿತ್ಯ ಮಾರುಕಟ್ಟೆ ಇಲ್ಲದೇ ತರಕಾರಿ ಬೆಳೆದ ರೈತರಿಗೂ ಹಾನಿಯಾಗುತ್ತಿದೆ. ಮತ್ತೂಂದೆಡೆ ಬೀದಿ ಬೀದಿ ಸುತ್ತುವ ವ್ಯಾಪಾರಸ್ಥರು ಪ್ರತಿ ಕೆಜಿಗೆ 15ರಿಂದ 20 ರೂ. ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ. ಸಗಟು ಮಾರುಕಟ್ಟೆಯಲ್ಲಿ ಒಂದು ಪುಟ್ಟಿ (8-10 ಕೆಜಿ) ಬದನೆಕಾಯಿ, ಬೆಂಡೆಕಾಯಿ, ಹಾಗಲಕಾಯಿ, ಹೀರಿಕಾಯಿ ಮತ್ತಿತರೆ ತರಕಾರಿಗಳು ಬಹುತೇಕ 60ರಿಂದ 100 ರೂ.ಗೆ ದೊರೆಯುತ್ತವೆ. ಮನೆ ಮನೆಗೆ ಮಾರಾಟ ಮಾಡುವವರು ಪ್ರತಿ ಕೆಜಿ 40ರಿಂದ 80 ರೂ.ವರೆಗೆ ಮಾರುತ್ತಿದ್ದಾರೆ. ಇದರಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ವಕಾರ ಸಾಲು ಬಯಲು ಪ್ರಶಸ್ತ ತಾಣ: ನಗರಸಭೆ ಲೀಸ್ ಮುಗಿದ ಹಿನ್ನೆಲೆಯಲ್ಲಿ ವರ್ಷದ ಹಿಂದೆ ಇಲ್ಲಿನ ಭೂಮರಡ್ಡಿ ಸರ್ಕಲ್‌ನಿಂದ ಕೆ.ಎಚ್.ಪಾಟೀಲ ವೃತ್ತ ಹಾಗೂ ಭೂಮರಡ್ಡಿ ಸರ್ಕಲ್‌ನಿಂದ ಎಪಿಎಂಸಿ ಮೇನ್ ಗೇಟ್ ಹಾಗೂ ತೋಂಟದಾರ್ಯ ವಿದ್ಯಾಪೀಠದ ತೋಂಟದಾರ್ಯ ಮಠದ ಶಾಲೆ ವರೆಗೆ ಸುಮಾರು 34 ಎಕರೆ ಪ್ರದೇಶದಲ್ಲಿನ 54 ವಕಾರ ಸಾಲುಗಳನ್ನು ತೆರವುಗೊಳಿಸಲಾಗಿದೆ. ಇದೇ ಬಯಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ತಾತ್ಕಾಲಿಕವಾಗಿ ಪ್ರತಿನಿತ್ಯ ತರಕಾರಿ ಮಾರಾಟಕ್ಕೆ ಅವಕಾಶ ನೀಡಬೇಕು. ಗ್ರೇನ್ ಮಾರುಕಟ್ಟೆಯ ಹೋಲ್‌ಸೇಲ್-30, ಗ್ರೇನ್ ಮಾರ್ಕೆಟ್‌ನಲ್ಲಿರುವ ಚಿಲ್ಲರೆ ವ್ಯಾಪಾರಸ್ಥರು 300, ದತ್ತಾತ್ರೇಯ ರಸ್ತೆಯ 40 ಹಾಗೂ ಲಾಕ್‌ಡೌನ್ ವೇಳೆ ಕೆಲಸವಿಲ್ಲದೇ, ಹೊಸದಾಗಿ ತರಕಾರಿ ಮಾರಾಟಕ್ಕಿಳಿದವರಿಗೂ ಅವಕಾಶ ನೀಡಬಹುದಾಗಿದೆ. ಇದರಿಂದ ಪ್ರತಿನಿತ್ಯ ತರಕಾರಿ ನಗರಕ್ಕೆ ಬರಲಿದ್ದು, ರೈತರು ಮತ್ತು ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ತರಕಾರಿ ಸಗಟು ವ್ಯಾಪಾರಸ್ಥರು. ಈ ದಿಶೆಯಲ್ಲಿ ಜಿಲ್ಲಾಡಳಿತ, ನಗರಸಭೆ ಕ್ರಮ ವಹಿಸಬೇಕೆಂದು ವರ್ತಕರು ಹಾಗೂ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಜನರು ನಾಲ್ಕಾರು ಮೀಟರ್ ದೂರ ಕುಳಿತು ಮಾರಾಟ ಮಾಡುವುದು, ಗ್ರಾಹಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಲು ವಕಾರ ಸಾಲಿನ ಬಯಲು ಸೂಕ್ತ ಸ್ಥಳವಾಗಿದೆ. ಕೋವಿಡ್-19 ತುರ್ತು ಸಂದರ್ಭವಾಗಿದ್ದರಿಂದ ಜನರಿಗೆ ತರಕಾರಿ ತಲುಪಿಸಲು ತಾತ್ಕಾಲಿಕವಾಗಿ ಕುಂತು ತರಕಾರಿ ಮಾರಾಟಕ್ಕೆ ಅವಕಾಶ ನೀಡಬೇಕು. ಈ ಕುರಿತು ಈ ಹಿಂದೆಯೇ ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಿದ್ದು, ಲಾಕ್ ಡೌನ್ ಸಡಿಲಿಕೆಯಾದ ಬಳಿಕ ನೋಡೋಣ ಎಂದಿದ್ದರು.
-ಅನ್ವರ್ ಶಿರಹಟ್ಟಿ, ಪಟ್ಟಣ ವ್ಯಾಪಾರ ಸಮಿತಿ ಸದಸ್ಯ
ಇಲ್ಲಿನ ಗ್ರೇನ್ ಮಾರುಕಟ್ಟೆ ಇಕ್ಕಟ್ಟಾಗಿದ್ದರಿಂದ ಕೋವಿಡ್ ನಿಯಂತ್ರಣಕ್ಕಾಗಿ ಮಾರುಕಟ್ಟೆ ಬಂದ್ ಮಾಡಲಾಗಿದೆ. ಅದಕ್ಕೆ ಪರ್ಯಾಯವಾಗಿ ವಕಾರ ಸಾಲು ಬಯಲಿನಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು. ಸಗಟು ವ್ಯಾಪಾರ ವೇಳೆ ಸಾಮಾಜಿಕ ಅಂತರದ ನೆಪದಲ್ಲಿ ಒಮ್ಮೆ ಎಪಿಎಂಸಿ, ಮತ್ತೂಮ್ಮೆ ಹೊಸ ಬಸ್ ನಿಲ್ದಾಣ ಹಾಗೂ ಇದೀಗ ಎಪಿಎಂಸಿಗೆ ಸಗಟು ವರ್ತಕರನ್ನು ಸ್ಥಳಾಂತರಿಸಲಾಗಿದೆ. ಇದರಿಂದ ವರ್ತಕರು ಹೈರಾಣಾಗುತ್ತಿದ್ದಾರೆ. ವಕಾರ ಸಾಲು ಪ್ರದೇಶವನ್ನು ಸ್ವಚ್ಛಗೊಳಿಸಿ, ಅಲ್ಲಲ್ಲಿ ಬೀದಿ ದೀಪ ಹಾಕಿಸಿಕೊಟ್ಟರೆ ಜಿಲ್ಲಾಡಳಿತಕ್ಕೆ ಕೃತಜ್ಞರಾಗಿರುತ್ತೇವೆ. –
ಇರ್ಷಾದ್ ಎಂ. ಮಾನ್ವಿ, ಗ್ರೇನ್ ಮಾರುಕಟ್ಟೆ ಕಾರ್ಯದರ್ಶಿ
ವಕಾರ ಸಾಲು ತೆರವುಗೊಳಿಸಿದ ಬಳಿಕ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರಿಂದ ಹೈಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕವಾಗಿ ತರಕಾರಿ ಮಾರಾಟಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆ ಜನಹಿತವಾಗಿದೆ. ಈ ಕುರಿತು ಕಾನೂನಿನಲ್ಲಿ ಇರುವ ಅವಕಾಶಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಮನ್ಸೂರ್ ಅಲಿ, ಪೌರಾಯುಕ್ತರು
-ವೀರೇಂದ್ರ ನಾಗಲದಿನ್ನಿ