Advertisement

ನಗರ ಜಿಲ್ಲೆಯಲ್ಲಿ ಕಸ ವಿಲೇವಾರಿಗೆ ಜಮೀನು ಕೊರತೆ

12:49 AM Aug 31, 2019 | Lakshmi GovindaRaj |

ಬೆಂಗಳೂರು: ತ್ಯಾಜ್ಯ ಮುಕ್ತ ಗ್ರಾಮಗಳನ್ನು ಸೃಷ್ಟಿಸಲು ಪಣ ತೊಟ್ಟಿರುವ ನಗರ ಜಿಲ್ಲಾ ಪಂಚಾಯಿತಿ, ಈಗ ತ್ಯಾಜ್ಯ ವಿಲೇವಾರಿಗೆ ಜಾಗದ ಸಮಸ್ಯೆ ಎದುರಿಸುತ್ತಿದೆ. ಆನೇಕಲ್‌, ದಾಸನಪುರ, ಹೆಸರುಘಟ್ಟ, ಹುರಳಿಚಿಕ್ಕನಹಳ್ಳಿ, ವಡೇರಹಳ್ಳಿ ಸೇರಿ ಹಲವೆಡೆ ಕಸ ವಿಲೇವಾರಿಗೆ ಜಾಗ ಮಂಜೂರಿಗಾಗಿ ನಗರ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸರ್ಕಾರದಿಂದ ಅನುಮತಿ ಸಿಗದ ಕಾರಣ ಜಾಗ ಗುರುತಿಸಿಯೂ ಪ್ರಯೋಜನ ಇಲ್ಲದಂತಾಗಿದೆ.

Advertisement

ನಗರದಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತಿರುವ ಕಸ ವಿಲೇವಾರಿ ಸಮಸ್ಯೆಯಿಂದ ಉಂಟಾಗುತ್ತಿರುವ ತೊಂದರೆ ಮನಗಂಡಿರುವ ಬೆಂಗಳೂರು ನಗರ ಜಿ.ಪಂ ಮುನ್ನಚ್ಚರಿಕೆ ಕ್ರಮವಾಗಿ ಗ್ರಾ.ಪಂ ಮಟ್ಟದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಮುಂದಾಗಿದೆ. ಆದರೆ, ಜಾಗದ ಕೊರತೆ ಎದುರಾಗಿರುವ ಕಾರಣ, ಯೋಜನೆ ಜಾರಿಗೆ ತೊಡಕಾಗಿದೆ.

ನಗರ ಜಿಲ್ಲೆ ವ್ಯಾಪ್ತಿಯಲ್ಲಿ 96 ಗ್ರಾ.ಪಂ.ಗಳಿದ್ದು, ಹಲವು ಪಂಚಾಯಿತಿಗಳಲ್ಲಿ ಸಮರ್ಪಕ ಕಸ ವಿಲೇವಾರಿ ಆಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಈ ಹಿಂದೆ 37 ಗ್ರಾ.ಪಂ.ಗಳಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಸಂಬಂಧ ಜಾಗ ಗುರುತಿಸಿತ್ತು. ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆ, ದೊಡ್ಡಜಾಲ, ಚಿಕ್ಕಜಾಲ, ಬೆಟ್ಟಹಲಸೂರು, ಸಿಂಗನಾಯಕನಹಳ್ಳಿ ಮತ್ತು ಶಾಂತಿಪುರದಲ್ಲಿ ಮಾತ್ರ ಕಸ ವಿಲೇವಾರಿಗಾಗಿ ಸರ್ಕಾರ ಭೂಮಿ ಮಂಜೂರು ಮಾಡಿತ್ತು. ಆದರೆ ಇನ್ನೂ 90 ಕಡೆಗಳಲ್ಲಿ ಜಾಗದ ಸಮಸ್ಯೆ ಇದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಾಗ ಗುರುತಿಸುವ ಭರವಸೆ: ಇತ್ತೀಚಿಗೆ ನಡೆದ ಜಿ.ಪಂ ಸಾಮಾನ್ಯ ಸಭೆಯಲ್ಲಿ ಕಸ ವಿಲೇವಾರಿ ಸಮಸ್ಯೆ ಚರ್ಚೆಗೆ ಬಂದಿತ್ತು. ಆ ವೇಳೆ ಸದಸ್ಯರು ಕೆಲವು ಕಡೆಗಳಲ್ಲಿ ಸರ್ಕಾರಿ ಜಾಗವಿದ್ದು, ಅದನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದರು. ಯಾವ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯಿದೆ ಎಂಬ ಮಾಹಿತಿ ನೀಡಿದರೆ ತಕ್ಷಣ ಜಾಗ ಗುರುತಿಸಲು ಕ್ರಮಕೈಗೊಳ್ಳುವುದಾಗಿ ಡೀಸಿ ಭರವಸೆ ನೀಡಿದ್ದರು.

ಸ್ವಚ್ಛತಾ ಯೋಜನೆಗಳಿಗೆ ತೊಡಕು: ಘನತ್ಯಾಜ್ಯ ಘಟಕಗಳನ್ನು ತೆರೆದು ಗ್ರಾಮ ಪಂಚಾಯಿತಿಗೆ ಆದಾಯ ತಂದುಕೊಡುವ ಯೋಜನೆಗಳನ್ನು ಜಿಲ್ಲಾಡಳಿತ ರೂಪಿಸಿದೆ. ಆದರೆ ಯೋಜನೆ ಜಾರಿಗೆ ಭೂಮಿ ಬೇಕು. ಶಾಂತಿಪುರ, ಬೆಟ್ಟಹಲಸೂರು, ರಾಜಾನುಕುಂಟೆ, ಚಿಕ್ಕಜಾಲ ಸೇರಿ ಕೆಲವೆಡೆ ಕಸದಿಂದ ರಸ ತೆಗೆಯುವ ಕೆಲಸ ನಡೆದಿದೆ. ಚಿಕ್ಕಜಾಲದಲ್ಲಿ ಕಸದಿಂದ ಸಾವಯವ ಗೊಬ್ಬರ ತಯಾರಿಸುತ್ತಿರುವುದು ಜನರ ಮೆಚ್ಚುಗೆ ಗಳಿಸಿದೆ.

Advertisement

ಇಂತಹ ಯಶಸ್ವಿ ಯೋಜನೆಗಳ ಜಾರಿಗೆ ಭೂಮಿ ಬೇಕಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಜಾಗದ ಸಮಸ್ಯೆ ಎದುರಾಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ವಚ್ಛತಾ ಯೋಜನೆಗಳ ಜಾರಿಗೆ ತೊಡಕಾಗಿದೆ ಎಂದು ನಗರ ಜಿಲ್ಲಾಡಳಿತದ ಸ್ವಚ್ಛಭಾರತ್‌ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಮರ್ಪಕ ಕಸ ವಿಲೇವಾರಿಗಾಗಿ ಜಮೀನು ನೀಡುವಂತೆ ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಜಿ.ಪಂ ಸಾಮಾನ್ಯ ಸಭೆಯಲ್ಲೂ ಚರ್ಚಿಸಿದ್ದು, ಸರ್ಕಾರ ಜಮೀನು ನೀಡುವ ಭರವಸೆ ಇದೆ.
-ಡಾ.ಸಿದ್ದರಾಮಯ್ಯ, ನಗರ ಜಿ.ಪಂ. ಉಪಕಾರ್ಯದರ್ಶಿ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next