Advertisement

ನಿರ್ವಹಣೆ ಕೊರತೆ: ಪಾಳುಬಿದ್ದ ಶಾಲಾ ಕಟ್ಟಡ

07:08 AM Feb 08, 2019 | Team Udayavani |

ಶಿಡ್ಲಘಟ್ಟ: ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಆಲಸ್ಯದಿಂದ ತಾಲೂಕಿನ ದೇಶ ಭಕ್ತರಹಳ್ಳಿಯ ಸರ್ಕಾರಿ ಶಾಲೆಯ ಕಟ್ಟಡ ಪಾಳುಬಿದ್ದಿದ್ದು, ಅಕ್ರಮ ಚಟುವಟಿಕೆಗಳ ಆಶ್ರಯತಾಣವಾಗಿ ಪರಿವರ್ತನೆಗೊಂಡಿದೆ.

Advertisement

ಗ್ರಾಮದಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಾಣವಾದ ಬಳಿಕ ಹಳೆ ಕಟ್ಟಡವನ್ನು ಕಡೆಗಣಿಸಿದ ಪರಿಣಾಮ ಕಟ್ಟಡ ಯಾರಿಗೆ ಬೇಡವಾದ ಪರಿಸ್ಥಿಗೆ ತಲುಪಿದೆ. ಸೂಕ್ತ ನಿರ್ವಹಣೆ ಇಲ್ಲದೇ ಕಟ್ಟಡದ ಸ್ವರೂಪವೇ ಬದಲಾಗಿದ್ದು, ದನಕರುಗಳು ಮತ್ತು ಕುರಿಮೇಕೆಗಳಿಗೆ ಆಶ್ರಯತಾಣ ಪರಿಣಮಿಸಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಸೇನಾನಿಗಳ ಹಿನ್ನೆಲೆ ಹೊಂದಿರುವ ಭಕ್ತರಹಳ್ಳಿಗೆ ದೇಶ ಭಕ್ತರಹಳ್ಳಿ ಎಂದು ಕರೆಯುತ್ತಾರೆ. ಇಂತಹ ಐತಿಹಾಸಿಕ ಗ್ರಾಮದಲ್ಲಿ ಶಾಲೆಯ ಕಟ್ಟಡ ಬಳಕೆಗೆ ಬಾರದೇ ಸರ್ಕಾರಿ ಸ್ವತ್ತುಗೆ ಇಂದು ವಾರಸುದಾರರಿಲ್ಲದೇ ಅನಾಥವಾಗಿ ಪಾಳುಬಿದ್ದಿದೆ.

ಕಟ್ಟಡ ನೋಡಿದರೇ ಭಯ: ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡದ ಪರಿಸ್ಥಿತಿ ಎಷ್ಟು ಭಯಾನಕವಾಗಿದೆ ಎಂದರೆ ಭೂತ ಬಂಗಲೆಯಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಲವು ಹಳೆ ವಿದ್ಯಾರ್ಥಿಗಳು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಆದರೆ ಈ ಶಾಲೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯಾರು ಆಸಕ್ತಿವಹಿಸದಿರುವುದು ದುರಂತವೇ ಸರಿ.

ಕಟ್ಟಡ ಶಿಥಿಲ: ಶಾಲೆಯ ಸುತ್ತಮುತ್ತ ಕುರಿ-ಮೇಕೆಗಳ ಸಗಣಿ ರಾಶಿಬಿದ್ದಿದೆ. ಕನಿಷ್ಠ ಶಾಲೆಯೊಳಗೆ ಪ್ರವೇಶ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಬಂದೊದಗಿದೆ. ಶಾಲೆ ಪಾಳುಬಿದ್ದಿರುವುದನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

Advertisement

ಶಾಲೆಯ ಮುಂದೆ ಚರಂಡಿ ಕಾಮಗಾರಿ ಆರಂಭಿಸಲಾಗಿದೆ. ಅದು ಪೂರ್ಣಗೊಳ್ಳದೇ ತ್ಯಾಜ್ಯ ನೀರು ಶೇಖರಣೆಯಾಗಿ ಸೊಳ್ಳೆಗಳಿಗೆ ಆಶ್ರಯತಾಣವಾಗಿ ಪರಿವರ್ತನೆಗೊಂಡಿದ್ದು, ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಆತಂಕ ಮನೆ ಮಾಡಿದೆ. ಶಾಲೆಯ ಕಾಂಪೌಂಡ್‌ ಗೋಡೆಗಳು ಸಂಪೂರ್ಣ ಶಿಥಿಲವಾಗಿದ್ದು, ಬಹುಶಃ ಕಟ್ಟಡವು ಶಿಥಿಲವಾಗಿದೆಯೇ? ಎಂಬ ಅನುಮಾನ ಮೂಡುವಂತಾಗಿದೆ.

ತಾಲೂಕಿನಲ್ಲಿ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮತ್ತು ಶಾಲಾ ಕಟ್ಟಡಗಳ ಆಸ್ತಿಯನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಶಾಲೆಯ ದುಸ್ಥಿತಿಯ ಕುರಿತು ಅರಿವು ಇಲ್ಲದಿರುವುದು ದುರಂತವೇ ಸರಿ. ಈ ಸಂಬಂಧ ಪತ್ರಿಕೆ ಅವರನ್ನು ಸಂಪರ್ಕಿಸಿದಾಗ ಶಾಲೆಯ ಕುರಿತು ಮಾಹಿತಿ ಇಲ್ಲ, ಸಿಆರ್‌ಪಿಗೆ ವರದಿ ಸಲ್ಲಿಸಲು ಸೂಚಿಸುತ್ತೇನೆ ಎಂದು ಹೇಳುವ ಮೂಲಕ ತಮ್ಮ ಬೇಜವಾಬ್ದಾರಿಯನ್ನು ಪ್ರದರ್ಶನ ಮಾಡಿದ್ದಾರೆ.

ಶೋಚನೀಯ ಪರಿಸ್ಥಿತಿ: ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಪಾಳುಬಿದ್ದಿರುವ ಶಾಲಾ ಕಟ್ಟಡಗಳು ಸಹಿತ ಜಿಲ್ಲೆಯಾದ್ಯಂತ ದುಸ್ಥಿತಿಯಲ್ಲಿರುವ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಗಮನಹರಿಸಬೇಕಾಗಿದೆ ಎಂದು ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ದಿನೇ ದಿನೇ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಮೇಲೆ ನಿರೀಕ್ಷೆ?: ಭಕ್ತರಹಳ್ಳಿ ಗ್ರಾಮ ಪಂಚಾಯಿತಿಗೆ ಇತ್ತೀಚಿಗೆ ಚುನಾವಣೆ ನಡೆದಿದ್ದು, ಫೆ.8ರಂದು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ನೂತನ ಆಡಳಿತ ಮಂಡಳಿ ಗ್ರಾಮದಲ್ಲಿ ಪಾಳುಬಿದ್ದಿರುವ ಶಾಲೆಯನ್ನು ಅಭಿವೃದ್ಧಿಗೊಳಿಸಲು ಗಮನಹರಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

* ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next