Advertisement

ಬೆಳ್ತಂಗಡಿ: ಬಡವಾದ ಅಂಬೇಡ್ಕರ್‌ ಭವನ

09:44 AM Apr 06, 2022 | Team Udayavani |

ಬೆಳ್ತಂಗಡಿ: ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ನೀಡಿರುವ ಸಂದೇಶ ರಾಜಕೀಯ ಲಾಭಕ್ಕೋಸ್ಕರವಷ್ಟೆ ಬಳಕೆಯಾಗುತ್ತಿದೆ ವಿನಾಃ ಸಮುದಾಯದ ಏಳಿಗೆಗೆಲ್ಲ. ಬಡವರ್ಗದ ಮಂದಿಯ ಕಲ್ಯಾಣ ಕ್ಕಾಗಿ ಪ್ರತೀ ತಾಲೂಕಿ ಗೊಂದ ರಂತೆ ನಿರ್ಮಿಸಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಭವನ ಇಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ನಿರ್ಗತಿಕರು ಆಶ್ರಯಿಸುವಂತಾಗಿದೆ.

Advertisement

1991-92ರಲ್ಲಿ ಗಂಗಾಧರ ಗೌಡರು ಶಾಸಕರಾಗಿದ್ದ ಅವಧಿಯಲ್ಲಿ ಬಸ್‌ ನಿಲ್ದಾಣ ಸಮೀಪ ಕೃಷಿ ಇಲಾಖೆಗೆ ಸಾಗುವ ರಸ್ತೆಯಲ್ಲಿ ಸರ್ವೇ ನಂ. 90/1ಎ 1ಬಿ.ಯಲ್ಲಿ 7.5 ಸೆಂಟ್ಸ್‌ ನಲ್ಲಿ ಅಂಬೇಡ್ಕರ್‌ ಭವನ ನಿರ್ಮಿಸಲಾಗಿತ್ತು. ಇದರ ನಿರ್ವಹಣೆ ಜವಾಬ್ದಾರಿ ನಗರ ಪಂಚಾಯತ್‌ನದ್ದಾಗಿದೆ. ಪ್ರಸಕ್ತ ಸಾಮಾನ್ಯ ವರ್ಗಕ್ಕೆ 500, ಎಸ್‌.ಸಿ., ಎಸ್‌.ಟಿ.ಗೆ 250 ರೂ.ನಲ್ಲಿ ಸಭಾ ಕಾರ್ಯಕಮ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ಶೌಚಾಲಯ, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲದೆ ಇಲಾಖೆಗಳ ಸಣ್ಣಪುಟ್ಟ ಕಾರ್ಯಕ್ರಮಗಳಿಗಷ್ಟೆ ಇದು ಬಳಕೆಯಾಗುತ್ತಿದೆ.

ನಿರ್ಗತಿಕರ ವಾಸಸ್ಥಾನ

ಕಾರ್ಯಕ್ರಮ ಇಲ್ಲದ ದಿನಗಳಲ್ಲಿ ನಿರ್ಗತಿಕರು, ಮದ್ಯಪಾನಿಗಳು ಭವನದ ಜಗಲಿಯನ್ನೇ ಆಶ್ರಯಿಸುತ್ತಿದ್ದಾರೆ. ಈ ಹಿಂದೆ ರಮ್ಮಿ, ಲೂಡೋ ಸಹಿತ ವಿವಿಧ ಆಟ ಆಡಲು ಪಡ್ಡೆಗಳ ಆಶ್ರಯ ಸ್ಥಾನದಂತಾಗಿತ್ತು. ಈ ಕುರಿತು ದಲಿತ ಸಂಘಟನೆಗಳು ಪ.ಪಂ.ಗೆ ಹಲವು ಬಾರಿ ದೂರು ಸಲ್ಲಿಸಿದರೂ ಮತ್ತದೇ ಖಯಾಲಿ ಎಂಬಂತಾಗಿದೆ. ರಾತ್ರಿ ಅಂಬೇಡ್ಕರ್‌ ಭವನವೇ ಪಡ್ಡೆಗಳ ಅಡ್ಡೆಯಾಗುತ್ತಿದೆ. ಈ ಮಾರ್ಗವಾಗಿ ಸಾಗಲು ಸಾರ್ವಜನಿಕರು ಮುಜುಗರ ಪಡುವಂತಾಗಿದೆ.

ಈಡೇರದ ಬೇಡಿಕೆ

Advertisement

ಮಾಜಿ ಶಾಸಕ ಕೆ.ವಸಂತ ಬಂಗೇರ ಅವಧಿಯಲ್ಲಿ ಬೆಳ್ತಂಗಡಿಯ ಮಿನಿವಿಧಾನ ಸೌಧ ಉದ್ಘಾಟನೆಗೆ 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆಗಮಿಸಿದ್ದರು. ಅನೇಕ ಶಿಲಾನ್ಯಾಸ, ಉದ್ಘಾಟನೆ ನಡೆದಿದ್ದವು. ಆದರೆ ಅಂಬೇಡ್ಕರ್‌ ಭವನಕ್ಕೆ ನೆರವೇರಿಸಿರಲಿಲ್ಲ. ಮಾಜಿ ಶಾಸಕರಿಂದಲೂ ನಡೆದಿಲ್ಲ ಎಂಬ ಬೇಸರ ಸಮುದಾಯದ ಮುಖಂಡ ರಲ್ಲಿದೆ. ಖಾಸಗಿ ಸಭಾಭವನಗಳ ಬಾಡಿಗೆ ಮಿತಿಮೀರಿರುವ ನಡುವೆ ಬಡವರ್ಗದವರಿಗೆ ಅನುಕೂಲವಾಗುವಲ್ಲಿ ನಗರಕ್ಕೆ ಹೊಂದಿಕೊಂಡು ಸುಸಜ್ಜಿತ ಅಂಬೇಡ್ಕರ್‌ ಭವನ ನಿರ್ಮಾಣ ವಾಗಬೇಕು. ಅಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಹಾಗೂ ಬುದ್ಧನ ಪ್ರತಿಮೆ ಅನಾವರಣಗೊಳಿಸಬೇಕು. ಕಡೆ ಪಕ್ಷ ಮುಂದಿನ ಎ. 14ರ ಅಂಬೇಡ್ಕರ್‌ ಜಯಂತಿಯಂದಾದರು ಶಿಲಾನ್ಯಾಸ ನೆರವೇರಿಸಲಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸಂಘಟನ ಸಂಚಾಲಕ ಚಂದು ಎಲ್‌., ಮೈಸೂರು ವಿಭಾಗೀಯ ಸಂಘಟನ ಸಂಚಾಲಕ ಬಿ.ಕೆ.ವಸಂತ್‌ ಆಗ್ರಹಿಸಿದ್ದಾರೆ.

ಸಮುದಾಯದ ಕನಸು

ಬೆಳ್ತಂಗಡಿ ಹೃದಯ ಭಾಗದಲ್ಲಿ ವಿಸ್ತಾರವಾದ ಸುಸಜ್ಜಿತ ಅಂಬೇಡ್ಕರ್‌ ಭವನ ನಿರ್ಮಿಸಬೇಕೆಂಬುದೇ ಸಮುದಾಯ ಹಾಗೂ ಸಂಘಟನೆಯ ಕನಸು. ಈ ಬಗ್ಗೆ ಶಾಸಕ ಹರೀಶ್‌ ಪೂಂಜ ಭರವಸೆ ನೀಡಿದ್ದಾರೆ. ಅವರು ಕಾರ್ಯಪ್ರವೃತ್ತರಾಗಬೇಕು. -ನೇಮಿರಾಜ್‌ ಕೆ., ಪ್ರಧಾನ ಸಂಚಾಲಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಬೆಳ್ತಂಗಡಿ ತಾಲೂಕು

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next