Advertisement

ರಾಜ್ಯದಲ್ಲಿ ಕೆಎಎಸ್‌ ಅಧಿಕಾರಿಗಳ ಕೊರತೆ

12:06 AM Jun 05, 2022 | Team Udayavani |

ಬೆಂಗಳೂರು: ಕೆಎಎಸ್‌ ಅಧಿಕಾರಿಗಳನ್ನು “ಆಡಳಿತ ಪಿರಮಿಡ್‌’ನ ತಳಪಾಯದ ಇಟ್ಟಿಗೆಗಳೆಂದು ಹೇಳಲಾಗುತ್ತದೆ. ಆದರೆ ಸದ್ಯ ರಾಜ್ಯದಲ್ಲಿ ಈ ಅಧಿಕಾರಿಗಳ ಕೊರತೆ ಎದುರಾಗಿದೆ.

Advertisement

ಇದಕ್ಕೆ ಪ್ರಮುಖ ಕಾರಣ ಕರ್ನಾಟಕ ಲೋಕಸೇವಾ ಆಯೋಗದಿಂದ ಕಾಲಕಾಲಕ್ಕೆ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ನಡೆಯದೆ ಇರುವುದು.

ರಾಜ್ಯದಲ್ಲಿ 500ಕ್ಕೂ ಹೆಚ್ಚು ಕೆಎಎಸ್‌ ಅಧಿಕಾರಿಗಳು ಅಗತ್ಯವಿದ್ದು, ಇದರಲ್ಲಿ ಶೇ.30ರಷ್ಟು ಹುದ್ದೆಗಳು ಖಾಲಿಯಾಗಿವೆ. ಇದರಿಂದಾಗಿ ಒಬ್ಬ ಅಧಿಕಾರಿ ಒಂದಕ್ಕಿಂತ ಹೆಚ್ಚು ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಇದು ಆಡಳಿತದ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ.

ಪ್ರತ್ಯೇಕವಾಗಿ ಭೂಸ್ವಾಧೀನ ಅಧಿಕಾರಿಗಳು ಇಲ್ಲದ ಕಾರಣಕ್ಕೆ ಅನೇಕ ಕಡೆ ಆಯಾ ಉಪವಿಭಾಗಾಧಿಕಾರಿಗಳು ಭೂಸ್ವಾಧೀನಾಧಿಕಾರಿಯ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಮುಖ್ಯವಾಗಿ ರಸ್ತೆ, ರೈಲು, ನೀರಾವರಿ ಸೇರಿ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಭೂಸ್ವಾಧೀನಕ್ಕೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.

ಕೆಎಎಸ್‌ ಅಧಿಕಾರಿಗಳಲ್ಲಿ ಕಿರಿಯ ವೇತನ ಶ್ರೇಣಿ, ಹಿರಿಯ ವೇತನ ಶ್ರೇಣಿ, ಸೆಲೆಕ್ಷನ್‌ ಗ್ರೇಡ್‌, ಸೂಪರ್‌ಟೈಮ್‌ ಸ್ಕೇಲ್‌, ಸೀನಿಯರ್‌ ಸೂಪರ್‌ಟೈಂ ಸ್ಕೇಲ್‌ ಎಂಬ ಶ್ರೇಣಿಗಳಿರುತ್ತವೆ. ಕಿರಿಯ ವೇತನ ಶ್ರೇಣಿಯ ಅಧಿಕಾರಿಗಳು ತಹಶೀಲ್ದಾರ್‌, ಹಿರಿಯ ವೇತನ ಶ್ರೇಣಿ ಅಧಿಕಾರಿಗಳು ಉಪವಿಭಾಗಾಧಿಕಾರಿ, ಭೂಸ್ವಾಧೀನಾಧಿಕಾರಿ, ಸೆಲೆಕ್ಷನ್‌ ಗ್ರೇಡ್‌ ಅಧಿಕಾರಿಗಳು ಜಿ.ಪಂ. ಸಿಇಒಗಳಾಗಿರುತ್ತಾರೆ. ಸದ್ಯ ಸೆಲೆಕ್ಷನ್‌ ಗ್ರೇಡ್‌ನ‌ಲ್ಲಿ ಕಳೆದ 8-10 ವರ್ಷಗಳಿಂದ ಶೇ.50ರಿಂದ 100ರಷ್ಟು ಹುದ್ದೆಗಳು ಖಾಲಿ ಇವೆ. ಇವುಗಳಿಗೆ ಕೆಎಎಸ್‌ಯೇತರ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಇದರಿಂದ ಆಡಳಿತಾತ್ಮಕ ಸಮಸ್ಯೆಗಳು ಉಂಟಾ ಗುತ್ತವೆ. ಸೂಪರ್‌ಟೈಂ ಹಾಗೂ ಸೀನಿಯರ್‌ ಸೂಪರ್‌ಟೈಂ ಸ್ಕೇಲ್‌ನ ಐದಾರು ಹುದ್ದೆಗಳಿಗೂ ಸಮಸ್ಯೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

ಪರಿಹಾರವೇನು?
ಹಲವು ವರ್ಷಗಳಿಂದ ಕೆಎಎಸ್‌ ಅಧಿಕಾರಿಗಳ ನೇಮಕಾತಿ ನಿಯಮಿತ ವಾಗಿ ನಡೆದಿಲ್ಲ. ನಡೆದವುಗಳಲ್ಲೂ ಅಕ್ರಮ, ಭ್ರಷ್ಟಾಚಾರವಾಗಿ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಕೆಪಿಎಸ್ಸಿ ಅಕ್ರಮಗಳಿಂದಾಗಿ ಕೆಎಎಸ್‌ ಆಗಿದ್ದ ಅನೇಕರು ಹುದ್ದೆಗಳನ್ನು ಕಳೆದುಕೊಂಡಿದ್ದು, ಕೆಲವರು ಹಿಂಭಡ್ತಿ ಪಡೆದರು. ಇದರ ನೇರ ಪರಿಣಾಮ ಆಡಳಿತ ವ್ಯವಸ್ಥೆ ಮೇಲೆ ಆಗುತ್ತದೆ. ಇಂದು ಕೆಎಎಸ್‌ ಅಧಿಕಾರಿಗಳ ಕೊರತೆ ಇರುವುದಕ್ಕೂ ಇದೇ ಪ್ರಮುಖ ಕಾರಣ.

ಭಡ್ತಿ ಪ್ರಮಾಣ ಹೆಚ್ಚಾಗಬೇಕು
ಸದ್ಯ ರಾಜ್ಯದಲ್ಲಿ ಕೆಎಎಸ್‌ನಿಂದ ಐಎಎಸ್‌ಗೆ ಭಡ್ತಿ ನೀಡುವ ಪ್ರಮಾಣ 1:3 ಇದೆ. ಈ ಪ್ರಮಾಣ ಶೇ.50ರಷ್ಟು ಆದರೆ, ಐಎಎಸ್‌ಗೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಸಾಧ್ಯವಾಗುತ್ತದೆ. ಈಗಾಗಲೇ ಕೆಲವು ರಾಜ್ಯ ಗಳಲ್ಲಿ ಈ ವ್ಯವಸ್ಥೆ ಇದೆ. ನಮ್ಮ ರಾಜ್ಯದಲ್ಲೂ ಇದು ಜಾರಿಗೆ ಬರಬೇಕು. ಅಲ್ಲದೆ, ಯಾವುದಾದರೂ ಕಾರಣಕ್ಕೆ ಭಡ್ತಿ ಪ್ರಕ್ರಿಯೆ ವಿಳಂಬವಾದರೆ, ಕೆಎಎಸ್‌ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಹುದ್ದೆಗೆ ಪರಿಗಣಿಸುವ ವ್ಯವಸ್ಥೆ ತಮಿಳುನಾಡು, ಪಶ್ಚಿಮ ಬಂಗಾಲದಲ್ಲಿದೆ. ಈ ಬಗ್ಗೆ ನಮ್ಮಲ್ಲೂ ಪರಿಶೀಲಿಸ ಬಹುದು ಎಂಬುದು ಕೆಎಎಸ್‌ ಅಧಿಕಾರಿಗಳ ಸಂಘದ ಅಭಿಪ್ರಾಯವಾಗಿದೆ.

ಹಿರಿಯ ವೇತನ ಶ್ರೇಣಿಯ ಕೆಎಎಸ್‌ ಅಧಿಕಾರಿಗಳನ್ನು ಒಂದು ಬಾರಿಗೆ ತಾತ್ಕಾಲಿಕವಾಗಿ ಆಯ್ಕೆ ಶ್ರೇಣಿ ವೃಂದದ ಹುದ್ದೆಗೆ ಪದೋನ್ನತಿ ನೀಡಿರುವ ಸರಕಾರದ ತೀರ್ಮಾನ ಸ್ವಾಗತಾರ್ಹ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ, ಕೆಎಎಸ್‌ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಸಂಘದ ಆಗ್ರಹವಾಗಿದೆ.
-ಡಾ| ರವಿ ಎಂ. ತಿರ್ಲಾಪುರ, ಅಧ್ಯಕ್ಷರು, ರಾಜ್ಯ ಕೆಎಎಸ್‌ ಅಧಿಕಾರಿಗಳ ಸಂಘ

– ರಫೀಕ್‌ ಅಹ್ಮದ್‌

 

Advertisement

Udayavani is now on Telegram. Click here to join our channel and stay updated with the latest news.

Next