Advertisement

Namma Clinic: ವೈದ್ಯರಿಲ್ಲ, ಔಷಧ ಇಲ್ಲ: ನಮ್ಮ ಕ್ಲಿನಿಕ್‌ ಸ್ಥಿತಿ ಗಂಭೀರ

11:38 AM Apr 01, 2024 | Team Udayavani |

ಬೆಂಗಳೂರು: ಕೊಳೆಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ದೊರಕಿಸಬೇಕು, ಸರ್ಕಾರಿ ಆಸ್ಪತ್ರೆಗಳ ಮೇಲಿರುವ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಸರ್ಕಾರ ನಗರದಲ್ಲಿ ನಮ್ಮ ಕ್ಲಿನಿಕ್‌​ಗಳನ್ನು ಪ್ರಾರಂಭಿಸಿತ್ತು. ಆದರೆ, ಪ್ರಸ್ತುತ ವೈದ್ಯರ ಕೊರತೆ, ವರದಿ ವಿಳಂಬ ಸೇರಿ ಇತರೆ ಸಮಸ್ಯೆಗಳಿಂದ ಜನಸಾಮಾನ್ಯರಿಗೆ ಸರಿಯಾದ ಸಮಯಕ್ಕೆ ಅಗತ್ಯ ವೈದ್ಯಕೀಯ ಆರೋಗ್ಯ ಸೇವೆ ಸಿಗದೇ ನಮ್ಮ ಕ್ಲಿನಿಕ್‌ಗಳ ಪರಿಕಲ್ಪನೆ ಹಳ್ಳ ಹಿಡಿಯುತ್ತಿದೆ.

Advertisement

ಬಿಬಿಎಂಪಿ ವ್ಯಾಪ್ತಿಯ 243 ಕಡೆಗಳಲ್ಲಿ ನಮ್ಮ ಕ್ಲಿನಿಕ್‌ ಆರಂಭಿಸಲು ಅನುಮೋದನೆ ನೀಡಲಾಗಿತ್ತು. ಅದರಲ್ಲಿ 227 ಕ್ಲಿನಿಕ್‌ ಕಾರ್ಯ ನಿರ್ವಹಿಸುತ್ತಿವೆ. ಬೊಮ್ಮನಹಳ್ಳಿ 27, ದಾಸರಹಳ್ಳಿ 10, ಪೂರ್ವ 46, ಮಹದೇವಪುರ 22, ಆರ್‌ಆರ್‌ ನಗರ 18, ದಕ್ಷಿಣ 47, ಪಶ್ಚಿಮ 46, ಯಲಂಹಕ ವಲಯದಲ್ಲಿ ಒಟ್ಟು 11 ನಮ್ಮ ಕ್ಲಿನಿಕ್‌ ಕಾರ್ಯಾಚರಣೆಯಲ್ಲಿದೆ.

24 ಕ್ಲಿನಿಕ್‌ಗಳಲ್ಲಿ ವೈದ್ಯರಿಲ್ಲ: ಪ್ರಸ್ತುತ ಇರುವ 227 ಕ್ಲಿನಿಕ್‌ಗಳಲ್ಲಿ 24 ವೈದ್ಯಾಧಿಕಾರಿ, ತಲಾ ನಾಲ್ವರು ದಾದಿಯರು ಹಾಗೂ ಪ್ರಯೋಗಾಲಯದ ಸಿಬ್ಬಂದಿ ಕೊರತೆ ಕಾಡುತ್ತಿದೆ. ಹದಿನೈದು ದಿನಗಳ ಹಿಂದೆ ಆರೋಗ್ಯ ಇಲಾಖೆಯಿಂದ ಗ್ರಾಮೀಣ ಕೋಟಾದಡಿ ಯಲ್ಲಿ 15 ಮಂದಿ ವೈದ್ಯ ವಿದ್ಯಾರ್ಥಿಗಳ ನೇಮಕ ಮಾಡಲಾಗಿದೆ. ಇದರ ನಡುವೆ ಬಿಬಿಎಂಪಿ ವಾಕ್‌ ಇನ್‌ ಸಂದರ್ಶನದಲ್ಲಿ ನೇಮಕವಾದ 15ಕ್ಕೂ ಅಧಿಕ ವೈದ್ಯರು ಕರ್ತವ್ಯವನ್ನು ತ್ಯಜಿಸಿದ್ದಾರೆ. ಇದರಿಂದಾಗಿ ಬೊಮ್ಮನ ಹಳ್ಳಿ, ಪೂರ್ವ ವಲಯ, ಮಹದೇವಪುರ, ದಕ್ಷಿಣ ವಲಯದಲ್ಲಿ ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇವೆ.

ದಾದಿಯರೇ ವೈದ್ಯರು !: ಪ್ರಸ್ತುತ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯರು ರಜೆಯಲ್ಲಿರುವ ಸಂದರ್ಭದಲ್ಲಿ ಕ್ಲಿನಿಕ್‌ಗಳಲ್ಲಿ ದಾದಿಯರೇ ವೈದ್ಯರಾಗುತ್ತಾರೆ. ಸಣ್ಣಪುಟ್ಟ ಕಾಯಿಲೆ ಗಳಿಗೆ ಇವರೇ ಚಿಕಿತ್ಸೆ ನೀಡುತ್ತಾರೆ. ಕಾಯಿಲೆ ಹೆಚ್ಚಾದರೆ ಅನಿವಾರ್ಯವಾಗಿ ಸಮೀಪದ ಖಾಸಗಿ ಕ್ಲಿನಿಕ್‌ ಅಥವಾ ಇತರೆ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಇಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ದೊರಕದೆ, ಕೇವಲ ಮಾತ್ರೆಗಳನ್ನು ನೀಡಿ ವಾಪಸ್‌ ಕಳುಹಿಸಲಾಗುತ್ತಿದೆ ಎಂಬ ಆರೋಪ ರೋಗಿಗಳಿಂದ ಕೇಳಿ ಬರುತ್ತಿದೆ.

ವರದಿ ವಿಳಂಬ, ರೋಗ ಉಲ್ಬಣ: ಕೆಲ ನಮ್ಮ ಕ್ಲಿನಿಕ್‌ಗಳಲ್ಲಿ ಮಧು ಮೇಹ, ಮೂತ್ರ ಪರೀಕ್ಷೆ, ಡೆಂಗಿ, ಮಲೇರಿಯಾ ತಪಾಸಣೆ, ರಕ್ತ ಪರೀಕ್ಷೆ ಸೇರಿ ಒಟ್ಟು 14 ಪ್ರಯೋಗಾಲಯ ಸೇವೆಗಳು ಉಚಿತವಾಗಿ ಲಭ್ಯವಿವೆ. ಖಾಸಗಿಯಾಗಿ ಪರೀಕ್ಷೆ ಮಾಡಿದರೆ ಫ‌ಲಿತಾಂಶ ಒಂದೆರಡು ಗಂಟೆಯಲ್ಲಿ ಕೈ ಸೇರುತ್ತದೆ. ಅಂತಹ ವ್ಯವಸ್ಥೆಯನ್ನು ಸರ್ಕಾರಿ ವ್ಯವಸ್ಥೆಯಲ್ಲಿ ಏಕೆ ಆಳವಡಿಸಿಲ್ಲ. ಕೆಲವೊಮ್ಮೆ ಪ್ರಯೋಗಾಲಯದ ವರದಿ ವಿಳಂಬವಾಗಿ ಸಿಗುತ್ತಿರುವ ಹಿನ್ನೆಲೆಯಲ್ಲಿ ಗೋಲ್ಡನ್‌ ಅವಧಿಯಲ್ಲಿ ಚಿಕಿತ್ಸೆ ಸಿಗದೇ ರೋಗ ಲಕ್ಷಣಗಳು ಉಲ್ಬಣವಾಗುತ್ತಿದೆ ಎಂದು ರೋಗಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

Advertisement

ಕ್ಲಿನಿಕ್‌ ಹುಡುಕುವುದೇ ದೊಡ್ಡ ತಲೆನೋವು: ಬಿಬಿ ಎಂಪಿಯ ವಾರ್ಡ್‌ ವ್ಯಾಪ್ತಿಯಲ್ಲಿರುವ ನಮ್ಮ ಕ್ಲಿನಿಕ್‌ಗಳ ವಿಳಾಸ ಹಾಗೂ ಸ್ಥಳದ ನಕ್ಷೆಯನ್ನು ಬಿಬಿಎಂಪಿ ತನ್ನ ಅಧಿಕೃತ ಅಂತರ್‌ ಜಾಲತಾಣದಲ್ಲಿ ಪ್ರಕಟಿಸಿದೆ. ಇದರಲ್ಲಿ ನೀಡಲಾದ ನಕ್ಷೆಗೂ, ಮೂಲ ಸ್ಥಳಕ್ಕೂ 1 ಕಿ.ಮೀ. ಅಂತರ ತೋರಿಸುತ್ತದೆ. ಕೆಲವಡೆ ಕ್ಲಿನಿಕ್‌ ಬಲಗಡೆಯಲ್ಲಿದ್ದರೂ, ನಕ್ಷೆ ಮಾತ್ರ ಎಡಗಡೆ ತೋರಿಸುತ್ತಿದೆ. ಕೆಲ ಕ್ಲಿನಿಕ್‌ಗಳನ್ನು ವಸತಿ ಕಟ್ಟಡ ಮನೆಯಲ್ಲಿ ನಿರ್ಮಿಸಿರುವುದರಿಂದ, ಹೊಸದಾಗಿ ಏರಿಯಾಗೆ ಬಂದವರಿಗೆ ಈ ಕ್ಲಿನಿಕ್‌ಗಳನ್ನು ಹುಡುಕಾಡುವುದೇ ದೊಡ್ಡ ಕೆಲಸವಾಗಲಿದೆ.

ಪ್ರಯೋಜನವೇನು ಬಂತು?: ಸೋಮವಾರದಿಂದ ಶನಿವಾರದವರೆಗೆ ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ 9 ಗಂಟೆಗೆ ತೆರೆದು ಮಧ್ಯಾಹ್ನ 12.30ಕ್ಕೆ ಮುಚ್ಚಲಾಗುತ್ತೆ. ಬಳಿಕ ಮಧ್ಯಾಹ್ನ 2 ಗಂಟೆಗೆ ತೆರೆದು 4.30ಕ್ಕೆ ಬಂದ್‌ ಮಾಡಲಾಗುತ್ತಿತ್ತು. ಈ ನಡುವೆ ಆರೋಗ್ಯ ಇಲಾಖೆ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಆಯ್ದ ನಮ್ಮ ಕ್ಲಿನಿಕ್‌ಗಳಲ್ಲಿ ಕಾರ್ಯಾಚರಿಸುವ ವೈದ್ಯರ ಅವಧಿಯನ್ನು ಮಧ್ಯಾಹ್ನ 12ರಿಂದ ರಾತ್ರಿ 9ವರೆಗೆ ವಿಸ್ತರಿಸಲಾಗಿತ್ತು. ಆದರೂ, ನಮ್ಮ ಕ್ಲಿನಿಕ್‌ ಯೋಜನೆಯ ನಿಜವಾದ ಗುರಿ ತಲುಪುವಲ್ಲಿ ವಿಫ‌ಲವಾಗಿದೆ.

ನಿಯೋಜನೆಗೆ ಒತ್ತಾಯ: ಒಂದು ಕ್ಲಿನಿಕ್‌ಗೆ ಒಬ್ಬರೇ ವೈದ್ಯಾಧಿಕಾರಿ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಅವರು ರಜೆಗೆ ಹೋದಾಗ ಕೊರತೆ ಕಾಡುತ್ತದೆ. ಕೆಲವೊಮ್ಮೆ ಸುದೀರ್ಘ‌ ರಜೆಗೆ ಹೋದಾಗ ಇನ್ನೊಬ್ಬ ವೈದ್ಯರನ್ನು ಹೆಚ್ಚುವರಿ ಜವಾಬ್ದಾರಿ ನೀಡಿ ನಿಯೋಜಿ ಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸೋದು ಸರಿಯಲ್ಲ. ಸೇವೆ ನೀಡಲು ಸಾಧ್ಯವಾಗದಿದ್ದರೆ ನಮ್ಮ ಕ್ಲಿನಿಕ್‌ಗಳನ್ನು ಮುಚ್ಚಿ. ವೈದ್ಯರು ರಜೆಯಲ್ಲಿರುವ ಸಂದರ್ಭದಲ್ಲಿ ದಾದಿಯರು ಡ್ನೂಟಿ ಡಾಕ್ಟರ್‌ ಆಗುತ್ತಾರೆ. ಅವರ ಚಿಕಿತ್ಸೆಯಿಂದ ಏನಾದರೂ ಹೆಚ್ಚುಕಮ್ಮಿಯಾದರೆ ಹೊಣೆಯಾರು.-ಶೈಲಾ ಶ್ರೀನಿವಾಸ, ಸಾರ್ವಜನಿಕರು.

ಬಿಬಿಎಂಪಿ ವ್ಯಾಪ್ತಿಯಲ್ಲಿನ ನಮ್ಮ ಕ್ಲಿನಿಕ್‌ಗಳಲ್ಲಿ ತೆರವಾದ ಸ್ಥಳಕ್ಕೆ ವೈದ್ಯಾಧಿಕಾರಿ ನೇಮಕ ಮಾಡುವಂತೆ ಆರೋಗ್ಯ ಇಲಾಖೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶೀಘ್ರದಲ್ಲಿ ವೈದ್ಯಾಧಿಕಾರಿಗಳ ನೇಮಕವಾಗಲಿದೆ. -ಡಾ.ಮದನಿ, ಮುಖ್ಯಾಧಿಕಾರಿ, ಸಾರ್ವಜನಿಕ ಆರೋಗ್ಯವಿಭಾಗ ಬಿಬಿಎಂಪಿ.  

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next