Advertisement

ರಾಷ್ಟ್ರೀಯ ಹೆದ್ದಾರಿ 75 ನಿರ್ವಹಣೆಯಲ್ಲಿ ಲೋಪ

03:58 PM Dec 03, 2022 | Team Udayavani |

ಮುಳಬಾಗಿಲು: ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಗುಂಡಿಗಳು ಬಿದ್ದಿದ್ದು, ಮುಕ್ತ ಸಂಚಾರ ಕಷ್ಟವಾಗಿದೆ. ರಸ್ತೆಯನ್ನು 2011ರ ಕೇಂದ್ರ ಸರ್ಕಾರ ರಾ.ಹೆ.4ನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ದಿ ಪಡಿಸಲು ಉದ್ದೇಶಿಸಿ ಮೊದಲ ಹಂತವಾಗಿ ಬೆಂಗಳೂರಿನಿಂದ ಮುಳಬಾಗಿಲು ನಗರದ ಹೊರ ವಲಯದವರೆಗೆ ಕಾಮಗಾರಿ ಗುತ್ತಿಗೆಯನ್ನು ಹೈದರಾಬಾದ್‌ನ ಲ್ಯಾಂಕೋ ಕಂಪನಿಗೆ ನೀಡಲಾಗಿತ್ತು. ಅದರಂತೆ ಕಂಪನಿ ಕಾಮಗಾರಿ ಪೂರ್ಣಗೊಳಿಸಿ, ಪ್ರಾಧಿಕಾರದಿಂದ ಅನುಮತಿ ಪಡೆದು 2025ರ ವರೆಗೆ, ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ 20 ವರ್ಷ ವರ್ಷಗಳ ಕಾಲ ಟೋಲ್‌ ಗಳಲ್ಲಿ ಶುಲ್ಕ ವಸೂಲಿ ಮಾಡಲು ಕರಾರು ಮಾಡಿಕೊಂಡಿದೆ.

Advertisement

ಕಂಪನಿಯು ಸುಮಾರು 700 ಕೋಟಿ ವೆಚ್ಚದಲ್ಲಿ ನಿಗದಿತ ವೇಳೆಗೆ ರಸ್ತೆಯನ್ನು ನಿರ್ಮಿಸಿ ಶುಲ್ಕ ವಸೂಲಿ ಮಾಡಬಹುದೆಂಬ ಅಂದಾಜಿನಿಂದ 2007-08 ರಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಬಿಸಿದೆ.

ಆದರೆ ಕಾಮಗಾರಿ ಪೂರ್ಣಗೊಳಿಸಲು 700 ಕೋಟಿ ಸಾದ್ಯವಾಗದೇ ಇನ್ನೂ 350 ಕೋಟಿ ರೂ. ಹೆಚ್ಚುವರಿ ಬೇಕಾಗಿದೆ. ಕಂಪನಿಯು ಎಸ್‌ಬಿಐ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದು, 2011ರ ಮಾರ್ಚ್‌ ವೇಳೆಗೆ ಸುಮಾರು 1050 ಕೋಟಿ ವೆಚ್ಚದಲ್ಲಿ 64 ಕಿ.ಮೀ ಚತುಷ್ಪಥ ರಸ್ತೆ ಮತ್ತು ಹೊಸಕೋಟೆಯಿಂದ ಕೆ.ಆರ್‌. ಪುರದ ವರೆಗೆ 16 ಕಿ.ಮೀ. ಆರು ಪಥಗಳ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರಾ.ಹೆ.75ಯನ್ನು ಸಮೀಕ್ಷೆ ನಡೆಸಿದ್ದಾರೆ.

ಉತ್ತಮ ಗುಣಮಟ್ಟದಿಂದ ನಿರ್ಮಾಣ ಮಾಡಿಲ್ಲ ಎಂಬ ಕಾರಣದಿಂದ ಟೋಲ್‌ನಲ್ಲಿ ವಾಹನಗಳಿಂದ ಶುಲ್ಕ ವಸೂಲಿಗೆ ಅನುಮತಿ ನೀಡಲು ನಿರಾಕರಿಸಿದ್ದರು. ಆದರೆ ಸಾಲ ತೀರಿಸಲು ಕಂಪನಿ ಮೇಲೆ ಬ್ಯಾಂಕ್‌ ಅಧಿಕಾರಿಗಳ ಒತ್ತಡ, ರಸ್ತೆ ನಿರ್ಮಾಣಕ್ಕೆ ಹಾಕಿದ ಬಂಡವಾಳ ವಾಪಸ್‌ ಆಗದ್ದರಿಂದ ಕಂಪನಿ ಕಂಗಾಲಾಗಿತ್ತು. ಆದರೆ ನಿರಂತರವಾಗಿ ಹೆದ್ದಾರಿ ಪ್ರಾಧಿಕಾರವನ್ನು ಕಾಡಿ ಬೇಡಿ ಅನುಮತಿ ಪಡೆದುಕೊಂಡು 2013ರ ಡಿ. 20 ಮದ್ಯ ರಾತ್ರಿಯಿಂದ ಹನುಮನಹಳ್ಳಿ ಮತ್ತು ಹೊಸಕೋಟೆ ಟೋಲ್‌ಗ‌ಳಲ್ಲಿ ಶುಲ್ಕ ವಸೂಲಿ ಪ್ರಾರಂಭಿಸಿದೆ.

ವಾಹನಗಳಿಗೆ ನಿಗದಿ ಪಡಿಸಲಾಗಿರುವ ಶುಲ್ಕ: ಕಾರು, ಜೀಪ್‌, ವ್ಯಾನ್‌ಗಳು ಒಮ್ಮೆ ಸಂಚರಿಸಲು 85 ರೂ., ದಿನಕ್ಕೆ 125 ರೂ., ಮಾಸಿಕ 60 ಬಾರಿ ಸಂಚರಿಸಲು 2490 ರೂ., ಮತ್ತು ಎಲ್‌ಸಿವಿ/ಮಿನಿ ಬಸ್‌ ಒಮ್ಮೆ ಸಂಚಾರಕ್ಕೆ 145 ರೂ., ದಿನಕ್ಕೆ 220 ರೂ., ಮಾಸಿಕ 60 ಬಾರಿ ಸಂಚರಿಸಲು 4355 ರೂ., ಬಸ್‌, ಟ್ರಕ್‌ ಒಮ್ಮೆ ಸಂಚಾರಕ್ಕೆ 290 ರೂ., ದಿನಕ್ಕೆ 435 ರೂ., ಮಾಸಿಕ 60 ಬಾರಿ ಸಂಚರಿಸಲು 8710 ರೂ., ಜೆಸಿಬಿ ಯಂತ್ರ ಹಾಗೂ ಹೆಚ್ಚಿನ ಆ್ಯಕ್ಸಲ್‌ಗ‌ಳ ವಾಹನ ಮತ್ತು ಹೆವಿ ಕನ್‌ಸ್ಟ್ರನ್‌ ಮೆಷಿನರಿಗಳಿಗೆ ಒಮ್ಮೆ ಸಂಚಾರಕ್ಕೆ 465 ರೂ., ದಿನಕ್ಕೆ 700 ರೂ., ಮಾಸಿಕ 60 ಬಾರಿ ಸಂಚರಿಸಲು 14,000 ರೂ. ನಿಗದಿ ಮಾಡಿದೆ. ಆದರೆ, ಕರಾರಿನಂತೆ ಕಂಪನಿ ರಸ್ತೆ ಡಾಂಬರೀಕರಣ ಸೇರಿದಂತೆ ಅಭಿವೃದ್ಧಿ ಮಾಡಿಲ್ಲ.

Advertisement

ಇತ್ತೀಚೆಗೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಯೋಜನೆ ಆರಂಭಗೊಂಡಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ವಾಹನಗಳು ಕಾರಿಡಾರ್‌ ಮೂಲಕ ಸಂಚರಿಸಿದರೆ, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನಗಳ ಸಂಚಾರ ಇಳಿಮುಖವಾಗುವ ಆತಂಕ ಮತ್ತು ಕೋಟ್ಯಂತರ ರೂ. ನಷ್ಟ ಉಂಟಾದರೆ ಹೇಗೆ? ಎಂದು ಷಷ್ಟಪಥ ರಸ್ತೆಗೆ ಮಾತ್ರ ಡಾಂಬರೀಕರಣ ಮಾಡಲಾಗುತ್ತಿದೆ ಎನ್ನಲಾಗಿದೆ.

ಸಾಲ ವಸೂಲಿಗಾಗಿ ಟೋಲ್‌ ವಶ; ಮಾರಾಟ: ಪ್ರಾಧಿಕಾರದ ಕರಾರಿನಂತೆ ಪ್ರತಿ 5 ವರ್ಷಕ್ಕೊಮ್ಮೆ ಲ್ಯಾಂಕೋ ಕಂಪನಿ ರಾ.ಹೆ.75ರಲ್ಲಿ ಡಾಂಬರೀಕರಣ, ಬಣ್ಣ ಬಳಿಯುವುದು ಸೇರಿದಂತೆ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಲ್ಯಾಂಕೊ ಕಂಪನಿಯು ಬ್ಯಾಂಕ್‌ ಸಾಲ ಸಂಪೂರ್ಣವಾಗಿ ತೀರಿಸದಿರುವಾಗ ರಸ್ತೆ ನವೀಕರಣಕ್ಕೆ, ಮತ್ತೂಮ್ಮೆ ಕನಿಷ್ಠ 100 ಕೋಟಿ ಹಣ ಬೇಕೆಂದು ಬ್ಯಾಂಕ್‌ಗೆ ಬೇಡಿಕೆ ಇಟ್ಟಿದ್ದು, ಸಾಲ ತೀರಿಸುವವರೆಗೆ ಮರು ಸಾಲ ನೀಡುವುದಿಲ್ಲವೆಂದು ಬ್ಯಾಂಕ್‌ ತಿಳಿಸಿದೆ. ಆದ್ದರಿಂದ ಹಣವಿಲ್ಲದೇ ಕಂಪನಿಯು ರಸ್ತೆ ನಿರ್ವಹಿಸಿಲ್ಲ. ಎಸ್‌ಬಿಐ ಕೋರ್ಟ್‌ ಮೊರೆ ಹೋಗಿ ಲ್ಯಾಂಕೊ ಕಂಪನಿಗೆ ನೀಡಿದ್ದ ಸಾಲದ ವಸೂಲಿಗಾಗಿ ಎರಡು ಟೋಲ್‌ಗ‌ಳ ನಿರ್ವಹಣೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದೆ. ಅಲ್ಲದೆ ನ್ಯಾಯಾಲಯ ಮೂಲಕವೇ ಮಧ್ಯಪ್ರದೇಶದ ಕಲ್ಯಾಣ್‌ ಟೋಲ್‌ ಕಂಪನಿಗೆ 200 ಕೋಟಿ ರೂ.ಗೆ ಹನುಮನಹಳ್ಳಿ, ಹೊಸಕೋಟೆ ಟೋಲ್‌ಗ‌ಳನ್ನು ಮಾರಾಟ ಮಾಡಿದೆ. ಈ ಕಲ್ಯಾಣ್‌ ಟೋಲ್‌ ಕಂಪನಿಯು 2025ವರೆಗೆ ರಾಷ್ಟ್ರೀಯ ಹೆದ್ದಾರಿ 75ರ ನಿರ್ವಹಣೆ ಮಾಡಿಕೊಂಡು ಎರಡು ಟೋಲ್‌ಗ‌ಳಲ್ಲಿ ವಾಹನಗಳಿಂದ ಶುಲ್ಕ ವಸೂಲಿ ಮಾಡಿಕೊಳ್ಳುತ್ತಿದೆ.

ರಾಷ್ಟ್ರೀಯ ಹೆದ್ದಾರಿ 75ರ ನಿರ್ಮಾಣಗೊಂಡು ಹಲವು ವರ್ಷಗಳಾದರೂ ಡಾಂಬರೀಕರಣ ಮಾಡದೇ ಇರುವುದರಿಂದ, ರಸ್ತೆ ಬಿರುಕುಬಿಟ್ಟಿದೆ. ಹಳ್ಳಗಳು ಹೆಚ್ಚಾಗಿದೆ. ಮಳೆಗಾಲದಲ್ಲಿ ನೀರಿನ ಹೊಂಡಗಳಾಗಿ ಅಪಘಾತಗಳನ್ನು ಸೃಷ್ಟಿಸುವ ತಾಣಗಳಾಗುತ್ತಿವೆ. ನಿರ್ವಹಣೆ ಇಲ್ಲದ ಮೇಲೆ ಸಂಚಾರಕ್ಕೆ ಶುಲ್ಕವೇಕೆ ಭರಿಸಬೇಕು? -ವರದಗಾನಹಳ್ಳಿ ಪ್ರಜ್ವಲ್‌, ಸ್ಥಳೀಯರು

ರಾಷ್ಟ್ರೀಯ ಹೆದ್ದಾರೆ -75 ಅನ್ನು ಕಳೆದೊಂದು ವರ್ಷದಿಂದ ಕಲ್ಯಾಣ್‌ ಟೋಲ್‌ ಕಂಪನಿ ತಮ್ಮ ವಶಕ್ಕೆ ಪಡೆದಿದ್ದು, 2025ರವರೆಗೆ ನಿರ್ವಹಣೆ ಮಾಡಬೇಕಿರುವುದರಿಂದ ಪ್ರಸ್ತುತ ಹೊಸಕೋಟೆ ಕಡೆಯಿಂದ ಡಾಂಬರೀಕರಣ ಮಾಡಲಾಗುತ್ತಿದೆ. -ಗೋಪಾಲ್‌ರೆಡ್ಡಿ, ಲ್ಯಾಂಕೊ ವ್ಯವಸ್ಥಾಪಕ, ಹನುಮನಹಳ್ಳಿ ಟೋಲ್‌

-ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next