Advertisement

ಕೈಕೊಟ್ಟ ಮುಂಗಾರು ಮಳೆ,ಒಣಗುತ್ತಿರುವ ಬೆಳೆ; ರೈತರಲ್ಲಿ ಹೆಚ್ಚಿದ ಆತಂಕ

07:12 PM Jun 14, 2022 | Team Udayavani |

ಪಿರಿಯಾಪಟ್ಟಣ: ಪಿರಿಯಾಪಟ್ಟಣ ಒಂದು ಅರೆ ಮಲೆನಾಡಿನಿಂದ ಕೂಡಿದ ಪ್ರದೇಶ, ಇಲ್ಲಿ ಅವಧಿಗೂ ಮುನ್ನ ಮುಂಗಾರು ಪ್ರಾರಂಭವಾಗುವುದರಿಂದ ರೈತರು ಏಪ್ರಿಲ್ ಮೇ ತಿಂಗಳಿನಿಂದಲೇ ಕೃಷಿ ಚಟುವಟಿಕೆಯಲ್ಲಿ ಉತ್ಸಹದಿಂದ ಪಾಲ್ಗೊಳ್ಳುವುದು ಇಲ್ಲಿನ ವಾಡಿಕೆ.

Advertisement

ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಶುಂಠಿ, ಹೊಗೆಸೊಪ್ಪು (ತಂಬಾಕು) ಸೇರಿದಂತೆ ಇನ್ನಿತರ ಬೆಳೆಗಳನ್ನು ತಾಲೂಕಿನಾದ್ಯಂತ ಬೆಳೆಯಾಗುತ್ತಿದ್ದು, ಈ ಬಾರಿ ಮುಂಗಾರು ಮಳೆಯು ಅವಧಿಗೆ ಮುನ್ನವೇ ಪ್ರಾರಂಭವಾಗಿ ರೈತರು ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿತ್ತು. ಆದರೆ ಈ ಮಂದಹಾಸ ರೈತರ ಮುಖದಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ ಕಾರಣ ಕಳೆದ 15 ದಿನಗಳಿಂದ ತಾಲೂಕಿನಾದ್ಯಂತ ಮಳೆ ಬೀಳದೆ ಬಿತ್ತಿದ ಬೆಳೆಗಳು ಸೂರ್ಯನ ಶಾಖಕ್ಕೆ ಒಣಗಿ ಹೋಗುತ್ತಿವೆ. ಮಳೆ ಕೈಕೊಟ್ಟ ಹಿನ್ನೆಲೆ ರೈತರು ನಿರೀಕ್ಷೆಯಂತೆ ಫಸಲು ಕೈಸೇರದ ಪರಿಣಾಮ ಆತಂಕಕ್ಕೆ ಒಳಗಾಗಿದ್ದಾರೆ.

ನೀರಾವರಿ ಮೂಲಗಳನ್ನು ಹೊಂದಿರುವ ಕೆಲವು ರೈತರು ಪಂಪ್ ಸೆಟ್ ಮೂಲಕ ನೀರು ಹಾಯಿಸಲು ಮುಂದಾದರೆ ಪಂಪ್ ಸೆಟ್ ಸೌಲಭ್ಯವನ್ನು ಹೊಂದಿರದ ರೈತರು ಮಳೆ ಈಗ ಬೀಳುತ್ತೆ ನಾಳೆ ಬೀಳುತ್ತೆ ಎಂದು ಆಕಾಶ ನೋಡುತ್ತಾ  ವರುಣನ ಆಗಮನಕ್ಕಾಗಿ ದೇವರಲ್ಲಿ ಮೊರೆ ಹೋಗಿದ್ದಾರೆ.

ತಾಲೂಕಿನ ಬಹುಭಾಗದಲ್ಲಿ ಈಗಾಗಲೇ ರೈತರು ಹೊಗೆಸೊಪ್ಪು ಮುರಿಯಲಾರಂಭಿಸಿದ್ದರೆ, ಉಳಿದವರು ಸಾಲ ಮಾಡಿ ಕೈಗೊಳ್ಳಲಾಗಿರುವ ಬೆಳೆಯನ್ನು ಉಳಿಸಿಕೊಳ್ಳಲಾರದೇ ಮಳೆರಾಯನಿಗೆ ಹಿಡಿಶಾಪ ಹಾಕುತಿದ್ದಾರೆ.  ಕಸಬಾ ಹೋಬಳಿ ಸೇರಿದಂತೆ ತಾಲೂಕಿನ 25 ಸಾವಿರ ಹೆಕ್ಟೇರ್‌ನಲ್ಲಿ ಹೊಗೆಯನ್ನು ಬೆಳೆಯಲಾಗುತ್ತಿದೆ. ಆದರೆ, ಈ ಬಾರಿ ನಿರೀಕ್ಷೆಯಂತೆ ಹೊಗೆಸೊಪ್ಪನ್ನು ಮಳೆಯ ವೈಫಲ್ಯದಿಂದ ಶೇ.50ರಷ್ಟು ಪ್ರದೇಶದಲ್ಲಿ ಮಾತ್ರ ಕೈಗೊಳ್ಳಲಾಗಿದೆ. ಈ ಪೈಕಿ ಶೇ20ರಷ್ಟು ಬೆಳೆ ಮಾತ್ರ ನೀರಾವರಿಯಿಂದ ಕಟಾವಿಗೆ ಬಂದಿದೆ.

Advertisement

ರೈತರು ತಮ್ಮ ಜಮೀನಿನಲ್ಲಿ ಬೆಳೆದ ತಂಬಾಕನ್ನು ಮಂಡಳಿ ಶಿಫಾರಸ್ಸಿನಂತೆ ಮಾಡಬೇಕು. ಎಲೆಗಳನ್ನು ಬೆಳಗಿನ ವೇಳೆಯಲ್ಲಿಯೇ ಮುರಿದು ಅದೇ ದಿನ ಸಂಜೆಯೊಳಗೆ ಬ್ಯಾರೆನ್ನಲ್ಲಿ ಜೋಡಿಸಿ ಹದ ಮಾಡುವ ಕಾರ್ಯ ಪ್ರಾರಂಭಿಸಬೇಕು. ಪ್ರತಿ ಗಿಡದಲ್ಲಿ ಸರಿಯಾಗಿ ಬಲಿತ ಒಂದೆರಡು ಎಲೆಗಳನ್ನು ಮಾತ್ರ ಮುರಿದು ಹದ ಮಾಡಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಮುರಿದ ಎಲೆಗಳು ಜಾಗರೂಕತೆ ವಹಿಸಿ ಬಿಸಿಲಿನ ಬೇಗೆಗೆ ಒಡ್ಡದಂತೆ ಗೋಣಿ ತಾಟಿನಿಂದ ಮುಚ್ಚಿ ತಕ್ಷಣವೇ ಸಾಗಿಸಿ ನೆರಳಿನಲ್ಲಿ ಜೋಡಿಸಬೇಕು. ಒಂದು ಟಾರ್ಪಲಿನ್ ಮೇಲೆ ಎಲೆಗಳನ್ನು ಜೋಡಿಸಿ ಎಲೆ ತೇವಾಂಶ ಕಳೆದುಕೊಳ್ಳದಂತೆ ಜಾಗ್ರತೆ ವಹಿಸಬೇಕು ಎಂದು ಕಳೆದ ಬಾರಿ ತಂಬಾಕು ಮಂಡಳಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿ ವಾರಕ್ಕೆ ಒಮ್ಮೆ ಸಲಹೆ ಮಾಡತೊಡಗಿದ್ದರು. ಆದರೆ, ಈ ಬಾರಿ ಜೂನ್ ತಿಂಗಳು ಮುಗಿಯುವ ಹಂತಕ್ಕೆ ಬಂದಿದ್ದರೂ ಕೂಡ ಅಧಿಕಾರಿ, ಸಿಬ್ಬಂದಿ ರೈತರು ಕೈಗೊಂಡಿರುವ ತಂಬಾಕು ಬೆಳೆಯತ್ತ ಒಮ್ಮೆಯೂ ತಿರುಗಿ ನೋಡಿಲ್ಲ ಎಂದು ತಾಲೂಕಿನ ರೈತರು ಆರೋಪಿಸಿದ್ದಾರೆ.

ಕಳೆದ ಬಾರಿ ಇದೇ ಅವಧಿಯಲ್ಲಿ ಶೇ.30ರಷ್ಟು ಬೆಳೆ ಕೈಗೆ ಬಂದಿದ್ದ ಹಿನ್ನೆಲೆ ಸೊಪ್ಪು ಮುರಿದು, ಬೇಯಿಸುವ ಕಾಯಕ ಪ್ರಗತಿಯಲ್ಲಿತ್ತು. ಅದೇ ನಿರೀಕ್ಷೆಯಲ್ಲಿ ಈ ಸಾಲಿನಲ್ಲಿಯೂ ಕೂಡ ತಂಬಾಕು ಬಿತ್ತನೆ ಕೈಗೊಳ್ಳಲಾಗಿತ್ತು. ಸಕಾಲದಲ್ಲಿ ಮಳೆಯಾಗದ ಪರಿಣಾಮ ಬೆಳೆಗಾರರ ತಲೆ ಮೇಲೆ ಕೈಹೊತ್ತು, ಪ್ರತಿನಿತ್ಯ ಮೋಡವನ್ನು ನೋಡುವಂತ್ತಾಗಿದೆ. ಈಗಾಗಲೇ ಮಳೆಯಾಶ್ರಿತ ಜಮೀನಿನಲ್ಲಿ ಕೈಗೊಳ್ಳಲಾಗಿರುವ ತಂಬಾಕು ಬೆಳೆ ಮಳೆಯಿಲ್ಲದೆ ಒಣಗತೊಡಗಿದೆ. ಮುಂದಿನ ಒಂದು ವಾರದಲ್ಲಿ ಮಳೆಯಾಗದಿದ್ದರೆ ಇಡೀ ಬೆಳೆ ಬಿಸಿಲಿಗೆ ಆಹುತಿಯಾಗಿ ರೈತರು ಕಂಗಲಾಗುವ ಸಾಧ್ಯತೆ ಇದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  –ಪಿ.ಎನ್.ದೇವೇಗೌಡ, ಪಿರಿಯಾಪಟ್ಟಣ

Advertisement

Udayavani is now on Telegram. Click here to join our channel and stay updated with the latest news.

Next