Advertisement

Water; ರಾಜ್ಯದ ಅಣೆಕಟ್ಟೆಗಳು ಖಾಲಿ: ಕಾದಿದೆಯೇ ಮತ್ತಷ್ಟು ಅಪಾಯದ ದಿನಗಳು?

01:20 AM Apr 08, 2024 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಬಿಸಿಲ ಝಳ ಏರಿಕೆ ಯಾಗುತ್ತಿರುವಂತೆಯೇ ಪ್ರಮುಖ ಜಲಾಶಯ ಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ತಗ್ಗುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ಒಡಿಶಾಗಳ 13 ನದಿಗಳು ಪ್ರಸಕ್ತ ವರ್ಷ ಬತ್ತಿ ಹೋಗಿವೆ ಎಂಬ ಕೇಂದ್ರ ಜಲ ಆಯೋಗದ ವರದಿ ನಡುವೆ ಈ ಅಂಶ ಬೆಳಕಿಗೆ ಬಂದಿದೆ. ರಾಜಧಾನಿ ಬೆಂಗಳೂರು, ಮಂಡ್ಯ ಜಿಲ್ಲೆ ಗಳಲ್ಲಿ ಪ್ರಮುಖ ನೀರಿನ ಆಶ್ರಯವಾಗಿರುವ ಕೆ.ಆರ್‌.ಎಸ್‌. ಅಣೆಕಟ್ಟಿನಲ್ಲಿ ನೀರಿನ ಮಟ್ಟ ರವಿವಾರ 84.55 ಅಡಿ ಇತ್ತು. ಕಲಬುರಗಿ ಜಿಲ್ಲೆಯ ವ್ಯಾಪ್ತಿಯ 6 ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 20ರಷ್ಟೂ ನೀರಿಲ್ಲ. ಭದ್ರಾ, ಲಿಂಗನಮಕ್ಕಿ ಜಲಾಶಯಗಳಲ್ಲಿ ಶೀಘ್ರವೇ ಡೆಡ್‌ ಸ್ಟೋರೇಜ್‌ ತಲುಪುವ ಆತಂಕವಿದೆ.

Advertisement

ತುಂಗೆಯಲ್ಲಿ 4.2 ಟಿಎಂಸಿ ಮಾತ್ರ
ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದಿದ್ದು, ಕೇವಲ 4.52 ಟಿಎಂಸಿಗಳಷ್ಟಿದೆ. ಪ್ರಸಕ್ತ ವರ್ಷ ನಿರೀಕ್ಷಿತ ಮಳೆಯಾಗದೆ ಜಲಾಶಯಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ. ಪ್ರಸಕ್ತ ವರ್ಷ ಒಳಹರಿವು ಸ್ಥಗಿತಗೊಂಡಿದ್ದು, 935 ಕ್ಯೂಸೆಕ್‌ ನೀರನ್ನು ಕಾಲುವೆಗಳಿಗೆ ಹರಿಸಲಾಗುತ್ತಿದೆ.

ಲಿಂಗನಮಕ್ಕಿ, ಭದ್ರಾದಲ್ಲಿ ಡೆಡ್‌ಸ್ಟೋರೇಜ್‌

ಮಲೆನಾಡಿನ ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಲ್ಲಿಯೂ ನೀರಿನ ಕೊರತೆ ಬಾಧಿಸುತ್ತಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಸದ್ಯ 1,759.85 ಅಡಿ ನೀರಿದೆ. ಕಳೆದ ವರ್ಷ ಇದೇ ಅವ ಧಿಯಲ್ಲಿ 1,773.40 ಅಡಿ ನೀರಿತ್ತು. ಪ್ರತೀ ದಿನ 4 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ವಿದ್ಯುತ್‌ ಉತ್ಪಾದನೆಗೆ ಬಳಸಲಾಗುತ್ತಿದ್ದು, ಮಾಸಾಂತ್ಯಕ್ಕೆ ಡೆಡ್‌ ಸ್ಟೋರೇಜ್‌ ತಲಪುವ ಆತಂಕವಿದೆ. ಭದ್ರಾ ಜಲಾಶಯದಲ್ಲಿ ಜಲಾಶಯದಲ್ಲಿ ಪ್ರಸ್ತುತ 125.3 (18 ಟಿಎಂಸಿ) ಅಡಿ ನೀರಿದೆ. ಕಳೆದ ವರ್ಷ ಇದೇ ಅವ ಧಿಯಲ್ಲಿ 155.9 ಅಡಿ ನೀರಿತ್ತು.

ಹಿಡಕಲ್‌, ಮಲಪ್ರಭಾ

Advertisement

ಬೆಳಗಾವಿ ಜಿಲ್ಲೆಯ 2,175 ಅಡಿ ಸಾಮರ್ಥ್ಯದ ಹಿಡಕಲ್‌ ಜಲಾಶಯದಲ್ಲಿ ಈಗ 2,133.40 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,110 ಆಡಿ ನೀರಿತ್ತು. ಮಲಪ್ರಭಾ ಜಲಾಶಯದಲ್ಲಿ ಕೂಡ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. 2,079 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,050.19 ಅಡಿ ನೀರು ಸಂಗ್ರಹವಿದೆ. ಇಲ್ಲಿಂದ ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯಲು ಹಾಗೂ ನೀರಾವರಿಗೆ ನೀರು ಪೂರೈಕೆಯಾಗುತ್ತಿದೆ.

ನಾರಾಯಣಪುರದಲ್ಲಿ ಇಳಿಕೆ

ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯದಲ್ಲಿ ಈ ಬಾರಿ 4.835 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಒಟ್ಟು 4,788 ಕ್ಯೂಸೆಕ್‌ ಒಳ ಹರಿವು ಇತ್ತು. ಈ ವರ್ಷ ಯಾವುದೇ ಒಳ ಹರಿವು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ 5.428 ಟಿಎಂಸಿ ನೀರು ಸಂಗ್ರಹವಾಗಿತ್ತು.

ಕಲಬುರಗಿ ವ್ಯಾಪ್ತಿಯಲ್ಲಿ

ಜಿಲ್ಲೆಯ ಆರು ಜಲಾಶಯಗಳಲ್ಲಿ ಸರಾಸರಿ ನೀರಿನ ಸಾಮರ್ಥ್ಯದಲ್ಲಿ ಕನಿಷ್ಠ ಹಂತಕ್ಕೆ ತಲುಪಿದೆ. ಜಿಲ್ಲೆಯ ಜೀವನದಿ ಭೀಮಾ ನದಿ ಸಂಪೂರ್ಣ ಬತ್ತಿದೆ. ಸೊನ್ನ ಏತ ನೀರಾವರಿ ಜಲಾಶಯದಲ್ಲಿ 3.166 ಟಿಎಂಸಿ ಸಾಮರ್ಥ್ಯದಲ್ಲಿ 0.547 ಟಿಎಂಸಿ ಮಾತ್ರ ನೀರಿದೆ. ಅಮರ್ಜಾ ಜಲಾಶಯದಲ್ಲಿ 1.554 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದಲ್ಲಿ 0.451 ಟಿಎಂಸಿ ನೀರು ಮಾತ್ರ ಇದೆ. ಬೆಣ್ಣೆತೋರಾದಲ್ಲಿ 5.297 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದಲ್ಲಿ 3.547 ನೀರಿದ್ದು, ಶೇ. 60ರಷ್ಟು ನೀರಿದೆ. ಚಂದ್ರಂಪಳ್ಳಿ ಜಲಾಶಯದಲ್ಲಿ 1.208 ಟಿಎಂಸಿಯಲ್ಲಿ ಕೇವಲ 0.421 ಟಿಎಂಸಿ ಅಂದರೆ ಶೇ. 30ರಷ್ಟು ನೀರಿದೆ. ಗಂಡೋರಿನಾಲಾ ಜಲಾಶಯದಲ್ಲಿ 1.887 ಟಿಎಂಸಿ ಪೈಕಿ 1.089 ಟಿಎಂಸಿ ಇದ್ದು, ಶೇ.50ಷ್ಟು ನೀರಿದೆ. ಕೆಳದಂಡೆ ಮುಲ್ಲಾಮಾರಿ ಜಲಾಶಯದಲ್ಲಿ 1.736 ಟಿಎಂಸಿಯಲ್ಲಿ 1 ಟಿಎಂಸಿ ನೀರಿದೆ.

ದೇಶಾದ್ಯಂತ ಇಳಿಕೆ

ದೇಶದ ವಿವಿಧ ಭಾಗಗಳಲ್ಲಿರುವ 150 ಅಣೆಕಟ್ಟುಗಳ ನೀರಿನ ಸಂಗ್ರಹ ಪ್ರಮಾಣ ಶೇ. 35ಕ್ಕೆ ಇಳಿಕೆಯಾಗಿದೆ. 150 ಅಣೆಕಟ್ಟುಗಳಲ್ಲಿ 178.784 ಬಿಲಿಯನ್‌ ಕ್ಯೂಬಿಕ್‌ ಮೀಟರ್‌ (ಬಿಸಿಎಂ) ನೀರಿ ದೆ. ಇದು ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 257.812 ಬಿಸಿಎಂಯ ಶೇ. 69.35 ಆಗಿದೆ. ಈಗ ಅದರ ಪ್ರಮಾಣ ಕೇವಲ 61.801 ಬಿಸಿಎಂಗೆ ಇಳಿದಿದೆ.
ಮಹಾನದಿ ಮತ್ತು ಪೆನ್ನಾರ್‌ ಭೂಪ್ರದೇಶ ವ್ಯಾಪ್ತಿಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಕೆಲವು ನದಿಗಳು ಶೇ.100 ಖಾಲಿಯಾಗಿವೆ. ಜತೆಗೆ ಪೆನ್ನಾರ್‌ ಮತ್ತು ಕನ್ಯಾಕುಮಾರಿ ವ್ಯಾಪ್ತಿಯ ಕೆಲವು ನದಿಗಳಲ್ಲಿಯೂ ಕಳೆದ 10 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಹರಿವು, ಸಂಗ್ರಹ ಇದೆ.

ಮಹಾನದಿ ಪಾತ್ರದಲ್ಲಿ ಬತ್ತಿಹೋದ ನದಿಯನ್ನು ಅಧ್ಯಯನ ನಡೆಸಿದ ಬಳಿಕ ಕೃಷಿ ಕ್ಷೇತ್ರದಲ್ಲಿ ಬದಲಿ ಬೆಳೆ ವ್ಯವಸ್ಥೆಯನ್ನು ರೈತರು ಅನುಷ್ಠಾನಗೊಳಿಸ ಬೇಕಾಗಿದೆ. ಜತೆಗೆ ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆ ಬೆಳೆಯಬೇಕಾಗಿದೆ.
-ನಿತಿನ್‌ ಬಸ್ಸಿ, ನೀರಾವರಿ ತಜ್ಞ

ಬತ್ತಿ ಹೋಗಿವೆ 3 ರಾಜ್ಯಗಳ 13 ನದಿಗಳು: ಜಲ ಆಯೋಗ
ಹೊಸದಿಲ್ಲಿ: ದೇಶಾದ್ಯಂತ ಬಿಸಿಲಿನ ಪ್ರಕೋಪ ಹೆಚ್ಚಾಗಿರುವಂತೆಯೇ ದಕ್ಷಿಣ ಭಾರತದ 13 ನದಿಗಳು ಬತ್ತಿ ಹೋಗಿವೆ ಎಂದು ಕೇಂದ್ರ ಜಲ ಆಯೋಗ ಹೊಸ ವರ ದಿಯಲ್ಲಿ ಹೇಳಿದೆ. ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯಗಳ ಮಹಾನದಿ ಮತ್ತು ಪೆನ್ನಾರ್‌ ನದಿ ಮುಖಜ ಭೂಮಿಯ ಪ್ರದೇಶಗಳ ನದಿಗಳು ಪೂರ್ಣವಾಗಿ ಬರಿದಾಗಿವೆ. ಋಷಿಕುಲ್ಯ, ಬಹುದಾ, ಶಾರದ, ಪಲೇರು, ವಂಶಧಾರಾ, ನಾಗವತಿ ಸಹಿತ ಒಟ್ಟು 13 ನದಿಗಳು ಈ ಪಟ್ಟಿಯಲ್ಲಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರದೇಶಗಳ ನದಿಗಳ ಅಣೆಕಟ್ಟುಗಳಲ್ಲಿ ಶೇ. 32.28 ನೀರು ಸಂಗ್ರಹವಿತ್ತು. ಆದರೆ ಫೆ. 22ರಂದು ನದಿಗಳಲ್ಲಿ ನೀರಿನ ಲೈವ್‌ ಸ್ಟೋರೇಜ್‌ ಪ್ರಮಾಣ 0.062 ಬಿಲಿಯನ್‌ ಕ್ಯೂಬಿಕ್‌ ಮೀಟರ್‌ ಇದ್ದದ್ದು, ಮಾ. 7ರ ವೇಳೆಗೆ 0.005 ಬಿಲಿಯನ್‌ ಕ್ಯೂಬಿಕ್‌ ಮೀಟರ್‌ಗೆ ಇಳಿದಿತ್ತು. ಮಾ. 14ರಂದು ಪೂರ್ಣ ಪ್ರಮಾಣದಲ್ಲಿ ನದಿಗಳಲ್ಲಿನ ನೀರು ಬರಿದಾಗಿದೆ ಎಂದು ಜಲ ಆಯೋಗ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next